ಕೆರೆ ಒತ್ತುವರಿ ಆರೋಪದ ಹಿನ್ನೆಲೆಯಲ್ಲಿ ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಒಡೆತನದ ಹೈದರಾಬಾದ್‌ನ ಎನ್- ಕನ್‌ವೆನ್ಷನ್ ಸೆಂಟರ್ ಎನ್ನುವ ಸಭಾಂಗಣದ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ತೆಲಂಗಾಣ ಹೈಕೋರ್ಟ್ ಆದೇಶಿಸಿದೆ. ಆ ಮೂಲಕ ತೆರವು ಕಾರ್ಯಾಚರಣೆಯನ್ನು ತಡೆ ಹಿಡಿದಿದೆ.
ತನಗೆ ಶೋಕಾಸ್ ನೋಟಿಸ್ ನೀಡಿಲ್ಲ ಎಂದು ನಾಗಾರ್ಜುನ ಅವರು ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ನೋಟಿಸ್ ನೀಡಿದ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಅಧಿಕಾರಿಗಳಿಗೆ ನ್ಯಾಯಮೂರ್ತಿ ಟಿ ವಿನೋದ್ ಕುಮಾರ್ ಸೂಚಿಸಿದರು.
ಅಧಿಕಾರಿಗಳು ಶೋಕಾಸ್ ನೋಟಿಸ್ ನೀಡಿರುವುದಾಗಿ ಹೇಳಿಕೊಂಡಿದ್ದರೂ ನಾಗಾರ್ಜುನ ಅವರು ಇದನ್ನು ಪ್ರಶ್ನಿಸಿದ್ದಾರೆ. ಹೀಗಾಗಿ ತಾನು ಆದೇಶ ನೀಡುವ ಮೊದಲು ಅರ್ಜಿದಾರರಿಗೆ ನೋಟಿಸ್ ನೀಡಿದ ವಿಧಾನವನ್ನು ನ್ಯಾಯಾಲಯಕ್ಕೆ ವಿವರಿಸುವುದು ಅಗತ್ಯ ಎಂದು ನ್ಯಾಯಾಲಯ ಆಗಸ್ಟ್ 24ರ ಆದೇಶದಲ್ಲಿ ತಿಳಿಸಿದೆ.
ತನಗೆ ಯಾವುದೇ ಸೂಚನೆ ನೀಡದೆ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (GHMC) ಮತ್ತು ಹೈದರಾಬಾದ್ ವಿಪತ್ತು ನಿರ್ವಹಣೆ ಮತ್ತು ಸ್ವತ್ತು ನಿರ್ವಹಣೆ ಹಾಗೂ ರಕ್ಷಣಾ ಸಂಸ್ಥೆ (HYDRAA) ಕೈಗೊಂಡಿದ್ದ ತೆರವು ಕಾರ್ಯಾಚರಣೆ ಪ್ರಶ್ನಿಸಿ ನಟ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಆಗಸ್ಟ್ 8, 2024ರಂದು ನೀಡಲಾಗಿದ್ದ ಆದೇಶದ ಪ್ರತಿ ತನ್ನ ಕೈಸೇರುವ ಮುನ್ನವೇ ಅಧಿಕಾರಿಗಳು ಆಗಸ್ಟ್ 24ರಂದು ತೆರವು ಕಾರ್ಯಾಚರಣೆ ನಡೆಸಿದ್ದು ಕಾರ್ಯಾಚರಣೆ ಬಳಿಕವಷ್ಟೇ ಆದೇಶದ ಪ್ರತಿ ನೀಡಲಾಗಿದೆ ಎಂದು ಅವರು ದೂರಿದ್ದರು.
ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಪೌರಾಡಳಿತ ಮತ್ತು ನಗರಾಭಿವೃದ್ಧಿ (ಎಂಎ ಮತ್ತು ಯುಡಿ) ಇಲಾಖೆ ಈ ಹಿಂದೆ ಹೊರಡಿಸಿದ್ದ ಹಾಗೂ ಈಗಲೂ ಜಾರಿಯಲ್ಲಿರುವ ಆದೇಶವನ್ನು ತೆರವು ಕಾರ್ಯಾಚರಣೆ ಉಲ್ಲಂಘಿಸಿದೆ. ಅಲ್ಲದೆ ಅನಧಿಕೃತ ನಿರ್ಮಾಣಗಳೆಂದು ಆರೋಪಿಸಲಾದ ಕಟ್ಟಡಗಳನ್ನು ತೆರವುಗೊಳಿಸಲು ನೀಡಲಾಗುವ 15 ದಿನಗಳ ಕಾಲಾವಕಾಶಕ್ಕೂ ಬದ್ಧವಾಗಿರದೆ ನೆಲಸಮ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅವರು ವಾದಿಸಿದ್ದರು.
