ಬೆಂಗಳೂರು ನ್ಯಾಯಾಲಯಗಳಲ್ಲಿ ವಕೀಲರಿಗಾಗಿ ತಂತ್ರಜ್ಞಾನ ಆಧಾರಿತ ಪಾರ್ಕಿಂಗ್‌ ಸ್ಟಿಕರ್‌ ವ್ಯವಸ್ಥೆ; ಸೆ. 15ರಿಂದ ಜಾರಿ

ವಕೀಲರ ವಾಹನಗಳು ನ್ಯಾಯಾಲಯಗಳ ಆವರಣ ಪ್ರವೇಶಿಸಲು ಸಂಘದ ವತಿಯಿಂದ ನೀಡಲಾಗುವ ಸ್ಟಿಕ್ಕರ್ ಬಳಸುವುದು ಕಡ್ಡಾಯ. ಸ್ಟಿಕರ್‌ ಅವಧಿ ಮೂರು ವರ್ಷವಾಗಿದ್ದು, ಕಾರಿಗೆ 500 ರೂಪಾಯಿ ಮತ್ತು ದ್ವಿಚಕ್ರ ವಾಹನಕ್ಕೆ 200 ರೂಪಾಯಿ ದರ ನಿಗದಿಪಡಿಸಲಾಗಿದೆ.
ಬೆಂಗಳೂರು ನ್ಯಾಯಾಲಯಗಳಲ್ಲಿ ವಕೀಲರಿಗಾಗಿ ತಂತ್ರಜ್ಞಾನ ಆಧಾರಿತ ಪಾರ್ಕಿಂಗ್‌ ಸ್ಟಿಕರ್‌ ವ್ಯವಸ್ಥೆ; ಸೆ. 15ರಿಂದ ಜಾರಿ
Published on

ರಾಜ್ಯ ಹೈಕೋರ್ಟ್ ಸೇರಿದಂತೆ ಬೆಂಗಳೂರಿನ ನಾಲ್ಕು ನ್ಯಾಯಾಲಯದ ಘಟಕಗಳಲ್ಲಿ ವಕೀಲರ ವಾಹನ ನಿಲುಗಡೆ ಸಮಸ್ಯೆ ತಪ್ಪಿಸಲು ತಂತ್ರಜ್ಞಾನ ಆಧಾರಿತ ಸಿಕ್ಟರ್ ವ್ಯವಸ್ಥೆಯನ್ನು ಸೆಪ್ಟೆಂಬರ್ 15ರಿಂದ ಜಾರಿಗೆ ತರಲಾಗುತ್ತಿದೆ.

ಹೈಕೋರ್ಟ್‌ನ ವಕೀಲರ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಅವರು ಬೆಂಗಳೂರು ವಕೀಲರ ಸಂಘದ ವತಿಯಿಂದ ಜಾರಿಗೆ ತರಲಾಗಿರುವ ಈ ತಂತ್ರಜ್ಞಾನ ಆಧಾರಿತ ಸ್ಟಿಕ್ಕರ್‌ನ ಲೋಗೊ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ವಕೀಲರ ಅಧ್ಯಕ್ಷ ವಿವೇಕ್ ರೆಡ್ಡಿ ಅವರು “ಹೈಕೋರ್ಟ್, ಸಿಟಿ ಸಿವಿಲ್ ನ್ಯಾಯಾಲಯ, ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಹಾಗೂ ಮೆಯೊ ಹಾಲ್‌ನಲ್ಲಿ ನ್ಯಾಯಾಲಯದಲ್ಲಿ ವಕೀಲರ ವಾಹನ ನಿಲುಗಡೆಗೆ ಸಮಸ್ಯೆಯಿತ್ತು. ಇದನ್ನು ನಿವಾರಿಸುವ ದೃಷ್ಟಿಯಿಂದ ನೂತನ ಸ್ಟಿಕ್ಕರ್ ವ್ಯವಸ್ಥೆ ಜಾರಿಗೆ ಮಾಡಲಾಗುತ್ತಿದೆ. ವಕೀಲರ ವಾಹನಗಳು ಈ ಎಲ್ಲಾ ನ್ಯಾಯಾಲಯಗಳ ಆವರಣ ಪ್ರವೇಶಿಸಲು ಸಂಘದ ವತಿಯಿಂದ ನೀಡಲಾಗುವ ಸ್ಟಿಕ್ಕರ್ ಬಳಸುವುದು ಕಡ್ಡಾಯ” ಎಂದರು.

