

ತಂತ್ರಜ್ಞಾನವು ವೃತ್ತಿಪರ ವಿವೇಚನೆಗೆ ನೆರವಾಗಬೇಕೇ ಹೊರತು, ಸ್ವತಂತ್ರ ವಿಶ್ಲೇಷಣೆ ಮತ್ತು ನಿರ್ಧಾರ ಕೈಗೊಳ್ಳುವ ಸಾಮರ್ಥ್ಯಕ್ಕೆ ಪರ್ಯಾಯವಾಗಬಾರದು ಎಂದು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಹೇಳಿದರು.
ಬೆಂಗಳೂರಿನ ಹೈಕೋರ್ಟ್ನಲ್ಲಿ ವಕೀಲರ ವಾಹಿನಿ ಆಯೋಜಿಸಿದ್ದ ‘ವಕೀಲ ಭೂಷಣ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಐವರು ಹಿರಿಯ ವಕೀಲರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಕಾನೂನು ವೃತ್ತಿಯಲ್ಲಿ ಡಿಜಿಟಲ್ ಸಂಪನ್ಮೂಲಗಳು, ಎಲೆಕ್ಟ್ರಾನಿಕ್ ನ್ಯಾಯಾಲಯದ ದಾಖಲೆಗಳು ಹಾಗೂ ಕೃತಕ ಬುದ್ಧಿಮತ್ತೆಯ ಬಳಕೆ ಹೆಚ್ಚುತ್ತಿರುವುದನ್ನು ಉಲ್ಲೇಖಿಸಿದ ಮುಖ್ಯ ನ್ಯಾಯಮೂರ್ತಿಗಳು “ಇವು ಕಾನೂನು ಸಂಶೋಧನೆಗೆ ನೆರವಾಗಲು, ಕಾರ್ಯಕ್ಷಮತೆ ಹೆಚ್ಚಿಸಲು ಮತ್ತು ಕಾನೂನು ಮಾಹಿತಿಗೆ ಸುಲಭ ಪ್ರವೇಶ ಕಲ್ಪಿಸಲು ಅಮೂಲ್ಯ ಅವಕಾಶಗಳನ್ನು ಒದಗಿಸುತ್ತವೆ” ಎಂದರು.
“ಆದರೆ, ತಂತ್ರಜ್ಞಾನವು ವೃತ್ತಿಪರ ವಿವೇಚನೆಗೆ ನೆರವಾಗಬೇಕೇ ಹೊರತು, ಸ್ವತಂತ್ರ ವಿಶ್ಲೇಷಣೆಯನ್ನು ಬದಲಿಸಬಾರದು. ತಂತ್ರಜ್ಞಾನ ಬಳಕೆಯಲ್ಲಿ ನೈತಿಕ ಹೊಣೆಗಾರಿಕೆ ಇರಬೇಕು. ತಂತ್ರಜ್ಞಾನದ ಮೂಲಕ ಪಡೆಯುವ ಮಾಹಿತಿ ಮತ್ತು ಕಾನೂನು ಆಧಾರಗಳನ್ನು ಪರಿಶೀಲಿಸಬೇಕು, ಗೌಪ್ಯತೆಯನ್ನು ಕಾಪಾಡಬೇಕು ಹಾಗೂ ಅದರ ಬಳಕೆಯು ನ್ಯಾಯಸಮ್ಮತತೆ ಮತ್ತು ನ್ಯಾಯದ ತತ್ವಗಳಿಗೆ ಅನುಗುಣವಾಗಿರಬೇಕು” ಎಂದು ನ್ಯಾಯಮೂರ್ತಿ ಬಕ್ರು ಹೇಳಿದರು.
ಸಿದ್ಧತೆ, ನಿಖರತೆ ಮತ್ತು ತಾರ್ಕಿಕ ವಾದ ಮಂಡನೆಯಿಂದ ಪರಿಣಾಮಕಾರಿ ವಕಾಲತ್ತು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ತಮ್ಮ ಕಕ್ಷಿದಾರರ ಪರವಾಗಿ ನಿರ್ಭೀತಿಯಿಂದ ವಾದ ಮಂಡಿಸಲು ವಕೀಲರಿಗೆ ಇರುವ ಸ್ವಾತಂತ್ರ್ಯ ಹಾಗೂ ಪ್ರಕರಣಗಳನ್ನು ನಿಷ್ಪಕ್ಷಪಾತವಾಗಿ ನಿರ್ಧರಿಸಲು ನ್ಯಾಯಾಧೀಶರಿಗೆ ಇರುವ ಸ್ವಾತಂತ್ರ್ಯವು ನ್ಯಾಯ ವ್ಯವಸ್ಥೆಯ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಉಳಿಸಿಕೊಳ್ಳಲು ಅತ್ಯಗತ್ಯ ಎಂದು ಹೇಳಿದರು.
