ಶಿಕ್ಷಕರು ದೇವರಿಗೆ ಸಮ ಎಂದ ಹೈಕೋರ್ಟ್‌; ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನಿಗೆ ಜಾಮೀನು ನಿರಾಕರಣೆ

ಅರ್ಜಿದಾರರ ನಡತೆಯಿಂದ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ಮನಸ್ಸು ಮಾಡುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ.
Karnataka HC, POCSO
Karnataka HC, POCSO

ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನಿಗೆ ಜಾಮೀನು ನೀಡಲು ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರಾಕರಿಸಿದೆ [ಸಿ ಮಂಜುನಾಥ್‌ ವರ್ಸಸ್‌ ಕರ್ನಾಟಕ ರಾಜ್ಯ ಮತ್ತು ಇತರರು].

ಆರೋಪಿಯ ವಿರುದ್ಧದ ಆರೋಪಗಳು ಕ್ರೂರವಾಗಿದ್ದು, ಶಿಕ್ಷಕರಾಗಿ ಸಮಾಜದಲ್ಲಿ ತಮ್ಮ ಸ್ಥಾನಮಾನವನ್ನು ನೋಡದೇ ಅವರು ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡಿದ್ದಾರೆ ಎಂದು ನ್ಯಾಯಮೂರ್ತಿ ಉಮೇಶ್‌ ಎಂ. ಅಡಿಗ ಅವರ ನೇತೃತ್ವದ ಏಕಸದಸ್ಯ ಪೀಠ ಹೇಳಿದೆ.

ಭಾರತದಲ್ಲಿ ಶಿಕ್ಷಕರನ್ನು ದೇವರಿಗೆ ಸಮ ಎಂದು ಪರಿಗಣಿಸಲಾಗುತ್ತದೆ. ಆದರೆ, ಅರ್ಜಿದಾರರ ನಡತೆಯಿಂದ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಒಲ್ಲದ ಮನಸ್ಸಿನಿಂದ ಶಾಲೆಗೆ ಕಳುಹಿಸುವಂತಾಗಿದೆ ಎಂದು ನ್ಯಾಯಾಲಯ ಹೇಳಿದೆ.

“ಆರೋಪಿತ ಅಪರಾಧಗಳು ಕ್ರೌರ್ಯದಿಂದ ಕೂಡಿದ್ದು, ಕರುಣೆ ಇಲ್ಲದೇ ಸಮಾಜದಲ್ಲಿ ತನ್ನ ಸ್ಥಾನಮಾನದ ಬಗ್ಗೆ ಯೋಚಿಸದೇ ನಾಲ್ಕು ಮತ್ತು ಐದನೇ ತರಗತಿಯ ವಿದ್ಯಾರ್ಥಿನಿಯರಿಗೆ ಅವರು ಕಿರುಕುಳ ನೀಡಿದ್ದಾರೆ. ಈ ದೇಶದಲ್ಲಿ ಶಿಕ್ಷಕರನ್ನು ದೇವರು ಎಂದು ಪರಿಗಣಿಸಲಾಗುತ್ತಿದ್ದು, ಅವರಿಗೆ ದೇವರಿಗೆ ನೀಡುವ ಗೌರವ ನೀಡಲಾಗುತ್ತದೆ. ಅದಾಗ್ಯೂ, ಅರ್ಜಿದಾರರ ಆರೋಪಿತ ನಡತೆಯಿಂದಾಗಿ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿಲು ಪೋಷಕರು ಎರಡು ಬಾರಿ ಯೋಚಿಸುವಂತಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.

