ವಿಮಾನ ನಿಲ್ದಾಣಕ್ಕೆ ಟ್ಯಾಕ್ಸಿ ಸೇವೆ: ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲು ಹೈಕೋರ್ಟ್‌ ಸೂಚನೆ

ವಿಮಾನ ನಿಲ್ದಾಣಕ್ಕೆ ಸೇವೆ ಒದಗಿಸುವ ಟ್ಯಾಕ್ಸಿಯು 6 ವರ್ಷ ಹಳೆಯದಾಗಿರಬಾರದು, 2.15 ಲಕ್ಷ ಕಿ ಮೀ ಸಂಚರಿಸಿರಬಾರದು ಎಂಬ ಷರತ್ತುಗಳನ್ನು ವಿಧಿಸಿರುವುದಕ್ಕೆ ಆಕ್ಷೇಪಿಸಲಾಗಿದೆ.
Karnataka High Court
Karnataka High Court
Published on

ಸಿಟಿ ಟ್ಯಾಕ್ಸಿ ಯೋಜನೆಯಡಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಎಲ್‌) ಪ್ರಯಾಣಿಕರಿಗಾಗಿ ಸೇವೆ ಸಲ್ಲಿಸುತ್ತಿರುವ ಟ್ಯಾಕ್ಸಿಗಳ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಎದುರಾಗಿರುವ ವಿವಾದವನ್ನು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಪ್ರಯತ್ನಿಸುವಂತೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಸಲಹೆ ನೀಡಿದೆ.

ದಿ ಬೆಂಗಳೂರು ಇಂಟರ್‌ನ್ಯಾಷನಲ್ ಆ್ಯಂಡ್ ಡೊಮೆಸ್ಟಿಕ್ ಏರ್‌ಪೋರ್ಟ್ ಲಕ್ಸುರಿ ಟ್ಯಾಕ್ಸಿ ಓನರ್ಸ್‌ ಅಂಡ್‌ ಡ್ರೈವರ್ಸ್‌ ಯೂನಿಯನ್ (ರಿ) ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಅನಂತ್ ರಾಮನಾಥ ಹೆಗಡೆ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು, ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ನಡುವೆ ಒಡಂಬಡಿಕೆ ಆಗಿದೆ. ಅದರಡಿ ಅರ್ಜಿದಾರರ ಸಂಘದ ಟ್ಯಾಕ್ಸಿಗಳು ಕಾರ್ಯಾಚರಿಸುತ್ತಿವೆ. ವಿಮಾನ ನಿಲ್ದಾಣಕ್ಕೆ ಸೇವೆ ಒದಗಿಸುವ ಟ್ಯಾಕ್ಸಿ ವಾಹನ 6 ವರ್ಷಕ್ಕಿಂತ ಹಳೆಯದಾಗಿರಬಾರದು, 2.15 ಲಕ್ಷ ಕಿ ಮೀ ಗಿಂತ ಹೆಚ್ಚು ಸಂಚರಿಸಿರಬಾರದು ಹಾಗೂ ಸಿಟಿ ಟ್ಯಾಕ್ಸಿ ಯೋಜನೆಯಂತೆ ಬೆಂಗಳೂರಿನಿಂದ 25 ಕಿ ಮೀ ವ್ಯಾಪ್ತಿಯ ಹೊರಗೆ ಸಂಚರಿಸುವಂತಿಲ್ಲ ಎಂಬ ಷರತ್ತುಗಳನ್ನು ಹಾಕಲಾಗಿದ್ದು, ಇದರಿಂದ ತೊಂದರೆ ಆಗುತ್ತಿದೆ ಎಂದರು.

ವಿಮಾನ ನಿಲ್ದಾಣ ಪ್ರಾಧಿಕಾರದ ಪರ ವಕೀಲರು “ಸುರಕ್ಷತೆ ಮತ್ತು ಗುಣಮಟ್ಟದ ಸೇವೆ ಒದಗಿಸುವ ಉದ್ದೇಶದಿಂದ ಈ ಷರತ್ತುಗಳನ್ನು ವಿಧಿಸಲಾಗಿದೆ” ಎಂದರು.

ವಾದ-ಪ್ರತಿವಾದ ಆಲಿಸಿದ ಪೀಠವು ಈ ಪ್ರಕರಣವನ್ನು ಕಾನೂನು ಮತ್ತು ನಿಯಮಗಳಿಗೆ ಅತಿಯಾಗಿ ಕಟ್ಟುಬಿದ್ದು ನೋಡುವುದರ ಬದಲು ಪರಸ್ಪರ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬಹುದು ಅನಿಸುತ್ತದೆ. ವಿಮಾನ ನಿಲ್ದಾಣ ಪ್ರಾಧಿಕಾರ, ಪ್ರವಾಸೋದ್ಯಮ ಅಭಿವೃದ್ದಿ ನಿಗಮ ಹಾಗೂ ಅರ್ಜಿದಾರ ಸಂಸ್ಥೆ ಪರಸ್ಪರ ಮಾತುಕತೆ ಮೂಲಕ ಪರಿಹಾರ ಸೂತ್ರ ಹುಡುಕುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿ ಎಂದು ಸಲಹೆ ನೀಡಿ, ವಿಚಾರಣೆಯನ್ನು ಜನವರಿ 31ಕ್ಕೆ ಮುಂದೂಡಿತು. 

Kannada Bar & Bench
kannada.barandbench.com