ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌ಗೆ ಜಾಮೀನು ಮಂಜೂರು ಮಾಡಿದ ಸುಪ್ರೀಂ ಕೋರ್ಟ್‌

ಪೊಲೀಸ್‌ ವಶಕ್ಕೆ ಪಡೆದು ವಿಚಾರಣೆ ನಡೆಸುವ ಪ್ರಕ್ರಿಯೆ ಮುಗಿದಿರುವುದರಿಂದ ಗುಜರಾತ್‌ ಹೈಕೋರ್ಟ್‌ ತೀಸ್ತಾ ಅವರ ಮಧ್ಯಂತರ ಜಾಮೀನು ಮನವಿಯ ಕೋರಿಕೆಯನ್ನು ಪರಿಗಣಿಸಬೇಕಿತ್ತು ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್‌.
Teesta Setalvad and Supreme Court
Teesta Setalvad and Supreme CourtTeesta Setalvad (Facebook)
Published on

ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌ ಅವರಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಮಧ್ಯಂತರ ಜಾಮೀನು ನೀಡಿದೆ. ಗೋಧ್ರಾ ಗಲಭೆಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಅಂದಿನ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳನ್ನು ಸಿಲುಕಿಸುವ ಸಲುವಾಗಿ ತಿರುಚಿದ ದಾಖಲೆಗಳನ್ನು (ಫೋರ್ಜರಿ) ಸಲ್ಲಿಸಿದ ಆರೋಪ ತೀಸ್ತಾ ಅವರ ಮೇಲಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ಸಲ್ಲಿಸಿರುವ ತಮ್ಮ ಮನವಿಯ ವಿಚಾರಣೆಯನ್ನು ದೀರ್ಘ ಅವಧಿಗೆ ಮುಂದೂಡಿರುವ ಗುಜರಾತ್‌ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ತೀಸ್ತಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು. ಮನವಿಯ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಉದಯ್‌ ಉಮೇಶ್ ಲಲಿತ್‌ ಮತ್ತು ನ್ಯಾ. ರವೀಂದ್ರ ಭಟ್‌ ಮತ್ತು ನ್ಯಾ. ಸುಧಾಂಶು ಧುಲಿಯಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಜಾಮೀನು ಮಂಜೂರು ಮಾಡಿರುವ ನ್ಯಾಯಾಲಯವು ಇದೇ ವೇಳೆ, "ಪ್ರಕರಣವು ಹೈಕೋರ್ಟ್ ಮುಂದೆ ಬಾಕಿ ಇರುವುದರಿಂದ ತೀಸ್ತಾ ಅವರನ್ನು ಬಂಧನದಿಂದ ಬಿಡುಗಡೆ ಮಾಡಬೇಕೆ, ಬೇಡವೇ ಎನ್ನುವ ಬಗ್ಗೆ ಹೈಕೋರ್ಟ್‌ ನಿರ್ಧರಿಸುತ್ತದೆ. ಇಂತಹ ಪ್ರಕರಣಗಳು ಬಾಕಿ ಇರುವಾಗ ಕಸ್ಟಡಿಯಲ್ಲಿರಲು ಒತ್ತಾಯ ಮಾಡಬೇಕೆ, ಜಾಮೀನು ನೀಡಬೇಕೆ ಎನ್ನುವ ವಿಚಾರವನ್ನಷ್ಟೇ ನಾವು ಪರಿಗಣಿಸಿದ್ದೇವೆ. ಈ ಹಿನ್ನೆಲೆಯಲ್ಲಿ ತೀಸ್ತಾ ಸೆಟಲ್ವಾಡ್‌ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದೇವೆ," ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಮುಂದುವರೆದು, ಪೊಲೀಸ್‌ ವಶಕ್ಕೆ ಪಡೆದು ವಿಚಾರಣೆ ನಡೆಸುವ ಪ್ರಕ್ರಿಯೆ ಮುಗಿದಿರುವುದರಿಂದ ಗುಜರಾತ್‌ ಹೈಕೋರ್ಟ್‌ ತೀಸ್ತಾ ಅವರ ಮಧ್ಯಂತರ ಜಾಮೀನು ಮನವಿಯ ಕೋರಿಕೆಯನ್ನು ಪರಿಗಣಿಸಬೇಕಿತ್ತು ಎಂದು ಪೀಠವು ಅಭಿಪ್ರಾಯಪಟ್ಟಿತು. ಸೆಟಲ್ವಾಡ್ ಅವರು ಪ್ರಕರಣದ ವಿಚಾರಣೆಗಾಗಿ 7 ದಿನಗಳ ಕಾಲ ಪೊಲೀಸ್‌ ವಶದಲ್ಲಿ ಇದ್ದುದನ್ನು ಹಾಗೂ ಆನಂತರ ನ್ಯಾಯಾಂಗ ಬಂಧನಕ್ಕೆ ಅವರನ್ನು ನೀಡಿದ್ದನ್ನು ಗಮನಿಸಿತು.

