ತೃತೀಯಲಿಂಗಿಗಳ ಘನತೆಗೆ ಮಾರಕ: 1919ರ ತೆಲಂಗಾಣ ನಪುಂಸಕ ಕಾಯಿದೆ ರದ್ದುಗೊಳಿಸಿದ ಹೈಕೋರ್ಟ್

ತೃತೀಯ ಲಿಂಗಿ ವ್ಯಕ್ತಿಗಳಿಗೆ ಶೈಕ್ಷಣಿಕವಾಗಿ ಮತ್ತು ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು ಕ್ರಮ ಕೈಗೊಳ್ಳುವಂತೆಯೂ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.
transgender community
transgender community

ತೃತೀಯ ಲಿಂಗಿ ವ್ಯಕ್ತಿಗಳ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವುದಲ್ಲದೆ ಅವರ ಘನತೆಗೆ ಧಕ್ಕೆ ತರುತ್ತದೆ ಎಂಬ ಕಾರಣಕ್ಕೆ ತೆಲಂಗಾಣ ನಪುಂಸಕ ಕಾಯಿದೆಯನ್ನು ಅಸಾಂವಿಧಾನಿಕ ಎಂದಿರುವ ರಾಜ್ಯ ಹೈಕೋರ್ಟ್‌ ಅದನ್ನು ಇತ್ತೀಚೆಗೆ ರದ್ದುಗೊಳಿಸಿದೆ [ವಿ ವಸಂತ ಮೊಗ್ಲಿ ಮತ್ತು ತೆಲಂಗಾಣ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಕಾಯಿದೆ ತೃತೀಯ ಲಿಂಗಿ ವ್ಯಕ್ತಿಗಳ ಖಾಸಗಿ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದು ಇದು ಸ್ಪಷ್ಟವಾಗಿ ಮನಸೋಇಚ್ಛೆಯಿಂದ ಕೂಡಿದೆ ಎಂಬುದಾಗಿ ಮುಖ್ಯ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಮತ್ತು ನ್ಯಾಯಮೂರ್ತಿ ಸಿ ವಿ ಭಾಸ್ಕರ್ ರೆಡ್ಡಿ ಅವರಿದ್ದ ಪೀಠ ತಿಳಿಸಿದೆ.

ಹುಡುಗರನ್ನು ಅಪಹರಿಸುವ, ಅವರ ಪುರುಷತ್ವ ಕಸಿದುಕೊಳ್ಳುವ ಅಥವಾ ಅಸ್ವಾಭಾವಿಕ ಅಪರಾಧ ಎಸಗುವ ಇಲ್ಲವೇ ಅಂತಹ ಕೃತ್ಯಗಳಿಗೆ ಪ್ರೋತ್ಸಾಹಿಸುವವರ ಹೆಸರನ್ನು ನೋಂದಾಯಿಸಿಕೊಳ್ಳುವುದು ಕಡ್ಡಾಯ ಎಂದು ತೆಲಂಗಾಣ ನಪುಂಸಕರ ಕಾಯಿದೆ- 1919 ಹೇಳುತ್ತಿತ್ತು.

ಅಲ್ಲದೆ ತೃತೀಯ ಲಿಂಗಿಗಳು ಸ್ತ್ರೀ ವೇಷ ಅಥವಾ ಆಭರಣ ತೊಟ್ಟಿದ್ದು ಕಂಡುಬಂದರೆ ಇಲ್ಲವೇ ರಸ್ತೆ ಅಥವಾ ಸಾರ್ವಜನಿಕ ಸ್ಥಳದಲ್ಲಿ ಹಾಡುವುದು, ನೃತ್ಯ ಮಾಡುವುದು ಅಥವಾ ಸಾರ್ವಜನಿಕ ಮನರಂಜನೆಯಲ್ಲಿ ಭಾಗವಹಿಸುವುದು ಕಂಡುಬಂದರೆ ವಾರಂಟ್ ಇಲ್ಲದೆ ಬಂಧಿಸಲು ಕಾಯಿದೆ ಅನುಮತಿ ನೀಡಿತ್ತು. ಅಲ್ಲದೆ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ಸಹ ನಿಗದಿಪಡಿಸಲಾಗಿತ್ತು.

ಜೊತೆಗೆ ಹದಿನಾರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗನ ಸಹವಾಸದಲ್ಲಿರುವ ತೃತೀಯ ಲಿಂಗಿ ವ್ಯಕ್ತಿಯನ್ನು ವಾರೆಂಟ್‌ ಇಲ್ಲದೆ ಬಂಧಿಸಬಹುದು ಮತ್ತು ಎರಡು ವರ್ಷಗಳವರೆಗೆ ಅಂತಹವರಿಗೆ ಸೆರೆವಾಸ ವಿಧಿಸಬಹುದು ಎಂದು ಕಾಯಿದೆ ಹೇಳಿತ್ತು.

