ತೀಸ್ತಾ ಜಾಮೀನು ಮನವಿ: ಗುಜರಾತ್‌ ಸರ್ಕಾರಕ್ಕೆ ನೋಟಿಸ್‌ ನೀಡಿದ ಸುಪ್ರೀಂ ಕೋರ್ಟ್‌

ಗುರುವಾರದಂದು ಪ್ರಕರಣದ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್‌. ಗುಜರಾತ್‌ ಹೈಕೋರ್ಟ್‌ ಮುಂದೆ ವಿಚಾರಣಾ ಪ್ರಕ್ರಿಯೆ ಇರುವಾಗಲೇ ಮಧ್ಯಂತರ ಪರಿಹಾರ ನೀಡುವ ಕುರಿತು ಅಂದು ಆಲಿಸಲಿರುವ ಪೀಠ.
Teesta Setalvad
Teesta Setalvad Facebook
Published on

ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌ ಅವರು ಸಲ್ಲಿಸಿರುವ ಜಾಮೀನು ಮನವಿ ಸಂಬಂಧ ಗುಜರಾತ್‌ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ನೋಟಿಸ್‌ ಜಾರಿ ಮಾಡಿದೆ [ತೀಸ್ತಾ ಅತುಲ್‌ ಸೆಟಲ್ವಾಡ್‌ ಮತ್ತು ಇನ್ನೊಬ್ಬರು ವರ್ಸಸ್‌ ಗುಜರಾತ್‌ ಸರ್ಕಾರ].

2002 ಗೋಧ್ರಾ ಗಲಭೆಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿಅಂದಿನ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳನ್ನು ಸಿಲುಕಿಸುವ ಸಲುವಾಗಿ ತಿರುಚಿದ ದಾಖಲೆಗಳನ್ನು (ಫೋರ್ಜರಿ) ಸಲ್ಲಿಸಿದ ಆರೋಪದಡಿ ತೀಸ್ತಾ ಅವರನ್ನು ಗುಜರಾತ್‌ ಪೊಲೀಸರು ಪ್ರಸ್ತುತ ಬಂಧಿಸಿದ್ದಾರೆ.

ಜಾಮೀನು ಮನವಿಯ ವಿಚಾರಣೆಯನ್ನು ನ್ಯಾ. ಯು ಯು ಲಲಿತ್‌, ಎಸ್‌ ರವೀಂದ್ರ ಭಟ್‌ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಗುರುವಾರ, ಆಗಸ್ಟ್ 25ರಂದು ಆಲಿಸಲಿದೆ. ಇದೇ ವೇಳೆ, ಗುಜರಾತ್‌ ಹೈಕೋರ್ಟ್‌ ಮುಂದೆ ಪ್ರಕರಣದ ವಿಚಾರಣಾ ಪ್ರಕ್ರಿಯೆ ಇರುವುದರ ಹೊರತಾಗಿಯೇ ತೀಸ್ತಾ ಅವರಿಗೆ ಮಧ್ಯಂತರ ಪರಿಹಾರ ಕಲ್ಪಿಸುವ ಬಗ್ಗೆ ನ್ಯಾಯಾಲಯ ಪರಿಶೀಲಿಸಲಿದೆ.

ಪ್ರಕರಣದ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡಾಗ ನ್ಯಾ. ಯು ಯು ಲಲಿತ್‌ ಅವರು 2002ರ ಗುಜರಾತ್‌ ಗಲಭೆಗಳಿಗೆ ಸಂಬಂಧಿಸಿದ ಸೊಹ್ರಾಬುದ್ದೀನ್‌ ಹತ್ಯೆ ಪ್ರಕರಣದಲ್ಲಿ ತಾವು ಈ ಹಿಂದೆ ಕೆಲ ಆರೋಪಿಗಳನ್ನು ಪ್ರತಿನಿಧಿಸಿದ್ದ ವಿಚಾರವನ್ನು ವಕೀಲರ ಗಮನಕ್ಕೆ ತಂದರು. ಆಗ ಸೆಟಲ್ವಾಡ್‌ ಅವರ ಪರ ವಾದಿಸುತ್ತಿರುವ ಹಿರಿಯ ವಕೀಲ ಕಪಿಲ್ ಸಿಬಲ್‌ ಅವರು ಪ್ರಕರಣವನ್ನು ನ್ಯಾ. ಯು ಯು ಲಲಿತ್ ಅವರು ಆಲಿಸಲು ತಮ್ಮ ಅಭ್ಯಂತರವೇನೂ ಇಲ್ಲ ಎಂದರು.

