ಅಂತರ್ಜಾಲದ ಅಸಮಾನ ಲಭ್ಯತೆ ಸಮಾಜದಂಚಿನಲ್ಲಿರುವವರಿಗೆ ನ್ಯಾಯದ ಲಭ್ಯತೆ ಕ್ಷೀಣಿಸಬಹುದು: ಸಿಜೆಐ ಗವಾಯಿ ಆತಂಕ

ಇಂಗ್ಲೆಂಡ್‌ನ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ʼನ್ಯಾಯದಾನ ಸುಧಾರಣೆಯಲ್ಲಿ ತಂತ್ರಜ್ಞಾನದ ಪಾತ್ರʼ ಎಂಬ ವಿಚಾರವಾಗಿ ಸಿಜೆಐ ಮಾತನಾಡಿದರು.
CJI BR Gavai Oath ceremony
CJI BR Gavai Oath ceremony
Published on

ನ್ಯಾಯದಾನ ವ್ಯವಸ್ಥೆಯಲ್ಲಿ ತಂತ್ರಜ್ಞಾನ ದ್ವಿಪಾತ್ರ ನಿರ್ವಹಿಸುತ್ತಿದ್ದು ಸಮಾಜದಂಚಿನಲ್ಲಿರುವವರನ್ನು ಒಳಗೊಳ್ಳಲು ಇದು ಸಾಧನವಾಗಿರುವಂತೆಯೇ ಹೊಸ ಕಂದರಗಳ ಸಂಭಾವ್ಯ ಮೂಲ ಕೂಡ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ತಿಳಿಸಿದರು.

ಇಂಗ್ಲೆಂಡ್‌ನ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ʼನ್ಯಾಯದಾನ ಸುಧಾರಣೆಯಲ್ಲಿ ತಂತ್ರಜ್ಞಾನದ ಪಾತ್ರʼ ಎಂಬ ವಿಚಾರವಾಗಿ ಅವರು ಮಾತನಾಡಿದರು.

ನ್ಯಾಯ ಪಡೆಯಲು ಈಗಾಗಲೇ ಅಡೆತಡೆ ಎದುರಿಸುತ್ತಿರುವ ಸಮಾಜದಂಚಿನಲ್ಲಿರುವ ಸಮುದಾಯಗಳನ್ನು ಹೊರಗಿಡಲು ಇಂಟರ್ನೆಟ್ ಸಂಪರ್ಕ, ಸಾಧನಗಳು ಮತ್ತು ಡಿಜಿಟಲ್ ಸಾಕ್ಷರತೆ ದೊರಕಿಸಿಕೊಡುವಲ್ಲಿ ಇರುವ ಅಸಮಾನತೆ ಕಾರಣವಾಗಬಹುದು ಎಂದು ಅವರು ಹೇಳಿದರು.

ಸಿಜೆಐ ಭಾಷಣದ ಪ್ರಮುಖಾಂಶಗಳು

  • ತಂತ್ರಜ್ಞಾನ ನಿಜವಾಗಿಯೂ ನ್ಯಾಯ ದೊರಕಿಸಿಕೊಡಬೇಕು ಎನ್ನುವುದಾದರೆ ಲಭ್ಯತೆ ಮತ್ತು ಒಳಗೊಳ್ಳುವಿಕೆ ಅದರ ವಿನ್ಯಾಸದ ಆಂತರ್ಯವಾಗಬೇಕು.

  • ಡಿಜಿಟಲ್ ಪರಿಕರಗಳು ನ್ಯಾಯಾಂಗ ತಾರ್ಕಿಕತೆಗೆ ಎದುರಾಗಿ ನಿಲ್ಲದೆ ಸಹಾಯ ಮಾಡಬೇಕು.

  • ನ್ಯಾಯಾಲಯಗಳಲ್ಲಿ ತಂತ್ರಜ್ಞಾನ ಆಧಾರಿತ ಬದಲಾವಣೆಗಳನ್ನು ನಿಯಂತ್ರಿಸಲು ನೀತಿ ರೂಪಿಸುವ ಅಗತ್ಯವಿದೆ.

  • ನ್ಯಾಯಾಲಯಗಳಲ್ಲಿ ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದಂತೆ ಮಾನದಂಡಗಳನ್ನು ಅಭಿವೃದ್ಧಿಪಡಿಸಬೇಕು.

  • ನೀತಿ ನಿರೂಪಣೆ ಇಲ್ಲದೆ ನ್ಯಾಯವಿತರಣಾ ಪ್ರಕ್ರಿಯೆಯಲ್ಲಿ ಕ್ರಾಂತಿ ಮೂಡಲು ಸಾಧ್ಯವಾಗದು.

  • ಸ್ವಯಂಚಾಲಿತ ಕಾನೂನು ಪರಿಕರಗಳನ್ನು ಕುರುಡಾಗಿ ನಂಬಬಾರದು.

  • ಡಿಜಿಟಲ್ ಸಮಗ್ರತೆ ವಿಳಂಬವನ್ನು ಕಡಿಮೆ ಮಾಡಿದ್ದು ಮೇಲ್ವಿಚಾರಣೆ ಸುಧಾರಿಸಿದ್ದರೂ ಈ ಪ್ರಗತಿಗೆ ಸಾಂವಿಧಾನಿಕ ಮೌಲ್ಯಗಳು ದಾರಿ ತೋರಬೇಕು.

  • ತಂತ್ರಜ್ಞಾನ ನ್ಯಾಯಯುತವಾಗಿ ಸೇವೆ ಸಲ್ಲಿಸಬೇಕು ಎಂದು ನಿರೀಕ್ಷಿಸುವ ಮುನ್ನ ನಮ್ಮ ವ್ಯವಸ್ಥೆಗಳನ್ನು ಶುದ್ಧೀಕರಿಸುವ ಮತ್ತು ಬಲಪಡಿಸುವ ನೇರ ಹೊಣೆ ನಮ್ಮ ಮೇಲಿದೆ.

  • ಕಾನೂನು ದಾಖಲೆಗಳನ್ನು ಒಂಬತ್ತು ಪ್ರಾದೇಶಿಕ ಭಾಷೆಗಳಿಗೆ ಸುಪ್ರೀಂ ಕೋರ್ಟ್‌ನ ವಿಧಿಕ್ ಅನುವಾದ್ ತಂತ್ರಾಂಶ (ಎಸ್‌ಯುವಿಎಎಸ್‌- ಸುವಾಸ್‌) ಭಾಷಾಂತರಿಸುತ್ತಿದೆ. ಪ್ರಸ್ತುತ 23 ಕೋಟಿ ಪ್ರಕರಣಗಳು ಮತ್ತು 22 ಕೋಟಿ ನ್ಯಾಯಾಲಯದ ಆದೇಶಗಳನ್ನು ಒಳಗೊಂಡಿರುವ ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್‌ ಯೋಜನೆ ಅತ್ಯಂತ ಮುಖ್ಯವಾದುದು.

  • ನ್ಯಾಯಯುತ ಮತ್ತು ಎಲ್ಲರನ್ನೂ ಒಳಗೊಂಡ ಡಿಜಿಟಲ್ ನೀತಿ ರೂಪಿಸುವಲ್ಲಿ ನ್ಯಾಯಾಂಗ ಮತ್ತು ಪ್ರಾಜ್ಞ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಬೇಕಿದೆ.

Kannada Bar & Bench
kannada.barandbench.com