ತೀಸ್ತಾ ವಿರುದ್ಧದ ಅವ್ಯವಹಾರ ಪ್ರಕರಣ: ಆರೋಪಪಟ್ಟಿ ಸಲ್ಲಿಕೆಯಾಗದ ಕಾರಣ ಬಂಧನದಿಂದ ಸಂಪೂರ್ಣ ರಕ್ಷಣೆ ನೀಡಿದ ಸುಪ್ರೀಂ

ಸಂಬಂಧಿತ ವಿಷಯಗಳಲ್ಲಿ ಆಕೆಗೆ ನ್ಯಾಯಾಲಯಗಳು ಜಾಮೀನು ನೀಡಿದ್ದರಿಂದ ಪ್ರಕರಣದಲ್ಲಿ ಏನೂ ಉಳಿದಿಲ್ಲ ಎಂದು ಪೀಠ ಹೇಳಿದೆ.
Teesta Setalvad
Teesta SetalvadFacebook
Published on

ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್‌ಗೆ ಬಂಧನದಿಂದ ರಕ್ಷಣೆ ನೀಡುವ ತನ್ನ ಹಿಂದಿನ ಆದೇಶವನ್ನು ಸುಪ್ರೀಂ ಕೋರ್ಟ್ ಬುಧವಾರ ಖಾಯಂಗೊಳಿಸಿದೆ [ತೀಸ್ತಾ ಅತುಲ್ ಸೆಟಲ್ವಾಡ್ ಮತ್ತು ಗುಜರಾತ್ ಸರ್ಕಾರ ನಡುವಣ ಪ್ರಕರಣ].

ಪ್ರಕರಣದಲ್ಲಿ ಗಣನೀಯ ಸಮಯ ಕಳೆದುಹೋಗಿದ್ದು ಯಾವುದೇ ಆರೋಪಪಟ್ಟಿ ಈವರೆಗೆ ಸಲ್ಲಿಸಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸುಧಾಂಶು ಧುಲಿಯಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಪೀಠ ತಿಳಿಸಿತು.

ಪ್ರಕರಣಕ್ಕೆ ಸಂಬಂಧಿಸಿದ ಇತರೆ ಪೂರಕ ಪ್ರಕರಣಗಳಲ್ಲಿಯೂ ಆಕೆಗೆ ನ್ಯಾಯಾಲಯಗಳು ಜಾಮೀನು ನೀಡಿದ್ದರಿಂದ ಪ್ರಕರಣದಲ್ಲಿ ಏನೂ ಉಳಿದಿಲ್ಲ ಎಂದು ಪೀಠ ಹೇಳಿದೆ. ಸೆಟಲ್ವಾಡ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದ್ದರು. ಗುಜರಾತ್ ಸರ್ಕಾರವನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಪ್ರತಿನಿಧಿಸಿದ್ದರು.

ಅಹಮದಾಬಾದ್‌ನ ಗುಲ್ಬರ್ಗ್ ಹೌಸಿಂಗ್ ಸೊಸೈಟಿಯಲ್ಲಿ 2002ರ ಕೋಮುಗಲಭೆಯಲ್ಲಿ 60ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಸ್ಮರಣಾರ್ಥ “ಮ್ಯೂಸಿಯಂ ಆಫ್ ರೆಸಿಸ್ಟೆನ್ಸ್” ನಿರ್ಮಿಸಲು ಸಂಗ್ರಹಿಸಲಾದ ಹಣವನ್ನು ದುರುಪಯೋಗಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಟಲ್ವಾಡ್ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

Kannada Bar & Bench
kannada.barandbench.com