“ಹೊಸ ಸ್ಟಿಕ್ಕರ್ ನಲ್ಲಿರುವ ಬಾರ್‌ಕೋರ್ಡ್ ಬೆಂಗಳೂರು ವಕೀಲರ ಸಂಘವು ತನ್ನ ಸದಸ್ಯರಿಗೆ ನೀಡಿರುವ ಸ್ಮಾರ್ಟ್ ಕಾರ್ಡಿಗೆ ಲಿಂಕ್ ಹೊಂದಿರುತ್ತವೆ. ಅವುಗಳನ್ನು ನಕಲು ಮಾಡಲು ಸಾಧ್ಯವಿಲ್ಲ. ಇದರಿಂದ ಇಲ್ಲಿ ವಕೀಲರು ಮಾತ್ರ ವಾಹನ ನಿಲುಗಡೆ ಮಾಡಲು ಸಾಧ್ಯವಾಗುತ್ತದೆ. ಹೊರಗಿನವರು ವಾಹನ ನಿಲುಗಡೆ ಅವಕಾಶ ಇರುವುದಿಲ್ಲ. ಸ್ಟಿಕರ್ ಇದ್ದವರಿಗೆ ಮಾತ್ರ ಕೋರ್ಟ್ ಆವರಣದಲ್ಲಿ ವಾಹನ ನಿಲುಗಡೆಗೆ ಅವಕಾಶ ಇರುತ್ತದೆ. ಹೀಗಾಗಿ, ನಗರದ ನಾಲ್ಕೂ ನ್ಯಾಯಾಲಯಗಳ ಆವರಣದಲ್ಲಿ ವಕೀಲರ ವಾಹನ ನಿಲುಗಡೆ ಸಮಸ್ಯೆ ಬಹುತೇಕ ಬಗೆಹರಿಯಲಿದೆ. ಸ್ಟಿಕರ್‌ ಅವಧಿ ಮೂರು ವರ್ಷವಾಗಿದ್ದು, ಕಾರಿಗೆ 500 ರೂಪಾಯಿ ಮತ್ತು ದ್ವಿಚಕ್ರ ವಾಹನಕ್ಕೆ 200 ರೂಪಾಯಿ ನಿಗದಿಪಡಿಸಲಾಗಿದೆ” ಎಂದು ತಿಳಿಸಿದರು.

ಸ್ಟಿಕ್ಕರ್ ಬಿಡುಗಡೆ ಮಾಡಿದ ನ್ಯಾಯಮೂರ್ತಿ ಅಲೋಕ್ ಅರಾಧೆ ಅವರು “ಸಂಘದ ಕಾರ್ಯ ಶ್ಲಾಘನೀಯ. ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ವಕೀಲರು ಸಹಕರಿಸಬೇಕು” ಎಂದರು.

ಹೊಸ ಸ್ಟಿಕ್ಕರ್ ವ್ಯವಸ್ಥೆ ಜಾರಿಯ ನೇತೃತ್ವ ವಹಿಸಿದ್ದ ಹೈಕೋರ್ಟ್‌ನ ಹಿರಿಯ ವಕೀಲ ಕೆ ಎನ್ ಫಣೀಂದ್ರ ಅವರು “ವಕೀಲರ ವಾಹನಗಳ ಸಂಖ್ಯೆ ಹೆಚ್ಚಿದೆ. ತಂತ್ರಜ್ಞಾನ ಆಧಾರಿತ ಸ್ಟಿಕ್ಕರ್ ವ್ಯವಸ್ಥೆಯಲ್ಲಿ ದೋಷರಹಿತವಾಗಿದ್ದು, ಈ ವ್ಯವಸ್ಥೆ ಜಾರಿಯಿಂದ ನ್ಯಾಯಾಲಯದ ಆವರಣದಲ್ಲಿ ಬೇಕಾಬಿಟ್ಟಿ ವಾಹನಗಳ ಪ್ರವೇಶಕ್ಕೆ ಕಡಿವಾಣ ಬೀಳಲಿದೆ” ಎಂದರು.

ಕಾರ್ಯಕ್ರಮದಲ್ಲಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಮತ್ತು ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Kannada Bar & Bench
kannada.barandbench.com