ಕಾನೂನಿನ ಬೆಂಬಲವಿಲ್ಲದೆ ಮುಖಚಹರೆ ಗುರುತು ತಂತ್ರಜ್ಞಾನಕ್ಕೆ (ಎಫ್‌ಆರ್‌ಟಿ) ಅನುಮತಿ ನೀಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ತೆಲಂಗಾಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದ್ದು ಈ ಸಂಬಂಧ ಅದು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಸಾಮಾಜಿಕ ಕಾರ್ಯಕರ್ತ ಎಸ್ ಕ್ಯೂ ಮಸೂದ್ ಸಲ್ಲಿಸಿದ ಅರ್ಜಿಯ ಕುರಿತು ಸರ್ಕಾರ ಮತ್ತು ಪೊಲೀಸರ ಪ್ರತಿಕ್ರಿಯೆ ಕೇಳಿದ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಅಭಿನಂದ್ ಕುಮಾರ್ ಶಾವಿಲಿ ಅವರಿದ್ದ ಪೀಠ ಪ್ರಕರಣದ ಮುಂದಿನ ವಿಚಾರಣೆಯನ್ನು ಜನವರಿ 15ಕ್ಕೆ ಪಟ್ಟಿ ಮಾಡಿದೆ.
ಮೇ 2019 ರಲ್ಲಿ, ನ್ಯಾಯಸಮ್ಮತ ಉದ್ದೇಶಗಳಿಗಾಗಿ ಪ್ರಯಾಣಿಸುತ್ತಿದ್ದಾಗ ತಮ್ಮನ್ನು ತಡೆದ ತೆಲಂಗಾಣ ಪೊಲೀಸರು. ಕಾನೂನು ಉಲ್ಲಂಘಿಸದೇ ಇದ್ದರೂ ತನ್ನ ಒಪ್ಪಿಗೆ ಇಲ್ಲದೆ ಫೋಟೊ ತೆಗೆದಿದರು, ಇದು ಆತಂಕಕ್ಕೆ ಎಡೆ ಮಾಡಿಕೊಟ್ಟಿತು ಎಂದು ಮಸೂದ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ಕಾನೂನಿನ ಬೆಂಬಲವಿಲ್ಲದೆ ಮುಖಚಹರೆ ಗುರುತು ಹಿಡಿದದ್ದು ಖಾಸಗಿತನದ ಮೂಲಭೂತ ಹಕ್ಕಿನ ಉಲ್ಲಂಘನೆ. ಸಾಮೂಹಿಕ ಕಣ್ಗಾವಲಿಗಾಗಿ ಎಫ್ಆರ್ಟಿ ಇದೆಯೇ ವಿನಾ ನಿರ್ದಿಷ್ಟ ಚಿಕ್ಕ ಅಗತ್ಯಗಳಿಗೆ ಅಲ್ಲ ಮನಸೋಇಚ್ಛೆಯಾಗಿ ಎಫ್‌ಆರ್‌ಟಿ ಬಳಕೆ ಮಾಡುತ್ತಿರುವುದರಿಂದ ಸಂವಿಧಾನದ 14ನೇ ವಿಧಿಯ ಅಡಿ ಒದಗಿಸಲಾದ ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಹಾಗಾಗಿ, ಎಫ್‌ಆರ್‌ಟಿ ತಂತ್ರಜ್ಞಾನದ ಬಳಕೆಯನ್ನು ನಿಷೇಧಿಸುವುದರ ಜೊತೆಗೆ ಅರ್ಜಿಯ ವಿಲೇವಾರಿಯಾಗುವವರೆಗೆ ತಂತ್ರಜ್ಞಾನದ ಬಳಕೆಯನ್ನು ರದ್ದುಪಡಿಸುವಂತೆ ಮಧ್ಯಂತರ ಆದೇಶ ನೀಡಲು ಅರ್ಜಿದಾರರು ಕೋರಿದ್ದಾರೆ. ಅರ್ಜಿದಾರರ ಪರ ವಕೀಲ ಮನೋಜ್ ರೆಡ್ಡಿ ವಾದ ಮಂಡಿಸಿದರು.