
ಬೆಂಗಳೂರಿನ ಟೆಕಿ ಅತುಲ್ ಸುಭಾಷ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಸಂಬಂಧ ದಾಖಲಿಸಿರುವ ಪ್ರಕರಣ ರದ್ದತಿ ಕೋರಿದ್ದ ಅರ್ಜಿಯನ್ನು ಅತುಲ್ ಪತ್ನಿ ನಿಖಿತಾ ಸಿಂಘಾನಿಯಾ ಶುಕ್ರವಾರ ಹಿಂಪಡೆದಿದ್ದಾರೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಮತ್ತು ಏಕ ಉದ್ದೇಶದಿಂದ ಅನೇಕ ಮಂದಿ ಸೇರಿ ಕ್ರಿಮಿನಲ್ ಕೃತ್ಯದಲ್ಲಿ ತೊಡಗಿರುವ ಆರೋಪದ ಮೇಲೆ ಮಾರತ್‌ಹಳ್ಳಿ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿದ್ದ ಅರ್ಜಿಯನ್ನು ಹಿಂಪಡೆಯುತ್ತಿರುವುದಾಗಿ ನಿಖಿತಾ, ನಿಶಾ ಮತ್ತು ಅನುರಾಗ್ ಸಿಂಘಾನಿಯಾ ಸಲ್ಲಿಸಿದ್ದ ಮೆಮೊವನ್ನು ನ್ಯಾಯಮೂರ್ತಿ ಎಸ್ ಆರ್ ಕೃಷ್ಣಕುಮಾರ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿತು.
ವಿಚಾರಣೆ ಆರಂಭವಾಗುತ್ತಿದ್ದಂತೆ ಅರ್ಜಿದಾರರ ಪರ ವಕೀಲ ವಿ ಭರತ್ ಕುಮಾರ್ ಅವರು “ನಾಲ್ವರು ಆರೋಪಿಗಳ ಪೈಕಿ ನಿಖಿತಾ, ನಿಶಾ ಮತ್ತು ಅನುರಾಗ್ ಸಿಂಘಾನಿಯಾ ಅವರು ಅರ್ಜಿಯನ್ನು ಹಿಂಪಡೆಯುವ ಸಂಬಂಧ ಮೆಮೊ ಸಲ್ಲಿಸಿದ್ದಾರೆ. ತನಿಖೆ ಮುಗಿದು, ಪ್ರಾಸಿಕ್ಯೂಷನ್ ಆರೋಪ ಪಟ್ಟಿ ಸಲ್ಲಿಸಿದ ಬಳಿಕ ಅದನ್ನು ಅವರು ಪ್ರಶ್ನಿಸಿದ್ದಾರೆ. ನಿಖಿತಾ ಚಿಕ್ಕಪ್ಪ ಹಾಗೂ ನಾಲ್ಕನೇ ಆರೋಪಿ ಸುಶೀಲ್ ಸಿಂಘಾನಿಯಾಗೆ 70 ವರ್ಷ ವಯಸ್ಸಾಗಿದ್ದು, ಎಫ್‌ಐಆರ್‌ನಲ್ಲಿ ಸುಶೀಲ್ ಅವರ ವಿರುದ್ದ ಯಾವುದೇ ಉಲ್ಲೇಖ ಇಲ್ಲದೇ ಇರುವುದರಿಂದ ಅವರ ವಿರುದ್ಧದ ತನಿಖೆಗೆ ತಡೆ ನೀಡಬೇಕು” ಎಂದು ಮನವಿ ಮಾಡಿದರು.
ಪ್ರಾಸಿಕ್ಯೂಷನ್ ಪರ ವಕೀಲರು ಶೀಘ್ರದಲ್ಲೇ ಪ್ರಕರಣದ ಸಂಬಂಧ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗುವುದು ಎಂದರು.
ಇದನ್ನು ಆಲಿಸಿದ ಪೀಠವು ಮುಂದಿನ ವಿಚಾರಣೆವರೆಗೆ ಸುಶೀಲ್ ಸಿಂಘಾನಿಯಾಗೆ ಸೀಮಿತವಾಗಿ ತನಿಖೆಗೆ ಹೈಕೋರ್ಟ್ ತಡೆ ವಿಧಿಸಿದ್ದು, ಅತುಲ್ ಸಹೋದರ ಬಿಕಾಸ್ ಕುಮಾರ್‌ಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೇ, ನಿಖಿತಾ, ನಿಶಾ ಮತ್ತು ಅನುರಾಗ್ ಸಿಂಘಾನಿಯಾ ಅವರ ಮೆಮೊವನ್ನು ಪುರಸ್ಕರಿಸಿದೆ.
ಕಳೆದ ವರ್ಷದ ಡಿಸೆಂಬರ್‌ನಲ್ಲಿ 34 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಅತುಲ್ ಅವರು ಸುದೀರ್ಘವಾದ ಮರಣ ಪತ್ರ ಹಾಗೂ ವಿಡಿಯೋ ಮಾಡಿ ಅದರಲ್ಲಿ ಪತ್ನಿ ನಿಖಿತಾ ಮತ್ತು ಆಕೆಯ ಕುಟುಂಬಸ್ಥರು ಸುಳ್ಳು ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಜನವರಿಯಲ್ಲಿ ನಿಖಿತಾ, ನಿಶಾ, ಅನುರಾಗ್ ಮತ್ತು ಸುಶೀಲ್ ಸಿಂಘಾನಿಯಾಗೆ ಬೆಂಗಳೂರಿನ ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.