ಕಟ್ಟಡಕ್ಕೆ ಸ್ವಾಧೀನಾನುಭವ ಪತ್ರ ನೀಡಿದ ನಂತರವಷ್ಟೆ ತೆರಿಗೆ ವಿಧಿಸಬಹುದು: ಹೈಕೋರ್ಟ್‌

ಅರ್ಜಿದಾರರು ಒಸಿಗಾಗಿ ಮನವಿ ಸಲ್ಲಿಸಿದ್ದರೂ ಪಾಲಿಕೆ ಅದನ್ನು ಸಕಾಲದಲ್ಲಿ ಪರಿಗಣಿಸದೆ ವಿಳಂಬ ಮಾಡಿದೆ. ಕಟ್ಟಡ ಪೂರ್ಣಗೊಂಡ ಬಳಿಕ ಒಸಿ ವಿತರಣೆ ನಂತರವೇ ತೆರಿಗೆ ವಿಧಿಸಬಹುದೇ ಹೊರತು ಮುಂಚಿತವಾಗಿ ಅಲ್ಲ ಎಂದ ನ್ಯಾಯಾಲಯ.
Karnataka HC and Justice Suraj Govindaraj
Karnataka HC and Justice Suraj Govindaraj
Published on

ನಿರ್ಮಾಣ ಕಾರ್ಯ ಪೂರ್ಣಗೊಳಿಸಿದ ನಂತರ ಕಟ್ಟಡಕ್ಕೆ ಸ್ವಾಧೀನಾನುಭವ ಪತ್ರ (ಒಸಿ) ನೀಡಿದ ನಂತರವಷ್ಟೇ ಆ ಕಟ್ಟಡಕ್ಕೆ ತೆರಿಗೆ ವಿಧಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ. ಸ್ವಾಧೀನಾನುಭವ ಪತ್ರ ನೀಡುವ ಮುನ್ನವೇ ಹಿಂದಿನ ದಿನಾಂಕದಿಂದ ತೆರಿಗೆ ಪಾವತಿಸುವಂತೆ ಬಿಬಿಎಂಪಿ ನೀಡಿದ್ದ ನೋಟಿಸ್ ಅನ್ನು ಹೈಕೋರ್ಟ್‌ ರದ್ದುಗೊಳಿಸಿದೆ.

ಮೆಸರ್ಸ್ ಬಿ ಎಂ ಹ್ಯಾಬಿಟೇಟ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು. ಬಿಬಿಎಂಪಿ 2018ರ ಫೆಬ್ರವರಿ 15ರಂದು ನೀಡಿದ್ದ ನೋಟಿಸ್ ಅನ್ನು ನ್ಯಾಯಾಲಯ ರದ್ದುಗೊಳಿಸಿದೆ. 2011ರ ಏಪ್ರಿಲ್‌ 25ರಿಂದ ಅನ್ವಯವಾಗುವಂತೆ ಅರ್ಜಿದಾರರಿಂದ ತೆರಿಗೆ ಸ್ವೀಕರಿಸುವಂತೆ ಆದೇಶಿಸಿದೆ.

ಅರ್ಜಿದಾರರ ಪರ ವಕೀಲರು, ಕಟ್ಟಡ ನಿರ್ಮಾಣ ಕಾರ್ಯವನ್ನು 2010ರಲ್ಲಿ ಪೂರ್ಣಗೊಳಿಸಲಾಗಿದೆ. ಆದರೆ ಮಲ್ಟಿಫ್ಲೆಕ್ಸ್ ನಡೆಸಲು ಜಿಲ್ಲಾಧಿಕಾರಿಗಳು ಎನ್‌ಒಸಿ ವಿತರಿಸುವುದು ಮತ್ತು ಆಗ್ನಿ ಶಾಮಕ ದಳದ ಅನುಮೋದನೆ ಸಿಗುವುದು ತಡವಾಗಿದೆ. 2010ರ ಜುಲೈ 5ರಂದು ಸ್ವಾಧೀನಾನುಭವ ಪತ್ರ ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ, ಅದನ್ನು ಪಾಲಿಕೆ ಪರಿಗಣಿಸಿರಲಿಲ್ಲ. ಹೀಗಾಗಿ, 2010ರ ಡಿಸೆಂಬರ್‌ 2ರಂದು ಮತ್ತೊಂದು ಅರ್ಜಿ ಸಲ್ಲಿಸಲಾಗಿತ್ತು ಎಂದು ವಿವರಿಸಿದರು.