ಅರ್ಜಿದಾರ ಶಿಕ್ಷಕರನ್ನು ಪ್ರತಿನಿಧಿಸಿದ್ದ ವಕೀಲ ಎ ಎನ್‌ ರಾಧಾ ಕೃಷ್ಣ ಅವರು “ಶಾಲೆಯ ಆವರಣದಲ್ಲಿ ಗ್ರಾಮಸ್ಥರು ಅಂಗಡಿ ಇರಿಸಿದ್ದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ತಮ್ಮನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಈ ರೀತಿ ತನ್ನ ವಿರುದ್ಧ ಹಿಂದೆ ಯಾವುದೇ ದೂರು ದಾಖಲಾಗಿಲ್ಲ. ತನ್ನ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ತಮ್ಮ ಮಕ್ಕಳನ್ನು ಪ್ರೇರೇಪಿಸಿ ಪೊಲೀಸರಿಗೆ ಸುಳ್ಳು ಹೇಳಿಕೆ ಕೊಡಿಸಿದ್ದಾರೆ” ಎಂದು ವಾದಿಸಿದ್ದರು.

ರಾಜ್ಯ ಸರ್ಕಾರದ ಪರ ವಕೀಲ ಮಹೇಶ್‌ ಶೆಟ್ಟಿ ಅವರು “ಹಲವು ಮಕ್ಕಳ ಮೇಲೆ ಶಿಕ್ಷಕ ಕ್ರೌರ್ಯ ಮೆರೆದಿದ್ದಾರೆ. ಸಂತ್ರಸ್ತರು ಯಾವುದೇ ರೀತಿಯಲ್ಲೂ ಅಂಗಡಿ ನಡೆಸುತ್ತಿದ್ದವರಿಗೆ ಸಂಬಂಧಪಟ್ಟವರಲ್ಲ. ಅರ್ಜಿದಾರ ಶಿಕ್ಷಕರ ವಾದ ನಂಬಿಕೆಗೆ ಅರ್ಹವಾಗಿಲ್ಲ” ಎಂದು ವಾದಿಸಿದ್ದರು.

Also Read
ಪೋಕ್ಸೊ ಅಡಿ ಲೈಂಗಿಕ ದೌರ್ಜನ್ಯ ಸಾಬೀತಿಗೆ ವೀರ್ಯ ಸ್ಖಲನದ ಸಾಕ್ಷ್ಯ ಪೂರ್ವಾಪೇಕ್ಷಿತವಲ್ಲ: ಆಂಧ್ರ ಪ್ರದೇಶ ಹೈಕೋರ್ಟ್

ಪ್ರಕರಣದ ಹಿನ್ನೆಲೆ: ಅರ್ಜಿದಾರ ಶಿಕ್ಷಕರ ನಡತೆಯ ಬಗ್ಗೆ ಕಳೆದ ಮಾರ್ಚ್‌ನಲ್ಲಿ ಕೆಲವು ಗ್ರಾಮಸ್ಥರು ಮಧುಗಿರಿಯ ಕ್ಷೇತ್ರ ಶಿಕ್ಷಣಾಧಿಕಾರಿಯ (ಬಿಇಒ) ಗಮನ ಸೆಳೆದಿದ್ದರು. ಬಿಇಒ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿಯು ಶಾಲೆಗೆ ಭೇಟಿ ನೀಡಿದ್ದಾಗ ಕೆಲವು ವಿದ್ಯಾರ್ಥಿಗಳು ಆರೋಪಿತ ಶಿಕ್ಷಕರ ನಡತೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು.

ಇದನ್ನು ಆಧರಿಸಿ ಬಿಇಒ ನೀಡಿದ್ದ ದೂರಿನ ಮೇರೆಗೆ ಪೊಲೀಸರು ಪೋಕ್ಸೊ ಕಾಯಿದೆ ಸೆಕ್ಷನ್‌ಗಳಾದ 8 (ಲೈಂಗಿಕ ದೌರ್ಜನ್ಯ) ಮತ್ತು 12 (ಲೈಂಗಿಕ ಕಿರುಕುಳ) ಅಡಿ ಪ್ರಕರಣ ದಾಖಲಿಸಿದ್ದರು. ತ್ವರಿತಗತಿಯ ವಿಶೇಷ ನ್ಯಾಯಾಲಯವು ಜಾಮೀನು ನಿರಾಕರಿಸಿದ್ದರಿಂದ ಆರೋಪಿ ಶಿಕ್ಷಕ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

Related Stories

No stories found.
Kannada Bar & Bench
kannada.barandbench.com