ಆದರೆ ನಾಗಾರ್ಜುನ ಅವರ ಕಟ್ಟಡ ಅನಧಿಕೃತವಾದುದಾಗಿದ್ದು ತಮ್ಮಡಿಕುಂಟ ಕೆರೆಯ ಪೂರ್ಣ ಕೆರೆ ಮಟ್ಟ (ಎಫ್‌ಟಿಎಲ್) ಮತ್ತು ಬಫರ್ ವಲಯದ ವ್ಯಾಪ್ತಿಗೆ ಬರುತ್ತದೆ ಎಂದು ಪ್ರತಿಪಾದಿಸಿದ ಅಧಿಕಾರಿಗಳು ಕಾನೂನಿನ ಪ್ರಕಾರವೇ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ವಾದಿಸಿದ್ದಾರೆ.
ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಕಾಯಿದೆ, 1955ರ ಸೆಕ್ಷನ್ 405 (ಎ) ಪ್ರಕಾರ, ಅಂತಹ ವಲಯಗಳಲ್ಲಿ ಅನಧಿಕೃತ ಕಟ್ಟಡಗಳನ್ನು ಕೆಡವಲು ಯಾವುದೇ ನೋಟಿಸ್ ನೀಡುವ ಅಗತ್ಯವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ವಾದ ಆಲಿಸಿದ ನ್ಯಾಯಾಲಯ ನೋಟಿಸ್ ನೀಡಿದ ವಿಧಾನವನ್ನು ಅಧಿಕಾರಿಗಳು ತನಗೆ ವಿವರಿಸಬೇಕು ಎಂದಿತು.
ಅಲ್ಲದೆ ಅಧಿಕಾರಿಗಳು ತಮ್ಮಡಿಕುಂಟ ಕೆರೆಯ ಎಫ್‌ಟಿಎಲ್ ವಿಸ್ತೀರ್ಣ 29 ಎಕರೆ ಎಂದು ಹೇಳಿದ್ದು ಮತ್ತೊಂದೆಡೆ ಆಂಧ್ರಪ್ರದೇಶ ಭೂಕಬಳಿಕೆ (ನಿಷೇಧ) ಕಾಯಿದೆ ಅಡಿಯಲ್ಲಿ ಹಿಂದಿನ ಪ್ರಕ್ರಿಯೆಗಳು ಸುಮಾರು 20 ಎಕರೆಗಳಷ್ಟು ವಿಸ್ತೀರ್ಣ ಎಂದಿವೆ. ಈ ವ್ಯತ್ಯಾಸವನ್ನು ನ್ಯಾಯಾಲಯ ಗಮನಿಸಿದೆ.
"ಅಧಿಕಾರಿಗಳ ನಿಲುವು ವಿಶೇಷ ನ್ಯಾಯಾಲಯದ ಮುಂದೆ ತೆಗೆದುಕೊಂಡ ನಿಲುವಿಗೆ ವಿರುದ್ಧವಾಗಿರುವುದರಿಂದ ಅಧಿಕಾರಿಗಳು ವಾಸ್ತವಿಕ ಸಮೀಕ್ಷೆ ನಡೆಸಿ ಕೆರೆಯ ವಿಸ್ತೀರ್ಣವನ್ನು ನಿರ್ಧರಿಸದೆ ಕೆರೆ 29 ಎಕರೆ 24 ಗುಂಟೆಯಲ್ಲಿ ಹರಡಿಕೊಂಡಿದೆ ಎಂದು ಹೇಳಿದ್ದು ಈ ಸಂಬಂಧ ಹೂಡಲಾಗಿದ್ದ ಸಿವಿಲ್ ಮೊಕದ್ದಮೆಯ ತೀರ್ಪು ಇನ್ನೂ ಬಾಕಿ ಉಳಿದಿದೆ”” ಎಂದು ನ್ಯಾಯಾಲಯ ಹೇಳಿದೆ.
ಇದಲ್ಲದೆ ಇಲಾಖೆ ಹೊರಡಿಸಿದ್ದ ಯಥಾಸ್ಥಿತಿ ಆದೇಶ ಇನ್ನೂ ಜಾರಿಯಲ್ಲಿರುವಾಗಲೇ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಬಾರದು ಎಂದು ನ್ಯಾಯಾಲಯ ಮೇಲ್ನೋಟಕ್ಕೆ ತಿಳಿಸಿತು. ಅದರಂತೆ ಯಥಾಸ್ಥಿತಿ ಆದೇಶ ಜಾರಿಗೊಳಿಸಿದ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 9 ಕ್ಕೆ ಮುಂದೂಡಿದೆ.