ದೇವಾಲಯಗಳು ಸಂಸ್ಕೃತಿಯ ಪ್ರತೀಕ ಎಂದ ಮದ್ರಾಸ್‌ ಹೈಕೋರ್ಟ್‌; ಸ್ಮಾರಕಗಳ ಕುರಿತ 2021ರ ತೀರ್ಪು ಜಾರಿಗೆ ನಿರ್ದೇಶನ

ಪರಂಪರೆ ಆಯೋಗ ರಚಿಸಬೇಕು ಮತ್ತು ಧಾರ್ಮಿಕ ಸಂಸ್ಥೆಗಳನ್ನು ಮಹಾಲೆಕ್ಕ ಪರಿಶೋಧಕರು ಆಡಿಟ್ ಮಾಡುವುದೂ ಸೇರಿದಂತೆ ವಿವಿಧ ನಿರ್ದೇಶನಗಳನ್ನು ನ್ಯಾಯಾಲಯ 2021ರ ತೀರ್ಪಿನಲ್ಲಿ ನೀಡಿತ್ತು.
Madurai Meenakshi Temple
Madurai Meenakshi TempleImage for representative purpose

ಐತಿಹಾಸಿಕ ಸ್ಮಾರಕ, ತಾಣ, ದೇವಾಲಯ ಹಾಗೂ ಅವುಗಳ ಆಸ್ತಿ ರಕ್ಷಿಸುವ ಕುರಿತು ವಿವಿಧ ನಿರ್ದೇಶನಗಳನ್ನು ನೀಡಿ ನ್ಯಾಯಾಲಯ ಹೊರಡಿಸಿದ್ದ 2021ರ ತೀರ್ಪನ್ನು ಜಾರಿಗೆ ತರುವಂತೆ ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ತಾಕೀತು ಮಾಡಿದೆ. ದೇವಾಲಯಗಳು ರಾಜ್ಯದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯ ಪ್ರತೀಕಗಳಾಗಿವೆ ಎಂದು ಈ ಸಂದರ್ಭದಲ್ಲಿ ಅದು ತಿಳಿಸಿದೆ.

ಜೂನ್ 2ರಂದು ಹೊರಡಿಸಿರುವ ಆದೇಶದಲ್ಲಿ, ನ್ಯಾಯಮೂರ್ತಿಗಳಾದ ಆರ್ ಮಹದೇವನ್ ಮತ್ತು ಪಿ ಡಿ ಆದಿಕೇಶವಲು ಅವರು ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಎರಡು ಮರುಪರಿಶೀಲನಾ ಅರ್ಜಿಗಳನ್ನು ವಿಲೇವಾರಿ ಮಾಡಿದರು. ನ್ಯಾಯಾಲಯ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ 7 ಜೂನ್‌ 2021ರಂದು ಪ್ರಕಟವಾಗಿದ್ದ ತೀರ್ಪಿನಲ್ಲಿ 75 ನಿರ್ದೇಶನಗಳನ್ನು ನೀಡಲಾಗಿತ್ತು. ಆ ನಿರ್ದೇಶನಗಳಲ್ಲಿ 32ನೇ ನಿರ್ದೇಶನಕ್ಕೆ ಸ್ಪಷ್ಟೀಕರಣ ನೀಡುವಂತೆ ಇಲವೇ ಮಾರ್ಪಾಡು ಮಾಡುವಂತೆ ಕೋರಿ ಸರ್ಕಾರ ಮರುಪರಿಶೀಲನಾ ಅರ್ಜಿಗಳನ್ನು ಸಲ್ಲಿಸಿತ್ತು. ಮೂರು ತಿಂಗಳೊಳಗೆ ತನ್ನ ತೀರ್ಪನ್ನು ಜಾರಿಗೆ ತರುವಂತೆ ಪೀಠ ಸೂಚಿಸಿದೆ.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ರಾಜ್ಯ ಪುರಾತತ್ವ ಇಲಾಖೆ, ಇತಿಹಾಸಕಾರ ಅಥವಾ ಮಾನವಶಾಸ್ತ್ರಜ್ಞ ಮತ್ತು ಆಗಮಗಳು ಮತ್ತು ಶಿಲ್ಪ ಶಾಸ್ತ್ರಗಳಲ್ಲಿ (ದೇವಾಲಯದ ಆಚರಣೆಗಳು) ಇಬ್ಬರು ತಜ್ಞರು ಸೇರಿದಂತೆ 17 ಸದಸ್ಯರನ್ನು ಒಳಗೊಂಡಿರುವ ಪರಂಪರೆ ಆಯೋಗವನ್ನು ರಚಿಸಬೇಕು ಎಂದು ಕೂಡ ಪೀಠ ಆಗ ನಿರ್ದೇಶನ ನೀಡಿತ್ತು.

