ಆರ್‌ಆರ್‌ಆರ್‌ ಸಿನಿಮಾ ಬಿಡುಗಡೆ ವಿರುದ್ಧ ಸಲ್ಲಿಸಲಾಗಿದ್ದ ಪಿಐಎಲ್ ವಜಾಗೊಳಿಸಿದ ತೆಲಂಗಾಣ ಹೈಕೋರ್ಟ್

ಚಿತ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು ಅವರನ್ನು ಕೆಟ್ಟದಾಗಿ ಬಿಂಬಿಸಲಾಗಿದ್ದು ಅವರ ವ್ಯಕ್ತಿತ್ವಕ್ಕೆ ಕಳಂಕ ತರಲಾಗಿದೆ ಎಂದು ಮನವಿಯಲ್ಲಿ ದೂರಲಾಗಿತ್ತು.
ಆರ್‌ಆರ್‌ಆರ್‌ ಸಿನಿಮಾ ಬಿಡುಗಡೆ ವಿರುದ್ಧ ಸಲ್ಲಿಸಲಾಗಿದ್ದ ಪಿಐಎಲ್ ವಜಾಗೊಳಿಸಿದ ತೆಲಂಗಾಣ ಹೈಕೋರ್ಟ್
A1
Published on

ಶೀಘ್ರವೇ ಬಿಡುಗಡೆಯಾಗಲಿರುವ ರಾಜಮೌಳಿ ನಿರ್ದೇಶನದ, ನಟರಾದ ರಾಮ್‌ಚರಣ್‌ ತೇಜ, ಜ್ಯೂನಿಯರ್‌ ಎನ್‌ಟಿಆರ್‌ ಅಭಿನಯದ ಟಾಲಿವುಡ್‌ ಸಿನಿಮಾ ಆರ್‌ಆರ್‌ಆರ್‌ ವಿರುದ್ಧ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ತೆಲಂಗಾಣ ಹೈಕೋರ್ಟ್ ಕಳೆದ ವಾರ ವಜಾಗೊಳಿಸಿದೆ.

ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು ಅವರು ಆಗಿನ ಬ್ರಿಟಿಷ್ ಸರ್ಕಾರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಆರ್‌ಆರ್‌ಆರ್ ಚಿತ್ರದಲ್ಲಿ ತೋರಿಸಲಾಗಿದೆ. ಅಲ್ಲದೆ ಅವರನ್ನು ಕೆಟ್ಟದಾಗಿ ಬಿಂಬಿಸಲಾಗಿದ್ದು ಅವರ ವ್ಯಕ್ತಿತ್ವಕ್ಕೆ ಕಳಂಕ ತರಲಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರಕ್ಕೆ ಸೆನ್ಸಾರ್‌ ಪ್ರಮಾಣ ನೀಡದಂತೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (ಸಿಬಿಎಫ್‌ಸಿ) ನಿರ್ದೇಶಿಸಬೇಕು ಎಂದು ವಿದ್ಯಾರ್ಥಿನಿ ಅಲ್ಲೂರಿ ಸೌಮ್ಯ ಅವರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾ. ಅಭಿನಂದ್‌ ಕುಮಾರ್‌ ಶಾವಿಳಿ ಅವರಿದ್ದ ಪೀಠ ವಜಾಗೊಳಿಸಿತು.

ಸೆನ್ಸಾರ್ ಪ್ರಮಾಣಪತ್ರದ ಸಿಂಧುತ್ವವು ಸವಾಲಿಗೆ ಒಳಪಡದಿರುವ ಹಿನ್ನೆಲೆಯಲ್ಲಿ ಅರ್ಜಿದಾರರಿಗೆ ಪರಿಹಾರ ನೀಡಲು ಯಾವುದೇ ಕಾರಣ ಕಂಡುಬರುತ್ತಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

Also Read
ಗಂಗೂಬಾಯಿ ಕಾಠಿಯಾವಾಡಿ ಚಿತ್ರ ಬಿಡುಗಡೆಗೆ ತಡೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಪ್ರತಿ ಅಫಿಡವಿಟ್‌ ಸಲ್ಲಿಸಿದ್ದ ಸಿಬಿಎಫ್‌ಸಿ ಸಿನಿಮಾ ಕಾಲ್ಪನಿಕ ಕೃತಿಯಾಗಿರುವುದರಿಂದ ಕೆಲ ಸಿನಿಮಾ ಸ್ವಾತಂತ್ರ್ಯವನ್ನು ಅನುಮತಿಸಲಾಗಿದೆ. ಅರ್ಜಿದಾರರ ವಾದವನ್ನು ಒಪ್ಪಿದರೂ ಕೂಡ ರಾಜು ಮತ್ತು ಕೊಮರಂ ಭೀಮ್‌ ಅವರನ್ನು ದೊಡ್ಡ ದೇಶಭಕ್ತರಾಗಿಯೇ ಚಿತ್ರದಲ್ಲಿ ಬಿಂಬಿಸಲಾಗಿದೆ ಎಂದು ಅದು ಹೇಳಿತ್ತು.

ಇತ್ತೀಚೆಗೆ ಬಾಲಿವುಡ್‌ ನಟಿ ಆಲಿಯಾ ಭಟ್‌ ಅಭಿನಯದ ʼಗಂಗೂಬಾಯಿ ಕಾಥಿಯಾವಾಡಿʼ ಸಿನಿಮಾಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್‌ ಹಿತನ್‌ ಧೀರಜ್‌ಲಾಲ್‌ ಮೆಹ್ತಾ ಮತ್ತು ಬನ್ಸಾಲಿ ಪ್ರೊಡಕ್ಷನ್‌ ಚಿತ್ರದಲ್ಲಿ ನೀಡಿದ್ದ ತೀರ್ಪನ್ನು ಅವಲಂಬಿಸಿ ನ್ಯಾಯಾಲಯ ಈ ಆದೇಶ ನೀಡಿದೆ.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

Attachment
PDF
Alluri_Sowmya_v_The_Govt__of_India.pdf
Preview
Kannada Bar & Bench
kannada.barandbench.com