ಅಂತಿಮವಾಗಿ ನ್ಯಾಯಾಲಯವು, "ಸೆಟಲ್ವಾಡ್ ಅವರನ್ನು ಸಂಬಂಧಪಟ್ಟ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಸೂಕ್ತವೆನಿಸುವ ಷರತ್ತಗಳೊಂದಿಗೆ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು. ಹೈಕೋರ್ಟ್‌ ಜಾಮೀನು ಮನವಿಯನ್ನು ನಿರ್ಧರಿಸುವವರೆಗೆ ಅರ್ಜಿದಾರರು ತಮ್ಮ ಪಾಸ್‌ಪೋರ್ಟ್‌ ನ್ಯಾಯಾಲಯದ ವಶಕ್ಕೆ ಒಪ್ಪಿಸಬೇಕು" ಎಂದು ಆದೇಶಿಸಿತು.

ನಿನ್ನೆಯ ವಿಚಾರಣೆ ವೇಳೆ ನ್ಯಾಯಾಲಯವು, ಇದು ಕೊಲೆ ಅಥವಾ ದೈಹಿಕ ನ್ಯೂನತೆ ಉಂಟು ಮಾಡಿರುವಂತಹ ಪ್ರಕರಣವಲ್ಲ. ಇಂತಹ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಒಮ್ಮೆ ಪೊಲೀಸ್‌ ವಶಕ್ಕೆ ಪಡೆದ ನಂತರ ಮತ್ತೆ ವಶಕ್ಕೆ ಪಡೆಯಲು ಪೊಲೀಸರಿಗೆ ಹೆಚ್ಚಿನ ಅಂಶಗಳೇನೂ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಅಲ್ಲದೆ, ಜಾಮೀನು ಅರ್ಜಿಯನ್ನು ದೀರ್ಘ ಅವಧಿಗೆ ಮುಂದೂಡಿರುವ ಗುಜರಾತ್‌ ಹೈಕೋರ್ಟ್ ಆದೇಶವನ್ನು ವಿಶೇಷವಾಗಿ ಗಮನಿಸಿತ್ತು.

ಈ ಹಿನ್ನೆಲೆಯಲ್ಲಿ ಅದು, ತೀಸ್ತಾ ಸೆಟಲ್ವಾಡ್‌ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ದೀರ್ಘ ಅವಧಿಗೆ ಮುಂದೂಡಿರುವ ರೀತಿಯಲ್ಲಿಯೇ ಗುಜರಾತ್‌ ಹೈಕೋರ್ಟ್‌ ಈ ಹಿಂದೆ ದೀರ್ಘ ಅವಧಿಗೆ ಜಾಮೀನು ವಿಚಾರಣೆಗಳನ್ನು ಮುಂದೂಡಿರುವ ಪ್ರಕರಣಗಳ ಮಾಹಿತಿ ನೀಡುವಂತೆ ಗುಜರಾತ್‌ ಸರ್ಕಾರಕ್ಕೆಸೂಚಿಸಿತ್ತು.

Kannada Bar & Bench
kannada.barandbench.com