ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯು (ಎನ್‌ಎಲ್‌ಎಸ್ಐಯು) ತನ್ನ ಪ್ರವೇಶಾತಿಗಾಗಿ ನಡೆಸಲು ಮುಂದಾಗಿರುವ ಪ್ರತ್ಯೇಕ ಪ್ರವೇಶ ಪರೀಕ್ಷೆ ಎನ್‌ಎಲ್‌ಎಟಿ 2020 ಬರೆಯಲು ಬೇಕಾದ ತಾಂತ್ರಿಕ ಅಗತ್ಯತೆಗಳ ಕುರಿತ ಮಾಹಿತಿಯನ್ನು ಬಿಡುಗಡೆ ಮಾಡಿದೆ.
ಎನ್‌ಎಲ್‌ಎಸ್‌ಐಯು ನಡೆಸಲಿರುವ ರಾಷ್ಟ್ರೀಯ ಕಾನೂನು ಪ್ರವೃತ್ತಿ ಪರೀಕ್ಷೆಯು (ಎನ್‌ಎಲ್ಎಟಿ 2020) ಇದೇ ಸೆಪ್ಟೆಂಬರ್ 12ರಂದು ನಡೆಯಲಿದೆ. ಪ್ರವೇಶಾತಿ ಬಯಸುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನಡೆಯುವ ಪ್ರವೇಶ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಬೇಕಾದ ತಾಂತ್ರಿಕ ಅಗತ್ಯತೆಗಳ ಬಗ್ಗೆ ರಾಷ್ಟ್ರೀಯ ಕಾನೂನು ಶಾಲೆಯು ಪ್ರಕಟಣೆಯಲ್ಲಿ ವಿವರವಾಗಿ ತಿಳಿಸಿದೆ. ಅಭ್ಯರ್ಥಿಗಳು ಈ ಕೆಳಗಿನ ತಾಂತ್ರಿಕ ಅಗತ್ಯತೆಗಳು ತಮ್ಮ ಕಂಪ್ಯೂಟರ್ ಹಾಗೂ ಸಂಪರ್ಕ ಜಾಲದಲ್ಲಿ ಇರುವುದನ್ನು ಖಚಿತ ಪಡಿಸಿಕೊಳ್ಳಬೇಕು.
ಪ್ರಮುಖ ತಾಂತ್ರಿಕ ಅಗತ್ಯತೆಗಳು ಹೀಗಿವೆ:
ಕನಿಷ್ಟ ಇಂಟರ್‌ನೆಟ್ ಬ್ಯಾಂಡ್ ವಿಡ್ತ್: 1 ಎಂಬಿಪಿಎಸ್.
ಡೆಸ್ಕ್ ಟಾಪ್/ ಲ್ಯಾಪ್ ಟಾಪ್‌ಗಳನ್ನು ಮಾತ್ರ ಬಳಸಬೇಕು. ಐಪ್ಯಾಡ್ ಅಥವಾ ಮೊಬೈಲ್ ಫೋನ್ ಬಳಸುವಂತಿಲ್ಲ.
ಮ್ಯಾಕ್ ತಂತ್ರಾಂಶ ಬಳಸುವಂತಿಲ್ಲ, ಕೇವಲ ವಿಂಡೋಸ್ ತಂತ್ರಾಂಶ ಮಾತ್ರ ಬಳಸಬೇಕು: ವಿಂಡೋಸ್ 7 ಅಥವಾ ಅದಕ್ಕಿಂತ ಮೇಲಿನದು (ವಿಂಡೋಸ್ 10 ಶಿಫಾರಸ್ಸು ಮಾಡಲಾಗಿದೆ). ಲಿನಕ್ಸ್, ಮ್ಯಾಕ್ ಅಥವಾ ಇನ್ನಾವುದೇ ಆಪರೇಟಿಂಗ್ ತಂತ್ರಾಂಶಗಳಲ್ಲಿ ಪರೀಕ್ಷಾ ವ್ಯವಸ್ಥೆಯು ನಡೆಯುವುದಿಲ್ಲ.
ಗೂಗಲ್ ಕ್ರೋಮ್: ಗೂಗಲ್ ಕ್ರೋಮ್ (84.0.4147.135 ಅಥವಾ ಆನಂತರದ್ದು) ಮಾತ್ರ
ಜಾವಾ ಸ್ಕ್ರಿಪ್ಟ್ ಎನೇಬಲ್ ಆಗಿರಬೇಕು
ಆ್ಯಂಟಿವೈರಸ್ ಡಿಸೇಬಲ್ ಆಗಿರಬೇಕು.
ಕಡ್ಡಾಯವಾಗಿ ಇಂಟಿಗ್ರೇಟೆಡ್ ವೆಬ್‌ಕ್ಯಾಮ್ ಸೌಲಭ್ಯ ಹೊಂದಿರಬೇಕು. ವೆಬ್‌ಕ್ಯಾಮ್‌ನ ಕನಿಷ್ಠ ರೆಸಲ್ಯೂಷನ್ 640x480 ಇರಬೇಕು.
ಇಂಟಿಗ್ರೇಟೆಡ್ ಮೈಕ್ರೋಫೋನ್ ಕಡ್ಡಾಯವಾಗಿ ಇರಬೇಕು.
ಯಾವುದೇ ರೀತಿಯ ತಂತಿ ಸಹಿತ, ತಂತಿ ರಹಿತ ಹೆಡ್ ಫೋನ್ ಗಳಾಗಲಿ/ ಇಯರ್ ಫೋನ್ ಗಳಾಗಲಿ ಅಥವಾ ಇತರೆ ಆಡಿಯೋ ಉಪಕರಣಗಳಿಗಾಗಲಿ ಅನುಮತಿ ಇರುವುದಿಲ್ಲ.
ಅಭ್ಯರ್ಥಿಗಳು, “ಸೇಫ್ ಅಸೆಸ್ಮೆಂಟ್ ಬ್ರೌಸರ್ ಟೂಲ್ (SAB)” ಅನ್ನು ಡೌನ್‌ಲೋಡ್ ಮಾಡಿ ಇನ್ ಸ್ಟಾಲ್ ಮಾಡಿಕೊಳ್ಳಬೇಕು. ನೊಂದಾಯಿತ ಅಭ್ಯರ್ಥಿಗಳಿಗೆ ಪರೀಕ್ಷೆಗಿಂತ ಮುಂಚಿತವಾಗಿಯೇ SAB ಟೂಲ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ಅಗತ್ಯವಾದ ಲಿಂಕ್ ಅನ್ನು ನೀಡಲಾಗುವುದು.