ತೆರಿಗೆ ವಂಚನೆ ಪ್ರಕರಣ: ಎರಡು ವರ್ಷ ವಿದೇಶ ಪ್ರವಾಸಕ್ಕೆ ತೆರಳಲು ಡಿ ಕೆ ಶಿವಕುಮಾರ್‌ಗೆ ಅನುಮತಿಸಿದ ವಿಶೇಷ ನ್ಯಾಯಾಲಯ

ಮುಂದಿನ ಎರಡು ವರ್ಷಗಳಲ್ಲಿ ಅಮೆರಿಕಾ, ಯುರೋಪ್‌ ರಾಷ್ಟ್ರಗಳು, ಇಂಗ್ಲೆಂಡ್‌, ಆಸ್ಟ್ರೇಲಿಯಾ, ರಷ್ಯಾ ಮತ್ತು ಅರಬ್‌ ರಾಷ್ಟ್ರಗಳಲ್ಲಿ ಪ್ರವಾಸ ಕೈಗೊಳ್ಳಲು ನ್ಯಾಯಾಲಯ ಅನುಮತಿಸಿದೆ.
ತೆರಿಗೆ ವಂಚನೆ ಪ್ರಕರಣ: ಎರಡು ವರ್ಷ ವಿದೇಶ ಪ್ರವಾಸಕ್ಕೆ ತೆರಳಲು ಡಿ ಕೆ ಶಿವಕುಮಾರ್‌ಗೆ ಅನುಮತಿಸಿದ ವಿಶೇಷ ನ್ಯಾಯಾಲಯ
Published on

ತೆರಿಗೆ ವಂಚನೆ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರಿಗೆ ವಿಧಿಸಿದ್ದ ಜಾಮೀನು ಷರತ್ತಿನಲ್ಲಿ ಸಡಿಲಿಕೆ ಮಾಡಿರುವ ಬೆಂಗಳೂರಿನ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಎರಡು ವರ್ಷ ವಿದೇಶ ಪ್ರವಾಸ ಕೈಗೊಳ್ಳಲು ಈಚೆಗೆ ಅನುಮತಿಸಿದೆ.

ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ ಕೆ ಎನ್‌ ಶಿವಕುಮಾರ್‌ ಅವರು ವಿವಿಧ ದೇಶಗಳಿಗೆ ಅಧಿಕೃತ ಉದ್ಯಮ ಪ್ರವಾಸ ಕೈಗೊಳ್ಳಲು ಕೆಲವು ಷರತ್ತು ವಿಧಿಸಿ, ಶಿವಕುಮಾರ್‌ ಅವರಿಗೆ ಅನುಮತಿಸಿದ್ದಾರೆ.

K N Shivakumar, Magistrate MP/MLA Special court
K N Shivakumar, Magistrate MP/MLA Special court

ಮುಂದಿನ ಎರಡು ವರ್ಷಗಳಲ್ಲಿ ಅಮೆರಿಕಾ, ಯುರೋಪ್‌ ರಾಷ್ಟ್ರಗಳು, ಇಂಗ್ಲೆಂಡ್‌, ಆಸ್ಟ್ರೇಲಿಯಾ, ರಷ್ಯಾ ಮತ್ತು ಅರಬ್‌ ರಾಷ್ಟ್ರಗಳಲ್ಲಿ ಪ್ರವಾಸ ಕೈಗೊಳ್ಳಲು ನ್ಯಾಯಾಲಯ ಅನುಮತಿಸಿದೆ.

ಪ್ರತಿ ಬಾರಿಯೂ ವಿದೇಶಕ್ಕೆ ತೆರಳುವಾಗ ಶಿವಕುಮಾರ್‌ ಅವರು ತಮ್ಮ ಪ್ರವಾಸ ವಿವರವನ್ನು ತನಿಖಾ ಸಂಸ್ಥೆಗೆ ಸಲ್ಲಿಸಬೇಕು. ನ್ಯಾಯಾಲಯ ನಿರ್ದೇಶಿಸಿದಾಗ ವಿಚಾರಗೆ ಹಾಜರಾಗಬೇಕು. ಈ ಷರತ್ತುಗಳನ್ನು ಶಿವಕುಮಾರ್‌ ಉಲ್ಲಂಘಿಸಿದರೆ ವಿದೇಶ ಪ್ರವಾಸಕ್ಕೆ ತೆರಳಲು ಅನುಮತಿಸಿರುವ ಆದೇಶ ರದ್ದುಪಡಿಸಲು ಪ್ರಾಸಿಕ್ಯೂಷನ್‌ ಮನವಿ ಮಾಡಬಹುದು ಎಂದು ನ್ಯಾಯಾಲಯ ಆದೇಶಿಸಿದೆ.

ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಅಹ್ಮದ್‌ ಪಟೇಲ್‌ ಅವರನ್ನು ರಾಜ್ಯಸಭೆ ಚುನಾವಣೆಯಲ್ಲಿ ಸೋಲಿಸಿ, ಗಾಂಧಿ ಕುಟುಂಬಕ್ಕೆ ಮುಖಭಂಗ ಮಾಡುವ ಬಿಜೆಪಿಯ ಪ್ರಯತ್ನಕ್ಕೆ ತಡೆಯೊಡ್ಡಲು 2017ರ ಆಗಸ್ಟ್‌ನಲ್ಲಿ ಗುಜರಾತ್‌ನ ಕಾಂಗ್ರೆಸ್‌ ಶಾಸಕರಿಗೆ ಬೆಂಗಳೂರಿನ ಬಿಡದಿ ಸಮೀಪದ ಈಗಲ್ಟನ್‌ ರೆಸಾರ್ಟ್‌ನಲ್ಲಿ ನೆರವು ಕಲ್ಪಿಸಲಾಗಿತ್ತು.  ಈ ಉಸ್ತುವಾರಿ ವಹಿಸಿಕೊಂಡಿದ್ದ ಶಿವಕುಮಾರ್‌ ಅವರನ್ನು ಗುರಿಯಾಗಿಸಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಡಿ ಕೆ ಶಿವಕುಮಾರ್‌ ಮತ್ತು ಅವರ ಬೆಂಬಲಿಗರಿಗೆ ಸೇರಿದ ಬೆಂಗಳೂರು ಮತ್ತು ನವದೆಹಲಿಯ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿ, ಶೋಧ ನಡೆಸಿದ್ದರು.

ಇದರ ಮುಂದುವರಿದ ಭಾಗವಾಗಿ ತೆರಿಗೆ ವಂಚನೆ ಆರೋಪದ ಮೇಲೆ ಡಿ ಕೆ ಶಿವಕುಮಾರ್‌, ಶರ್ಮಾ ಟ್ರಾನ್ಸ್‌ಪೋರ್ಟ್‌ನ ಸುನೀಲ್‌ ಕುಮಾರ್‌ ಶರ್ಮಾ ಮತ್ತು ಅವರ ಸಹೋದರ ಸಚಿನ್‌ ನಾರಾಯಣ್‌, ಆಂಜನೇಯ ಹನುಮಂತಯ್ಯ ಮತ್ತು ಎನ್‌ ರಾಜೇಂದ್ರ ವಿರುದ್ಧ ಆದಾಯ ತೆರಿಗೆ ಕಾಯಿದೆ ಸೆಕ್ಷನ್‌ಗಳಾದ 276C(1), 277, 278 ಮತ್ತು ಐಪಿಸಿ ಸೆಕ್ಷನ್‌ಗಳಾದ 193, 199 ಮತ್ತು 120ಬಿ ಅಡಿ ಪ್ರಕರಣ ದಾಖಲಿಸಲಾಗಿತ್ತು.

ಈಗಲ್ಟಟನ್‌ ರೆಸಾರ್ಟ್‌ನಲ್ಲಿ ಶೋಧ ನಡೆಸುತ್ತಿದ್ದಾಗ ಶಿವಕುಮಾರ್‌ ಅವರು ಪ್ರಮುಖ ಸಾಕ್ಷಿಯನ್ನು ನಾಶಪಡಿಸಿದ್ದಾರೆ ಎಂದು ಐಟಿ ಇಲಾಖೆ ಆರೋಪಿಸಿತ್ತು. ಆದರೆ, ಶಿವಕುಮಾರ್‌ ಅವರು ಆರೋಪವು ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದರು. ಈ ಪ್ರಕರಣದಲ್ಲಿ ಡಿ ಕೆ ಶಿವಕುಮಾರ್‌ಗೆ ಜಾಮೀನು ಮಂಜೂರು ಮಾಡಿದ್ದ ನ್ಯಾಯಾಲಯವು ಅನುಮತಿ ಇಲ್ಲದೇ ದೇಶ ತೊರೆಯುವಂತಿಲ್ಲ ಎಂಬ ಷರತ್ತು ವಿಧಿಸಿತ್ತು.

