ಮೆಸೆಂಜರ್ ಆಪ್ ಬಳಕೆ: ಸೇನಾಧಿಕಾರಿಗೆ ವಿಧಿಸಿದ್ದ ಶಿಕ್ಷೆ ರದ್ದುಗೊಳಿಸಿದ ತೆಲಂಗಾಣ ಹೈಕೋರ್ಟ್

ಆದಾಗ್ಯೂ, ಸೇನಾ ನಿಯಮಗಳಿಗೆ ಅನುಸಾರವಾಗಿ ಅಧಿಕಾರಿಯ ವಿರುದ್ಧ ಮತ್ತೆ ಕ್ರಮ ಕೈಗೊಳ್ಳಲು ನ್ಯಾಯಾಲಯ ಅಧಿಕಾರಿಗಳಿಗೆ ಸ್ವಾತಂತ್ರ್ಯ ನೀಡಿತು. ಅಂತಹ ಸಂದರ್ಭದಲ್ಲಿ ಅಧಿಕಾರಿಗಳು ಸಹಾನುಭೂತಿಯಿಂದ ನಡೆದುಕೊಳ್ಳುವಂತೆ ಆದೇಶಿಸಲಾಯಿತು.
Telangana High Court
Telangana High Court

ತನ್ನ ಮೊಬೈಲ್ ಫೋನ್‌ನಲ್ಲಿ "ಮೆಸೆಂಜರ್" ಅಪ್ಲಿಕೇಶನ್ ಬಳಸಿದ್ದ ಸೇನಾಧಿಕಾರಿಗೆ ವಿಧಿಸಲಾಗಿದ್ದ ʼತೀವ್ರ ವಾಗ್ದಂಡನೆʼ ಶಿಕ್ಷೆಯನ್ನು ತೆಲಂಗಾಣ ಹೈಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿದೆ [ಸುಬೇದಾರ್ ರಾಧಾ ಕೃಷ್ಣ ತಿವಾರಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ನ್ಯಾ. ಪಿ ಮಾಧವಿ ದೇವಿ ಅವರು ಅಧಿಕಾರಿಯ ಬಡ್ತಿ ರದ್ದತಿ ಆದೇಶ ರದ್ದುಗೊಳಿಸಿದರೂ ಸೇನಾ ನಿಯಮಗಳಿಗೆ ಅನುಸಾರವಾಗಿ ಅಧಿಕಾರಿಯ ವಿರುದ್ಧ ಮತ್ತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಅನುಮತಿ ನೀಡಿದರು.

ಅಧಿಕಾರಿಗೆ ನೀಡಲಾದ "ತೀವ್ರ ವಾಗ್ದಂಡನೆ" ಶಿಕ್ಷೆ ಉಪದ್ರವಿಯಲ್ಲ ಎಂದು ತೋರುತ್ತಿದ್ದರೂ, ಅದು ಅವರ ಸೇವೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಮತ್ತು ಸ್ಪಷ್ಟವಾಗಿ  ಅತಿರೇಕದ್ದಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಆದ್ದರಿಂದ, ಅಧಿಕಾರಿಗಳು ಮತ್ತೊಮ್ಮೆ ಅಧಿಕಾರಿಯ ವಿರುದ್ಧ ವಿಚಾರಣೆ ನಡಸಿದರೆ ಆಗ ಸಹಾನಭೂತಿಯಾಗಿ ವರ್ತಿಸುವಂತೆ ನ್ಯಾಯಾಲಯ ಕಿವಿಮಾತು ಹೇಳಿದೆ.

ಫೋನ್‌ನಲ್ಲಿ "ಜೂಮ್" ಮತ್ತು ಶೇರ್-ಚಾಟ್ ಅಪ್ಲಿಕೇಷನ್‌ಗಳು ಸೇನಾಧಿಕಾರಿಯ ಫೋನ್‌ನಲ್ಲಿ ಪತ್ತೆಯಾಗಿದ್ದವು. ಆದರೆ ಅವುಗಳನ್ನು ಅವರು ಬಳಸುತ್ತಿರಲಿಲ್ಲ. ಮೆಸೆಂಜರ್‌ ಅಪ್ಲಿಕೇಷನ್‌ ಮಾತ್ರ ಬಳಸುತ್ತಿದ್ದರು. ಸೇನೆಯ ಸಾಮಾಜಿಕ ಮಾಧ್ಯಮ ನೀತಿಯ ಉಲ್ಲಂಘನೆಗಾಗಿ ವಾಗ್ದಂಡನೆ ಜೊತೆಗೆ ಅವರಿಗೆ ಬಡ್ತಿ ನೀಡುವುದನ್ನು ತಡೆ ಹಿಡಿಯಲಾಗಿತ್ತು. ಈ ಹಿನ್ನೆಲೆಯಲ್ಲಿ ಸೇನಾಧಿಕಾರಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ವಾದಗಳನ್ನು ಆಲಿಸಿದ ನ್ಯಾಯಾಲಯ ಅಧಿಕಾರಿಗೆ ನೋಟಿಸ್ ನೀಡದೆ ಬಡ್ತಿ ರದ್ದುಪಡಿಸಿರುವ ಆದೇಶವು ಕಾನೂನಿನ ಪ್ರಕಾರ ಜಾರಿಯಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಆದ್ದರಿಂದ ವಾಗ್ದಂಡನೆ ಮತ್ತು ಬಡ್ತಿ ರದ್ದತಿ ಆದೇಶ ರದ್ದುಗೊಳಿಸಿದ ನ್ಯಾಯಾಲಯ ಪ್ರಕರಣವನ್ನು ಮರುಪರಿಶೀಲಿಸಲು ಸೇನಾಧಿಕಾರಿಗಳಿಗೆ ಅವಕಾಶ ನೀಡಿತು. ಪ್ರಕರಣವನ್ನು ಸೇನೆ ಹೊಸದಾಗಿ ಪರಿಗಣಿಸಲು ನಿರ್ಧರಿಸಿದರೆ ಕಮಾಂಡಿಂಗ್ ಆಫೀಸರ್ ಶ್ರೇಣಿಯ ಇನ್ನೊಬ್ಬ ಅಧಿಕಾರಿ ವಿಚಾರಣೆ ನಡೆಸಬೇಕು ಎಂದು ಅದು ಸೂಚಿಸಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Kannada Bar & Bench
kannada.barandbench.com