ಆಸ್ಪತ್ರೆಯ ನಿರ್ಲಕ್ಷ್ಯದಿಂದಾಗಿ ಇತ್ತೀಚೆಗೆ ಮೃತಪಟ್ಟ ತಮಿಳುನಾಡಿನ ಹದಿಹರೆಯದ ಫುಟ್‌ಬಾಲ್ ಆಟಗಾರ್ತಿ ಆರ್ ಪ್ರಿಯಾ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವೈದ್ಯರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಕುರಿತು ಆದೇಶ ನೀಡಲು ಮದ್ರಾಸ್ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಘಟನೆಯ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರ ರಚಿಸಿರುವ ತಜ್ಞರ ಸಮಿತಿ ಇನ್ನೂ ತನಿಖೆ ಪೂರ್ಣಗೊಳಿಸಿಲ್ಲ ಎಂಬುದನ್ನು ಗಮನಿಸಿದ ನ್ಯಾ. ಎ ಡಿ ಜಗದೀಶ್ ಚಂದಿರ ಅವರು ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದರು.
ಇದು ಇತ್ತೀಚೆಗಷ್ಟೇ ನಡೆದಿರುವ ಘಟನೆಯಾಗಿದ್ದು ತನಿಖೆಗಾಗಿ ತನಿಖಾ ಸಂಸ್ಥೆಗೆ ಅವಕಾಶ ನೀಡಬೇಕಿದೆ ಎಂದು ತಿಳಿಸಿದ ನ್ಯಾಯಮೂರ್ತಿಗಳು ಸದ್ಯಕ್ಕೆ ಜಾಮೀನು ನೀಡಲು ಒಲವು ತೋರುತ್ತಿಲ್ಲ ಎಂದು ಹೇಳಿದರು. ಆದರೆ ವೈದ್ಯರ ಕುಟುಂಬಸ್ಥರಿಗೆ ಕಿರುಕುಳ ನೀಡದಂತೆ ರಾಜ್ಯ ಸರ್ಕಾರಕ್ಕೆ ಅವರು ಸೂಚಿಸಿದರು.
ಕಳೆದ ನ. 15 ರಂದು ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಬಹು ಅಂಗಾಂಗ ವೈಫಲ್ಯದಿಂದ ಪ್ರಿಯಾ ಸಾವನ್ನಪ್ಪಿದರು, ಈ ಸಾವಿಗೆ ಪೆರಿಯಾರ್ ನಗರದ ಸರ್ಕಾರಿ ಪೆರಿಫೆರಲ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ 34 ವರ್ಷದ ವೈದ್ಯರಾದ ಪಾಲ್ರಾಮಶಂಕರ್ಮತ್ತುಸೋಮಸುಂದರ್ ಅವರನ್ನುಪೊಲೀಸರು ವಶಕ್ಕೆ ಪಡೆದಿದ್ದರು ಘಟನೆಯ ಬಳಿಕ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಆದರೆ ತಾವು ಯಾವುದೇ ನಿರ್ಲಕ್ಷ್ಯ ತೋರಿಲ್ಲ. ಹೀಗಾಗಿ ತಮಗೆ ಬಂಧನದಿಂದ ರಕ್ಷಣೆ ನೀಡುವಂತೆ ಇಬ್ಬರೂ ವೈದ್ಯರು ಹೈಕೋರ್ಟ್ ಮೊರೆ ಹೋಗಿದ್ದರು.