“ಹಿರಿಯ ವಕೀಲರು ತಮ್ಮ ಅನುಭವ ಮತ್ತು ಜ್ಞಾನವನ್ನು ಕಿರಿಯ ವಕೀಲರೊಂದಿಗೆ ಹಂಚಿಕೊಳ್ಳುವ ಮೂಲಕ ಹಾಗೂ ನೈತಿಕ ನಡವಳಿಕೆಯನ್ನು ಉತ್ತೇಜಿಸುವ ಮೂಲಕ ಕಾನೂನು ವೃತ್ತಿಗೆ ಮಹತ್ವದ ಕೊಡುಗೆ ನೀಡಬಹುದು” ಎಂದರು.
ಕಿರಿಯ ವಕೀಲರ ವೃತ್ತಿಪರ ಬೆಳವಣಿಗೆಯಲ್ಲಿ ನಿರಂತರ ಅಧ್ಯಯನ, ಶಿಸ್ತು ಮತ್ತು ಸಂಶೋಧನೆಯ ಮಹತ್ವವನ್ನು ಒತ್ತಿಹೇಳಿದ ಅವರು “ವಕೀಲಿಕೆಯ ಆರಂಭಿಕ ವರ್ಷಗಳಲ್ಲಿ ರೂಪುಗೊಳ್ಳುವ ಅಡಿಪಾಯವು ಅವರ ವೃತ್ತಿಪರ ವ್ಯಕ್ತಿತ್ವ ಮತ್ತು ನ್ಯಾಯದ ಆಡಳಿತದ ಬಗೆಗಿನ ದೃಷ್ಟಿಕೋನವನ್ನು ರೂಪಿಸುತ್ತದೆ” ಎಂದು ಹೇಳಿದರು.
“ಕಿರಿಯ ವಕೀಲರಿಗೆ ಸಂಶೋಧನೆ, ಶಿಸ್ತು ಮತ್ತು ನಿರಂತರ ಕಲಿಕೆಯ ಬದ್ಧತೆ ವೃತ್ತಿಪರ ಬೆಳವಣಿಗೆಗೆ ಅನಿವಾರ್ಯವಾಗಿದೆ. ವಕೀಲಿಕೆಯ ಆರಂಭಿಕ ವರ್ಷಗಳಲ್ಲಿ ಹಾಕಿಕೊಳ್ಳುವ ಅಡಿಪಾಯವು ಅವರ ವೃತ್ತಿಪರ ವ್ಯಕ್ತಿತ್ವ ಮತ್ತು ನ್ಯಾಯದ ಆಡಳಿತದ ಬಗೆಗಿನ ನಿಲುವನ್ನು ರೂಪಿಸುತ್ತದೆ” ಎಂದು ಅವರು ತಿಳಿಸಿದರು.
‘ವಕೀಲ ಭೂಷಣ’ ಪ್ರಶಸ್ತಿಯನ್ನು ಬೆಂಗಳೂರಿನ ಬಿ ಸಿ ಪ್ರಭಾಕರ್, ಆರ್ ಬಿ ಸದಾಶಿವಪ್ಪ, ಕುಂದಾಪುರದ ಎ ಎಸ್ ಎನ್ ಹೆಬ್ಬಾರ್, ಮಂಗಳೂರಿನ ಎಂ ವಿ ಶಂಕರ ಭಟ್ ಮತ್ತು ಶಿವಮೊಗ್ಗದ ಕೆ ಬಸಪ್ಪ ಗೌಡ ಅವರಿಗೆ ಪ್ರದಾನ ಮಾಡಲಾಯಿತು.
ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್, ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ಹಾಗೂ ಹಿರಿಯ ವಕೀಲರಾದ ಉದಯ್ ಹೊಳ್ಳ ಮತ್ತು ಕೆ ಜಿ ರಾಘವನ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.