ಸಂಸತ್ ಸದಸ್ಯರು (ಸಂಸದರು) ಮತ್ತು ವಿಧಾನಸಭೆ ಸದಸ್ಯರ (ಶಾಸಕರು) ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳ ವಿಚಾರಣೆಗೆ ವೇಗ ನೀಡುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನಗಳನ್ನು ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಜಾರಿಗೆ ತರುವುದಕ್ಕಾಗಿ ತೆಲಂಗಾಣ ಹೈಕೋರ್ಟ್ ತನ್ನ ರಿಜಿಸ್ಟ್ರಿಗೆ ಈಚೆಗೆ ನಿರ್ದೇಶನ ನೀಡಿದೆ.
ಇಂತಹ ಕ್ರಿಮಿನಲ್ ಪ್ರಕರಣಗಳು ಬೀರುವ ಪರಿಣಾಮವನ್ನು ಕಳೆದ ವರ್ಷ ಎತ್ತಿ ತೋರಿಸಿದ್ದ ಸುಪ್ರೀಂ ಕೋರ್ಟ್ ಈ ಪ್ರಕರಣಗಳ ತುರ್ತು ಮತ್ತು ಸಮರ್ಥ ನ್ಯಾಯಾಂಗ ಪ್ರಕ್ರಿಯೆ ನಡೆಯಲು ಅನುವಾಗುವಂತೆ ಕೆಲ ನಿರ್ದೇಶನಗಳನ್ನು ನೀಡಿತ್ತು.
ಅದರಂತೆ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಟಿ ವಿನೋದ್ ಕುಮಾರ್ ಅವರಿದ್ದ ಪೀಠ ನಿರ್ದೇಶನ ಜಾರಿಗಾಗಿ ಸ್ವಯ ಪ್ರೇರಿತ ರಿಟ್ ಅರ್ಜಿಯ ವಿಚಾರಣೆ ಆರಂಭಿಸಿದೆ.
ಸಂಸದರು ಮತ್ತು ಶಾಸಕರ ವಿರುದ್ಧ ಬಾಕಿ ಉಳಿದಿರುವ ಕ್ರಿಮಿನಲ್ ಪ್ರಕರಣಗಳ ಮಾಹಿತಿ ಇರುವ ವರದಿ ಸಲ್ಲಿಸುವಂತೆ ಪೀಠ ನವೆಂಬರ್ 24, 2023 ರಂದು ಹೈಕೋರ್ಟ್ ರಿಜಿಸ್ಟ್ರಿಗೆ ಸೂಚನೆ ನೀಡಿತ್ತು. ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ಇತ್ಯರ್ಥವಾಗದ ಪ್ರಕರಣಗಳ ಬಾಕಿಯಲ್ಲಿ ಉಂಟಾಗಿರುವ ಏರಿಕೆಯನ್ನು ವರದಿ ಎತ್ತಿ ತೋರಿಸಿತು.
ನಿರ್ದಿಷ್ಟವಾಗಿ 143 ಪ್ರಕರಣಗಳು ಹೆಚ್ಚಳವಾಗಿರುವುದು ಮತ್ತು ಒಟ್ಟು ಬಾಕಿ ಪ್ರಕರಣಗಳ ಸಂಖ್ಯೆ 258ಕ್ಕೆ ಏರಿಕೆಯಾಗಿರುವುದನ್ನು ವರದಿ ವಿವರಿಸಿತ್ತು. 235 ಪ್ರಕರಣಗಳಲ್ಲಿ ಸಮನ್ಸ್ ಜಾರಿ ಮಾಡಿದ್ದರೂ, ಪೊಲೀಸರು ಕೇವಲ ಎರಡು ಪ್ರಕರಣಗಳಲ್ಲಿ ಆರೋಪಿಗಳನ್ನು ಹಾಜರುಪಡಿಸಿದ್ದಾರೆ ಎಂದು ತಿಳಿದು ಬಂದಿತ್ತು.
ಅಲ್ಲದೆ, ಕಳೆದ ವಿಚಾರಣೆಯ ನಂತರ ಸಿಬಿಐ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಡಿಸ್ಚಾರ್ಜ್ ಅರ್ಜಿಗಳು ಇತ್ಯರ್ಥವಾಗಲಿಲ್ಲ ಮತ್ತು ನವೆಂಬರ್ 24ರ ಆದೇಶದ ನಂತರ ಯಾವುದೇ ತೀರ್ಪು ಪ್ರಕಟವಾಗಿಲ್ಲ. ಜುಲೈ 3 ರಂದು ಹೈಕೋರ್ಟ್ ಪ್ರಕರಣದ ಮುಂದಿನ ವಿಚಾರಣೆ ನಡೆಸಲಿದೆ.