ಅಲ್ಲದೆ ದೇವಾಲಯದ ಭೂಮಿ ಮತ್ತು ನಿರ್ಮಿತಿಗಳಿಗೆ ಉಂಟಾದ ಹಾನಿ ನಿರ್ಣಯಿಸಲು ಮತ್ತು ನಾಶವಾದ ಪ್ರಾಚೀನ ವಸ್ತುಗಳ ಮೌಲ್ಯಮಾಪನ ಮಾಡಲು ಮಹಾ ಲೆಕ್ಕಪರಿಶೋಧಕರು (ಸಿಎಜಿ) ಮತ್ತು ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ತಜ್ಞರು ಆಡಿಟ್ ನಡೆಸಬೇಕೆಂದು ನ್ಯಾಯಾಲಯ  ಸೂಚಿಸಿತ್ತು.

ಸರ್ಕಾರ ಕೇಳಿದ್ದ ವಿವಿಧ ಸ್ಪಷ್ಟೀಕರಣಗಳಲ್ಲಿ, ಆ ಬಗೆಯ ಆಯೋಗವನ್ನು ರಚಿಸುವುದಕ್ಕೆ ಆಕ್ಷೇಪವನ್ನೂ ವ್ಯಕ್ತಪಡಿಸಿತ್ತು. ಆಯೋಗ ರಚನೆ ತಮಿಳುನಾಡು ಪರಂಪರೆ ಆಯೋಗ ಕಾಯಿದೆ 2012 ರ ಪರಿಚ್ಛೇದ 4ಕ್ಕೆ ಅನುಗುಣವಾಗಿಲ್ಲ ಎಂದು ತಮಿಳುನಾಡು ಸರ್ಕಾರ ವಾದಿಸಿತ್ತು. ಈ ಸಂಬಂಧ ಕಾಯಿದೆ ಜಾರಿಗೆ ತರುವಂತೆ ಸರ್ಕಾರಕ್ಕೆ ಆದೇಶ ನೀಡಲು ನ್ಯಾಯಾಲಯಕ್ಕೆ ಅಧಿಕಾರವಿಲ್ಲ. ಜೊತೆಗೆ ರಾಜ್ಯ ಸರ್ಕಾರ ಈಗಾಗಲೇ ಸ್ವತಂತ್ರ ಲೆಕ್ಕಪರಿಶೋಧನಾ ವ್ಯವಸ್ಥೆ ಹೊಂದಿದೆ ಎಂದು ಅದು ಹೇಳಿತ್ತು.

ಆದರೆ 2021ರ ತೀರ್ಪಿನಲ್ಲಿ ತಾನು ನೀಡಿದ್ದ ನಿರ್ದೇಶನಗಳಿಗೆ ಸಂವಿಧಾನದ 226ನೇವಿಧಿಯಡಿ ಸಾಕಷ್ಟು ಅಧಿಕಾರ ಇದೆ ಎಂದು ಹೈಕೋರ್ಟ್‌ ತಿಳಿಸಿದೆ. ಅಲ್ಲದೆ ತೀರ್ಪು ನೀಡುವ ಸಂದರ್ಭದಲ್ಲಿ ಸರ್ಕಾರ ಪಾರಂಪರಿಕ ಮೌಲ್ಯಗಳೊಂದಿಗೆ ದೇವಾಲಯ ರಕ್ಷಿಸಲು ಒಪ್ಪಿಕೊಂಡಿತ್ತು. ಈಗ ಅದು ಮನಸ್ಸು ಬದಲಾಯಿಸಲು ಅನುಮತಿ ನೀಡುವುದಿಲ್ಲ ಎಂದು ನ್ಯಾಯಾಲಯ ನುಡಿದಿದೆ

Related Stories

No stories found.
Kannada Bar & Bench
kannada.barandbench.com