ಶಿಕ್ಷಕರು ವಿದ್ಯಾರ್ಥಿಗಳಿಗೆ ಗದರಿಸುವುದು, ಯುಕ್ತ ಶಿಕ್ಷೆ ವಿಧಿಸುವುದು ಅಪರಾಧವಲ್ಲ: ಬಾಂಬೆ ಹೈಕೋರ್ಟ್

ಇಂತಹ ಕ್ಷುಲ್ಲಕ ಸಂಗತಿಗಳ ಬಗೆಗಿನ ಆರೋಪದ ಬಗ್ಗೆ ಶಿಕ್ಷಕರು ಹೆದರುತ್ತಾ ಕುಳಿತರೆ ಶಾಲೆಯಲ್ಲಿ ಶಿಸ್ತು ಕಾಪಾಡುವುದು ಕಷ್ಟವಾಗುತ್ತದೆ ಎಂದಿದೆ ನ್ಯಾಯಾಲಯ.
Bombay High court at Goa
Bombay High court at Goa
Published on

ಶಿಕ್ಷಕರು ವಿದ್ಯಾರ್ಥಿಗಳಿಗೆ ಗದರಿಸುವುದು, ಸಮಂಜಸವಾದ ಶಿಕ್ಷೆ ವಿಧಿಸುವುದು ಐಪಿಸಿ ಸೆಕ್ಷನ್‌ 324 ಅಥವಾ 2003ರ ಗೋವಾ ಮಕ್ಕಳ ಕಾಯಿದೆ ಅಡಿ ಸ್ವಪ್ರೇರಣೆಯಿಂದ ನೋಯಿಸುವ ಅಪರಾಧದ ವ್ಯಾಪ್ತಿಗೆ ಬರುವುದಿಲ್ಲ ಎಂದು ಗೋವಾದ ಬಾಂಬೆ ಹೈಕೋರ್ಟ್ ಗುರುವಾರ ಹೇಳಿದೆ [ರೇಖಾ ಫಲ್ದೇಸಾಯಿ ಮತ್ತು ಗೋವಾ ಸರ್ಕಾರ ನಡುವಣ ಪ್ರಕರಣ].

ವಿದ್ಯಾರ್ಥಿಗಳು ಕೇವಲ ವಿದ್ಯಾಭ್ಯಾಸಕ್ಕಾಗಿ ಮಾತ್ರವಲ್ಲದೆ ಶಿಸ್ತು ಸೇರಿದಂತೆ ವಿವಿಧ ವಿಷಯಗಳನ್ನು ಕಲಿಯಲು ಶಾಲೆಗೆ ತೆರಳುತ್ತಾರೆ. ಕ್ಷುಲ್ಲಕ ವಿಷಯಗಳಿಗೆ ಶಿಕ್ಷಕರು ಇಂತಹ ಆರೋಪಗಳಿಗೆ ಹೆದರಿದರೆ ಶಾಲೆಯಲ್ಲಿ ಶಿಸ್ತು ಕಾಪಾಡುವುದು ಕಷ್ಟವಾಗುತ್ತದೆ ಎಂದು ನ್ಯಾ. ಭರತ್ ಪಿ. ದೇಶಪಾಂಡೆ ಹೇಳಿದರು.