ಇದರ ಭಾಗವಾಗಿ ವೈಯಕ್ತಿಕ ಉದ್ಯಮ ಮತ್ತು ಸರ್ಕಾರದ ಮಂತ್ರಿಯಾಗಿ ವಿದೇಶಕ್ಕೆ ತೆರಳಲು ಶಿವಕುಮಾರ್‌ ಅವರು ಅನುಮತಿ ಕೋರಿದ್ದರು.

“ಆರೋಪಿಯು ತನ್ನ ಉದ್ಯಮದ ಅಭಿವೃದ್ಧಿ ಮತ್ತು ಬೆಳವಣಿಗೆಯ ದೃಷ್ಟಿಯಿಂದ ಮತ್ತು ನೀರಾವರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದು, ವಿವಿಧ ಯೋಜನೆಯ ಭಾಗವಾಗಿ ಹಲವು ದೇಶಗಳಿಗೆ ಭೇಟಿ ನೀಡುವ ಅಗತ್ಯವಿದೆ. ಈ ನೆಲೆಯಲ್ಲಿ ವಿದೇಶಕ್ಕೆ ಅನುಮತಿ ಕೋರಿರುವ ಆಧಾರದಲ್ಲಿ ಸತ್ಯಾಂಶ ಮತ್ತು ಪ್ರಾಮಾಣಿಕತೆ ಇದ್ದಂತೆ ಕಾಣುತ್ತಿದೆ” ಎಂದು ನ್ಯಾಯಾಲಯವು ಮೇ 15ರ ಆದೇಶದಲ್ಲಿ ಹೇಳಿದೆ.

Also Read
ಸಿಬಿಡಿ ವ್ಯಾಪ್ತಿಯಲ್ಲಿ ಹೈಕೋರ್ಟ್‌ ಸ್ಥಳಾಂತರಕ್ಕೆ ಭೂಮಿ ಹುಡುಕಾಟ ಮಾಡಲಾಗುತ್ತಿದೆ: ಡಿಸಿಎಂ ಡಿ ಕೆ ಶಿವಕುಮಾರ್‌

ಇದೇ ಪ್ರಕರಣದಲ್ಲಿ ಆರೋಪಿಯಾಗಿರುವ ಇನ್ನೊಬ್ಬ ವ್ಯಕ್ತಿಗೆ ಎಂಟು ತಿಂಗಳು ವಿದೇಶ ಪ್ರವಾಸ ಕೈಗೊಳ್ಳಲು ಅನುಮತಿಸಲಾಗಿತ್ತು. ಹೀಗಾಗಿ, ಶಿವಕುಮಾರ್‌ಗೆ ಅನುಮತಿ ನಿರಾಕರಿಸಲು ಸಕಾರಣವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಹಾಲಿ ಪ್ರಕರಣದಲ್ಲಿ ಇಬ್ಬರು ಆರೋಪಿಗಳು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ, ಪ್ರಕರಣಕ್ಕೆ ತಡೆಯಾಜ್ಞೆ ತಂದಿರುವುದರಿಂದ ಸರ್ವೋಚ್ಚ ನ್ಯಾಯಾಲಯವು ಮುಂದಿನ ಆದೇಶ ಮಾಡುವವರೆಗೆ ವಿಚಾರಣೆಯಲ್ಲಿ ಶಿವಕುಮಾರ್‌ ಖುದ್ದಾಗಿ ಭಾಗವಹಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.

2022ರ ಮಾರ್ಚ್‌ 28ರಿಂದ ಏಪ್ರಿಲ್‌ 3ರವರೆಗೆ ದುಬೈಗೆ ತೆರಳಲು ಈ ಹಿಂದೆ ನ್ಯಾಯಾಲಯ ಅನುಮತಿಸಿತ್ತು.

Attachment
PDF
Income Tax Department Vs D K Shivakumar & others
Preview
Kannada Bar & Bench
kannada.barandbench.com