ತೆಹಲ್ಕಾ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ ಅವರನ್ನು ಗೋವಾ ನ್ಯಾಯಾಲಯ ಖುಲಾಸೆಗೊಳಿಸಿದ್ದೇಕೆ?

ಸಂತ್ರಸ್ತೆಯ ಹೇಳಿಕೆ ವಿರೋಧಾಭಾಸಗಳಿಂದ ಕೂಡಿದ್ದು ಆಕೆ ಹೇಳಿಕೆಗಳನ್ನು ಬದಲಿಸುತ್ತಿದ್ದು ಅವು ದೋಷಯುಕ್ತವಾಗಿವೆ ಮತ್ತು ಆ ಹೇಳಿಕೆಗಳಲ್ಲಿ ಆತ್ಮವಿಶಾಸ ಕಾಣುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ.
ತೆಹಲ್ಕಾ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ ಅವರನ್ನು ಗೋವಾ ನ್ಯಾಯಾಲಯ ಖುಲಾಸೆಗೊಳಿಸಿದ್ದೇಕೆ?
Tarun Tejpal

ಮಹಿಳಾ ಸಹೋದ್ಯೋಗಿ ವಿರುದ್ಧ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ತೆಹಲ್ಕಾ ಪತ್ರಿಕೆ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ ಅವರನ್ನು ಗೋವಾದ ಸೆಷನ್ಸ್‌ ನ್ಯಾಯಾಲಯ ಮೇ 21ರಂದು ಖುಲಾಸೆಗೊಳಿಸಿತ್ತು. ತನಿಖೆಯಲ್ಲಿ ಹಲವು ಲೋಪಗಳಿದ್ದು ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ನಿರ್ಣಾಯಕ ಸಾಕ್ಷ್ಯಗಳನ್ನು ನೀಡಲು ಪ್ರಾಸಿಕ್ಯೂಷನ್‌ ವಿಫಲವಾಗಿದೆ ಎಂದು ನ್ಯಾಯಾಧೀಶೆ ಕ್ಷಮಾ ಜೋಶಿ ಆ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದ್ದರು.

ತೀರ್ಪಿನ ಪ್ರತಿ ಮೇ 25 ರಂದು ಲಭ್ಯವಾಗಿದ್ದು ಅದರ ಪ್ರಕಾರ ಸಂತ್ರಸ್ತೆಯ ಹೇಳಿಕೆಗಳಲ್ಲಿ ಬದಲಾವಣೆಗಳಾಗಿದ್ದು ವಸ್ತುತಃ ವಿರೋಧಾಭಾಸ ಕಂಡುಬಂದಿದೆ. ಲೋಪಯುಕ್ತ ಮತ್ತು ಬದಲಾಗುತ್ತಿರುವ ಹೇಳಿಕೆಗಳಲ್ಲಿ ಆತ್ಮವಿಶ್ವಾಸ ಕಂಡುಬರುತ್ತಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ತೀರ್ಪಿನ ಪ್ರಮುಖ ಅಂಶಗಳು

  • ಸಂತ್ರಸ್ತೆಯ ಹೇಳಿಕೆಯಲ್ಲಿ ವಿರೋಧಾಭಾಸಗಳಿದ್ದು ಆ ವಿರೋಧಾಭಾಸಗಳನ್ನು ತನಿಖಾಧಿಕಾರಿ ಪ್ರಶ್ನಿಸಿಲ್ಲ.

  • ಪ್ರಾಸಿಕ್ಯೂಷನ್‌ ಸಲ್ಲಿಸಿರುವ ಸಾಕ್ಷ್ಯಗಳಲ್ಲಿ ವ್ಯತ್ಯಾಸಗಳಿದ್ದು ಪ್ರತಿವಾದಿಗಳು ಉದ್ದೇಶಪೂರ್ವಕ ಎಂದು ಹೇಳಿರುವ ಸಾಕ್ಷ್ಯಗಳಲ್ಲಿ ವ್ಯತ್ಯಾಸ ಕಂಡು ಬಂದಿದೆ.

  • ಸಿಸಿಟಿವಿ ದೃಶ್ಯಾವಳಿಗಳಿಗೆ ಸಂಬಂಧಿಸಿದ ನಿರ್ಣಾಯಕ ಪುರಾವೆಗಳು ನಾಪತ್ತೆಯಾಗಿದ್ದು ತನಿಖಾಧಿಕಾರಿ ಅವುಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿಲ್ಲ.

  • ಸಾಕ್ಷ್ಯ ಹೇಳಲು ಒಪ್ಪಿದ್ದರೂ ಕೆಲವು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಲ್ಲ.