"ಶಾಲೆಯ ಉದ್ದೇಶ  ಶೈಕ್ಷಣಿಕ ವಿಷಯ ಕಲಿಸುವುದು ಮಾತ್ರವಲ್ಲ, ವಿದ್ಯಾರ್ಥಿಗಳನ್ನು ಜೀವನದ ಎಲ್ಲಾ ಆಯಾಮಗಳಲ್ಲಿ ರೂಪುಗೊಳಿಸುವುದಾಗಿದೆ. ಇದರಿಂದ ಭವಿಷ್ಯದಲ್ಲಿ ಅವರು ಉತ್ತಮ ನಡವಳಿಕೆ ಮತ್ತು ಸ್ವಭಾವದ ವ್ಯಕ್ತಿಯಾಗುತ್ತಾರೆ. ಶಿಕ್ಷಕರಿಗೆ ಸಮಾಜದಲ್ಲಿ ಬಹಳಷ್ಟು ಗೌರವವಿದೆ. ಅವರು ನಮ್ಮ ಶಿಕ್ಷಣ ವ್ಯವಸ್ಥೆಯ ಬೆನ್ನೆಲುಬಾಗಿದ್ದಾರೆ. ಶಿಕ್ಷಕರು ಇಂತಹ ಕ್ಷುಲ್ಲಕ ಆರೋಪಗಳಿಗೆ ಅದರಲ್ಲಿಯೂ ನಿರ್ದಿಷ್ಟವಾಗಿ ಮಕ್ಕಳನ್ನು ತಿದ್ದುವ ವಿಚಾರದಲ್ಲಿ ಹೆದರುತ್ತಾ ಕುಳಿತರೆ ಶಾಲೆ ನಡೆಸುವುದು ಕಷ್ಟವಾಗುತ್ತದೆ. ಇದರಿಂದ ಸೂಕ್ತ ಶಿಕ್ಷಣ ಅದರಲ್ಲಿಯೂ ಶಿಸ್ತು ಕಾಯ್ದುಕೊಳ್ಳುವುದು ಕಷ್ಟವಾಗುತ್ತದೆ” ಎಂದು ನ್ಯಾಯಾಲಯ ವಿವರಿಸಿದೆ. ಹೀಗಾಗಿ ಇಬ್ಬರು ವಿದ್ಯಾರ್ಥಿಗಳಿಗೆ ಥಳಿಸಿದ ಆರೋಪದಡಿ ಶಿಕ್ಷಕರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ನ್ಯಾಯಾಲಯ ರದ್ದುಗೊಳಿಸಿತು.

ಐಪಿಸಿ ಸೆಕ್ಷನ್ 324 (ಅಪಾಯಕಾರಿ ಆಯುಧ ಅಥವಾ ವಿಧಾನಗಳಿಂದ ಸ್ವಪ್ರೇರಣೆಯಿಂದ ನೋವುಂಟು ಮಾಡುವುದು) ಮತ್ತು ಸೆಕ್ಷನ್ 2(ಎಂ)(ಐ) (ಮಕ್ಕಳ ಮೇಲಿನ ದೌರ್ಜನ್ಯ), ಗೋವಾ ಮಕ್ಕಳ ಕಾಯಿದೆಯ ಸೆಕ್ಷನ್ 8 (2) ಅಡಿಯಲ್ಲಿ ಶಿಕ್ಷೆ ವಿಧಿಸುವ ಮಕ್ಕಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ಶಿಕ್ಷಕಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿ ಇದಾಗಿದೆ.

ತಮ್ಮ ಮಗುವೊಂದು ಇನ್ನೊಂದು ಮಗುವಿನ ಬಾಟಲಿಯಲ್ಲಿದ್ದ ನೀರನ್ನು ಕುಡಿದದ್ದಕ್ಕೆ ಶಿಕ್ಷಕಿ ʼರೂಲರ್‌ʼನಿಂದ ಥಳಿಸಿದ್ದಾರೆ ಎಂದು ಆರೋಪಿಸಿ ಇಬ್ಬರು ಮಕ್ಕಳ ತಂದೆ ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಶಿಕ್ಷಕಿಗೆ ₹ 1,10,000 ದಂಡ ಮತ್ತು ಒಂದು ದಿನದ ಜೈಲು ಶಿಕ್ಷೆ ವಿಧಿಸಲಾಗಿತ್ತು

[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

Attachment
PDF
Rekha_Faldessai_vs_State_of_Goa.pdf
Preview
Kannada Bar & Bench
kannada.barandbench.com