ಆನಂತರ ಪಾಲಿಕೆ ಅಧಿಕಾರಿಗಳು ಕಟ್ಟಡವನ್ನು ಪರಿಶೀಲನೆ ನಡೆಸಿ, 2011ರ ಏಪ್ರಿಲ್‌ 25ಕ್ಕೆ ಒಸಿ ವಿತರಿಸಿದ್ದಾರೆ. ನಿಯಮದಂತೆ ಆಸ್ತಿ ತೆರಿಗೆಯನ್ನು ಕಟ್ಟಡಕ್ಕೆ ಒಸಿ ನೀಡಿದ ನಂತರ ವಿತರಿಸಬೇಕು. ಆದರೆ, ಪಾಲಿಕೆ ಹಿಂದಿನ ದಿನಾಂಕದಿಂದಲೇ ವಿತರಣೆ ಮಾಡುವಂತೆ ಡಿಮ್ಯಾಂಡ್ ನೋಟಿಸ್ ನೀಡಿದೆ. ಅದನ್ನು ರದ್ದುಗೊಳಿಸಬೇಕು ಎಂದು ಪೀಠವನ್ನು ಕೋರಿದರು.

ಆದರೆ, ಪಾಲಿಕೆ ಪರ ವಕೀಲರು, ಅರ್ಜಿದಾರರು ಕಟ್ಟಡ ನಿರ್ಮಾಣ ಪೂರ್ಣಗೊಂಡಿರುವ ದಿನಾಂಕವನ್ನು ತಪ್ಪಾಗಿ ನಮೂದಿಸಿದ್ದಾರೆ. ಏಕೆಂದರೆ ಕಟ್ಟಡ ನಿರ್ಮಾಣಕ್ಕೆ ನೀಡಲಾಗಿದ್ದ ನಕ್ಷೆ ಅನುಮೋದನೆ ದಿನಾಂಕ 2008ರ ಜನವರಿ 17ರವರೆಗೆ ಮಾತ್ರ ಚಾಲ್ತಿಯಲ್ಲಿತ್ತು. ಹೀಗಾಗಿ, ಕಟ್ಟಡ ನಿರ್ಮಾಣ ಕಾರ್ಯ 2008ರಲ್ಲೇ ಪೂರ್ಣಗೊಂಡಿದೆ ಎಂದು ವಾದಿಸಿದ್ದರು.

ವಾದ-ಪ್ರತಿವಾದ ಆಲಿಸಿದ ಬಳಿಕ ಪೀಠವು ಕಟ್ಟಡಕ್ಕೆ 2010ರಲ್ಲಿ ಎನ್‌ಒಸಿ ವಿತರಿಸಲಾಗಿದೆ. ಹೀಗಾಗಿ, ಅರ್ಜಿದಾರರು ಆ ಮಾಲ್ ಅನ್ನು ಬಳಕೆ ಮಾಡಿಲ್ಲ. ಅರ್ಜಿದಾರರು ಒಸಿಗಾಗಿ ಮನವಿ ಸಲ್ಲಿಸಿದ್ದರೂ ಪಾಲಿಕೆ ಅದನ್ನು ಸಕಾಲದಲ್ಲಿ ಪರಿಗಣಿಸದೆ ವಿಳಂಬ ಮಾಡಿದೆ. ಕಟ್ಟಡ ಪೂರ್ಣಗೊಂಡ ಬಳಿಕ ಒಸಿ ವಿತರಣೆ ನಂತರವೇ ತೆರಿಗೆ ವಿಧಿಸಬಹುದೇ ಹೊರತು ಮುಂಚಿತವಾಗಿ ಅಲ್ಲ. ಹೀಗಾಗಿ, ಬಿಬಿಎಂಪಿಯ ನೋಟಿಸ್ ಅನ್ನು ರದ್ದುಗೊಳಿಸಲಾಗುತ್ತಿದೆ ಎಂದು ಆದೇಶಿಸಿದೆ.

Kannada Bar & Bench
kannada.barandbench.com