  • ತೆಹಲ್ಕ ಸರ್ವರ್‌ನಲ್ಲಿದ್ದ ಪ್ರಾಸಿಕ್ಯೂಷನ್‌ ಮತ್ತು ಪ್ರತಿವಾದಿ ಸಾಕ್ಷಿಗಳ ನಡುವಿನ ಇಮೇಲ್‌ ವಿನಿಮಯವನ್ನು ತನಿಖಾಧಿಕಾರಿ ಸಂಗ್ರಹಿಸಿಲ್ಲ.

  • ಮೊದಲ ಮಹಡಿಯ ಸಿಸಿಟಿವಿ ದೃಶ್ಯಾವಳಿಗಳ ಎಲ್ಲಾ ಕುರುಹುಗಳನ್ನು ಉದ್ದೇಶಪೂರ್ವಕವಾಗಿ ನಾಶಪಡಿಸುವ ಸಲುವಾಗಿ ಮೊದಲ ಮಹಡಿಯದ್ದಲ್ಲದ ದೃಶ್ಯಾವಳಿಗಳನ್ನು ಡೌನ್‌ಲೋಡ್ ಮಾಡಲು ತನಿಖಾಧಿಕಾರಿ ನಿರ್ದೇಶನ ನೀಡಿದ್ದಾರೆ.

  • ತನಿಖೆ ನಡೆಯುವ ಸಂದರ್ಭದಲ್ಲಿ ಆರೋಪಿಯ ಮೂಲಭೂತ ಹಕ್ಕಿಗೆ ಸಂಬಂಧಿಸಿದಂತೆ ತನಿಖಾಧಿಕಾರಿ ಹಲವು ಲೋಪ ಎಸಗಿರುವಂತೆ ತೋರುತ್ತದೆ.

  • ವಾಸ್ತವವಾಗಿ ಆರೋಪಿಸಲಾದ ಅಪರಾಧದ ಕುರಿತಂತೆ ಸಂತ್ರಸ್ತೆಗೆ ಕೆಲ ಮೂಲಭೂತ ಪ್ರಶ್ನೆಗಳನ್ನು ಕೇಳಲು ತನಿಖಾಧಿಕಾರಿ ವಿಫಲರಾಗಿದ್ದಾರೆ.

  • ತೇಜ್‌ಪಾಲ್‌ ಮತ್ತು ಸಂತ್ರಸ್ತೆ ಇದ್ದ ಲಿಫ್ಟ್‌ ಕಾರ್ಯವೈಖರಿ ಕುರಿತಂತೆಯೂ ನ್ಯಾಯಾಲಯ ಹಲವು ಅನುಮಾನಗಳನ್ನು ವ್ಯಕ್ತಪಡಿಸಿದೆ.

ಈ ಮಧ್ಯೆ ತೇಜಪಾಲ್‌ ಖುಲಾಸೆ ಪ್ರಶ್ನಿಸಿ ಗೋವಾ ಸರ್ಕಾರ ಬಾಂಬೆ ಹೈಕೋರ್ಟ್‌ನ ಗೋವಾ ಪೀಠಕ್ಕೆ ಮಂಗಳವಾರ ಅರ್ಜಿ ಸಲ್ಲಿಸಿದೆ. ತೇಜಪಾಲ್‌ ಅವರನ್ನು 2013ರ ನವೆಂಬರ್‌ನಲ್ಲಿ ಬಂಧಿಸಲಾಗಿತ್ತು. ಅವರು 2014 ರ ಜುಲೈನಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಅವರ ವಿರುದ್ಧ 2017 ರಲ್ಲಿ ವಿಚಾರಣೆ ಆರಂಭವಾಗಿತ್ತು. ಅದನ್ನು ತೆಜ್‌ಪಾಲ್ ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಮನವಿಯನ್ನು ಹೈಕೋರ್ಟ್‌ ರದ್ದುಪಡಿಸಿದ್ದರಿಂದ ಅವರು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು. 2019ರ ಆಗಸ್ಟ್‌ನಲ್ಲಿ ಪ್ರಕರಣದಲ್ಲಿ ಮಧ್ಯಪ್ರವೇಶಿಸದೇ ಇರಲು ಸುಪ್ರೀಂಕೋರ್ಟ್‌ ನಿರ್ಧರಿಸಿ ಅವರ ಅರ್ಜಿಯನ್ನು ತಿರಸ್ಕರಿಸಿತು. ಆ ನಂತರ ವಿಚಾರಣೆ ನಡೆದು ಮೇ 21 ರಂದು ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಿತ್ತು.

Related Stories

No stories found.
Kannada Bar & Bench
kannada.barandbench.com