ತೀರ್ಪಿನಲ್ಲಿ ನ್ಯಾಯಾಲಯ “ಕಾಯಿದೆ ತೃತೀಯ ಲಿಂಗಿ ಸಮುದಾಯದ ಮಾನವ ಹಕ್ಕುಗಳನ್ನು ಉಲ್ಲಂಘಿಸಲಿದ್ದು ಜೊತೆಗೆ ಇದು ಅವರ ಖಾಸಗಿ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಿ ಅವರ ಘನತೆಗೆ ಧಕ್ಕೆ ತರುತ್ತದೆ. ಹೀಗಾಗಿ ಇದು ತೃತೀಯ ಲಿಂಗಿ ವ್ಯಕ್ತಿಗಳ ಗೌಪ್ಯತಾ ಹಕ್ಕು ಮತ್ತು ಘನತೆಯ ಹಕ್ಕಗಳೆರಡಕ್ಕೂ ಮಾರಕವಾಗಿದೆ. ಇದು ಸಂವಿಧಾನದ 14ನೇ ವಿಧಿಯನ್ನಷ್ಟೇ ಅಲ್ಲದೆ 21ನೇ ವಿಧಿಯನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ" ಎಂದು ಹೇಳಿದೆ.

Also Read
ತೃತೀಯ ಲಿಂಗಿ ಕೈದಿಗಳಿಗೆ ಪ್ರತ್ಯೇಕ ಜೈಲು ಕೋಣೆ: ಕೇಂದ್ರದ ಮಾರ್ಗಸೂಚಿ ತಪ್ಪದೆ ಪಾಲಿಸಲು ಸೂಚಿಸಿದ ಪಾಟ್ನಾ ಹೈಕೋರ್ಟ್

ಎನ್‌ಎಎಲ್‌ಎಸ್‌ಎ ಪ್ರಕರಣ, ಕೆ.ಎಸ್.ಪುಟ್ಟಸ್ವಾಮಿ ಪ್ರಕರಣ ಮತ್ತು ನವತೇಜ್ ಸಿಂಗ್ ಜೋಹರ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪುಗಳನ್ನು ಆಧರಿಸಿ ಈ ತೀರ್ಪು ನೀಡಲಾಗಿದೆ.

ಗಮನಾರ್ಹವಾಗಿ ತೃತೀಯ ಲಿಂಗಿ ವ್ಯಕ್ತಿಗಳಿಗೆ ಶೈಕ್ಷಣಿಕ ಮತ್ತು ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ. ಅಲ್ಲದೆ ತೆಲಂಗಾಣ ಸರ್ಕಾರ 2014ರಲ್ಲಿ ಜಾರಿಗೆ ತಂದಿದ್ದ ಆಸರಾ ಪಿಂಚಣಿ ಯೋಜನೆಯ ಸೌಲಭ್ಯಗಳನ್ನು ತೃತೀಯ ಲಿಂಗಿ ವ್ಯಕ್ತಿಗಳಿಗೆ ವಿಸ್ತರಿಸಬೇಕು ಎಂದು ಕೂಡ ಅದು ನಿರ್ದೇಶಿಸಿದೆ.

ಹೆಚ್ಚುವರಿಯಾಗಿ, ತೃತೀಯ ಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣಾ) ಕಾಯಿದೆ- 2019, ಮತ್ತು ತೃತೀಯ ಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣಾ) ನಿಯಮಾವಳಿ 2020ನ್ನು ಸೂಕ್ತ ರೀತಿಯಲ್ಲಿ ಜಾರಿಗೆ ತರುವ ಸಂಬಂಧ ಆ ಸಮುದಾಯದ ಏಳಿಗೆಗೆ ರಾಜ್ಯ ಸರ್ಕಾರ ಕೈಗೊಂಡಿರುವ ವಿವಿಧ ಕ್ರಮಗಳ ಮೇಲ್ವಿಚಾರಣೆ ನಡೆಸುವಂತೆ ರಾಜ್ಯ ತೃತೀಯ ಲಿಂಗಿಗಳ ಕಲ್ಯಾಣ ಮಂಡಳಿಗೆ ನ್ಯಾಯಾಲಯ ತಿಳಿಸಿದೆ.  

ಕಾಯಿದೆ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್‌) ಸಲ್ಲಿಸಲಾಗಿತ್ತು. ಈ ಮೊಕದ್ದಮೆಯ ಜೊತೆಗೆ ಶೈಕ್ಷಣಿಕವಾಗಿ ಮತ್ತು ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು ಕೋರಿದ್ದ ಹಾಗೂ ಆಸರಾ ಯೋಜನೆಯಡಿ ಮೂರು ತಿಂಗಳ ಸಾಮಾಜಿಕ ಭದ್ರತಾ ಪಿಂಚಣಿ ನೀಡುವಂತೆ ಮನವಿ ಮಾಡಿದ್ದ ಇನ್ನೆರಡು ಅರ್ಜಿಗಳನ್ನೂ ಪೀಠ ಆಲಿಸಿ ತೀರ್ಪು ನೀಡಿದೆ.

Related Stories

No stories found.
Kannada Bar & Bench
kannada.barandbench.com