ತಮ್ಮ ವಾದದಲ್ಲಿ ಸಿಬಲ್‌ ಅವರು, "ಪ್ರಕರಣವು ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಮೂಡಿದೆ. ಹೈಕೋರ್ಟ್‌ ಮುಂದೆ ಹೇಗೆ ತಾನೆ ಸೆಕ್ಷನ್‌ 467ರ (ಫೋರ್ಜರಿ) ಪ್ರಕರಣ ಇರಿಸಲು ಸಾಧ್ಯ?" ಎಂದರು. ಅಲ್ಲದೆ, ತಮ್ಮ ಕಕ್ಷಿದಾರರ ವಿರುದ್ಧ ಅಹಮದಾಬಾದ್‌ನಲ್ಲಿ ದಾಖಲಿಸಿರುವ ಪ್ರಥಮ ವರ್ತಮಾನ ವರದಿಯು ಸುಪ್ರೀಂ ಕೋರ್ಟ್‌ ನಡೆಸಿದ ಪ್ರಕರಣದ ವಿಚಾರಣೆಯ ಯಥಾವತ್‌ ನಿರೂಪಿಸಲಾಗಿದೆ ಎಂದು ಅಕ್ಷೇಪಿಸಿದರು.

ವಾದವನ್ನು ಆಲಿಸಿದ ನಂತರ ನ್ಯಾಯಮೂರ್ತಿಗಳು ಕೆಲ ಹೊತ್ತು ತಮ್ಮಲ್ಲೇ ಚರ್ಚೆ ನಡೆಸಿದರು. ನಂತರ ಪ್ರಕರಣದ ಸಂಬಂಧ ಗುಜರಾತ್‌ ಸರ್ಕಾರಕ್ಕೆ ನೋಟಿಸ್ ನೀಡಲು ಆದೇಶಿಸಿ ಪ್ರಕರಣವನ್ನು ಗುರುವಾರ ಪಟ್ಟಿ ಮಾಡಲು ಸೂಚಿಸಿದರು. ಗುಜರಾತ್‌ ಹೈಕೋರ್ಟ್‌ ಮುಂದೆ ಪ್ರಕರಣದ ವಿಚಾರಣಾ ಪ್ರಕ್ರಿಯೆ ಇರುವುದರ ಹೊರತಾಗಿಯೇ ತೀಸ್ತಾ ಅವರಿಗೆ ಮಧ್ಯಂತರ ಪರಿಹಾರ ಕಲ್ಪಿಸುವ ಬಗ್ಗೆ ನ್ಯಾಯಾಲಯ ಅಂದು ಪರಿಶೀಲಿಸಲಿದೆ ಎಂದು ಹೇಳಿದರು.

ಹಿನ್ನೆಲೆ

ಸೆಟಲ್ವಾಡ್ ಮತ್ತು ಗುಜರಾತ್ ಮಾಜಿ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಆರ್‌ ಬಿ ಶ್ರೀಕುಮಾರ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಗಳಿಗೆ ಪ್ರತಿಕ್ರಿಯೆ ನೀಡುವಂತೆ ಗುಜರಾತ್ ಹೈಕೋರ್ಟ್ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಆಗಸ್ಟ್ 2ರಂದು ನೋಟಿಸ್ ನೀಡಿತ್ತು. ಪ್ರಕರಣದ ವಿಚಾರಣೆಯನ್ನು ನಡೆಸಲು ಹೈಕೋರ್ಟ್ ಸೆಪ್ಟೆಂಬರ್ 19ಕ್ಕೆ ಪಟ್ಟಿ ಮಾಡಿತ್ತು.

Also Read
ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋದ ತೀಸ್ತಾ ಸೆಟಲ್ವಾಡ್; ಆಗಸ್ಟ್ 22ರಂದು ಅರ್ಜಿಯ ವಿಚಾರಣೆ

ಆದರೆ, ಜಾಮೀನು ಅರ್ಜಿಯ ಮುಂದಿನ ವಿಚಾರಣೆಯನ್ನು ಇಷ್ಟು ದೀರ್ಘಾವಧಿಯ ನಂತರ ನಿಗದಿಪಡಿಸಿರುವ ಹೈಕೋರ್ಟ್‌ ಕ್ರಮವನ್ನು ಆಕ್ಷೇಪಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸೆಟಲ್ವಾಡ್‌ ಮೇಲ್ಮನವಿ ಸಲ್ಲಿಸಿದ್ದರು. ಸತೇಂದರ್ ಕುಮಾರ್ ಅಂತಿಲ್ ಮತ್ತು ಸಿಬಿಐ ನಡುವಣ ಪ್ರಕರಣದಲ್ಲಿ ಜಾಮೀನು ಪ್ರಕರಣಗಳನ್ನು ತ್ವರಿತವಾಗಿ ಆಲಿಸಬೇಕು ಎಂದು ಸುಪ್ರೀಂ ಕೋರ್ಟ್‌ ಈಗಾಗಲೇ ತೀರ್ಪು ನೀಡಿದೆ. ಆದರೂ ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಜಮೀನು ಅರ್ಜಿಯ ಮೊದಲ ವಿಚಾರಣೆಯನ್ನು ಒಂದೂವರೆ ತಿಂಗಳ ದೀರ್ಘವಧಿ ನಂತರ ನಿಗದಿಪಡಿಸಿದೆ ಎಂದು ಮನವಿಯಲ್ಲಿ ಆಕ್ಷೇಪಿಸಿದ್ದರು. ಪ್ರಕರಣದ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಿತು.

Kannada Bar & Bench
kannada.barandbench.com