ಎಚ್‌ಡಿಡಿ, ಎಚ್‌ಡಿಕೆಯನ್ನು ತಪ್ಪಾಗಿ ಬಿಂಬಿಸಿ ಸುದ್ದಿ ಪ್ರಕಟಿಸದಂತೆ 89 ಮಾಧ್ಯಮಗಳ ವಿರುದ್ಧ ಪ್ರತಿಬಂಧಕಾದೇಶ

“ಪ್ರತಿವಾದಿ ಮಾಧ್ಯಮಗಳ ಬಳಿ ಪ್ರಬಲವಾದ ಸಾಕ್ಷ್ಯವಿದ್ದರೆ ಅವರಿಗೆ ಸುದ್ದಿ ಪ್ರಸಾರ/ಪ್ರಕಟ ಮಾಡದಂತೆ ಸಂಪೂರ್ಣವಾಗಿ ನಿರ್ಬಂಧಿಸಲಾಗಿಲ್ಲ” ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.
H D Devegowda and H D Kumaraswamy, Bengaluru City Civil Court
H D Devegowda and H D Kumaraswamy, Bengaluru City Civil Court
Published on

ಜೆಡಿಎಸ್‌ನಿಂದ ಅಮಾನತುಗೊಂಡಿರುವ ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ಪ್ರಕರಣದಲ್ಲಿ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರ ವಿರುದ್ಧ ನಕಲಿ ಸುದ್ದಿ, ಚಿತ್ರ ಅಥವಾ ವಿಡಿಯೋ ತಿರುಚಿ ಪ್ರಸಾರ/ ಪ್ರಕಟ ಮಾಡದಂತೆ 89 ಮಾಧ್ಯಮಗಳ ವಿರುದ್ಧ ಬೆಂಗಳೂರಿನ ಸತ್ರ ನ್ಯಾಯಾಲಯವು ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಿದೆ. ಇದರಲ್ಲಿ ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳೂ ಸೇರಿವೆ.

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಮತ್ತು ರಾಜ್ಯ ಘಟಕದ ಅಧ್ಯಕ್ಷ ಎಚ್‌ ಡಿ ಕುಮಾರಸ್ವಾಮಿ ಸಲ್ಲಿಸಿದ್ದ ಮೂಲ ದಾವೆಯ ವಿಚಾರಣೆಯನ್ನು ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಹಾಗೂ ರಜಾಕಾಲೀನ ಪೀಠದ ನ್ಯಾಯಾಧೀಶರಾದ ಎಚ್‌ ಎ ಮೋಹನ್‌ ನಡೆಸಿದರು.

“ಸಾರ್ವಜನಿಕವಾಗಿ ಗುರುತರವಾದ ಸಾಕ್ಷ್ಯದ ಕೊರತೆಯ ನಡುವೆ ಫಿರ್ಯಾದಿಗಳನ್ನು ಫೋಟೊಗಳನ್ನು ತಿರುಚಿ, ಉದ್ದೇಶಪೂರ್ವಕವಾಗಿ ಅವರ ವರ್ಚಸ್ಸು ಮತ್ತು ಘನತೆಗೆ ಹಾನಿಯಾಗುವಂಥ ಸುಳ್ಳು ಸುದ್ದಿಗಳನ್ನು ಪ್ರಕಟಿಸದಂತೆ ಮುಂದಿನ ವಿಚಾರಣೆಯವರೆಗೆ ಪ್ರತಿವಾದಿ ಮಾಧ್ಯಮ ಸಂಸ್ಥೆಗಳ ವಿರುದ್ಧ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ವಿವರಿಸಿದೆ.

ಅದಾಗ್ಯೂ, “ಪ್ರತಿವಾದಿ ಮಾಧ್ಯಮಗಳ ಬಳಿ ಪ್ರಬಲವಾದ ಸಾಕ್ಷ್ಯವಿದ್ದರೆ ಅವರಿಗೆ ಸುದ್ದಿ ಪ್ರಸಾರ/ಪ್ರಕಟ ಮಾಡದಂತೆ ಸಂಪೂರ್ಣವಾಗಿ ನಿರ್ಬಂಧಿಸಲಾಗಿಲ್ಲ” ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಈ ನೆಲೆಯಲ್ಲಿ ಪ್ರತಿವಾದಿ ಮಾಧ್ಯಮಗಳ ವಿರುದ್ಧ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಲಾಗಿದ್ದು, ಸಮನ್ಸ್‌ ಜಾರಿ ಮಾಡಲಾಗಿದೆ. ಮೇ 29ಕ್ಕೆ ವಿಚಾರಣೆ ಮುಂದೂಡಲಾಗಿದ್ದು, ರಜಾಕಾಲೀನ ಅವಧಿ ಮುಗಿದ ಬಳಿಕ ವ್ಯಾಪ್ತಿ ಹೊಂದಿದ ನ್ಯಾಯಾಲಯಕ್ಕೆ ಕಚೇರಿಯು ಎಲ್ಲಾ ದಾಖಲೆಗಳನ್ನು ಕಳುಹಿಸಿಕೊಡಬೇಕು ಎಂದು ಆದೇಶಿಸಿದೆ.

ಪ್ರಜ್ವಲ್‌ ರೇವಣ್ಣ ಅವರ ಆಕ್ಷೇಪಾರ್ಹವಾದ ವಿಡಿಯೊಗಳು ಮತ್ತು ದೂರಿನಲ್ಲಿ ತಮ್ಮ ವಿರುದ್ಧ ಯಾವುದೇ ಆರೋಪವಿಲ್ಲ. ಆದರೆ, ತಮ್ಮ ಚಿತ್ರಗಳನ್ನು ತಿರುಚಿ ಪ್ರಕಟಿಸಲಾಗುತ್ತಿದೆ. ತಾವು ಪ್ರಜ್ವಲ್‌ ರೇವಣ್ಣ ಅವರ ಸಂಬಂಧಿಗಳಾಗಿರುವುದರಿಂದ ಅವರ ಜೊತೆಗಿರುವ ಚಿತ್ರಗಳನ್ನು ಮಾಧ್ಯಮಗಳು ಪ್ರಕಟಿಸದಂತೆ ನಿರ್ಬಂಧಿಸಲಾಗದು. ಆದರೆ, ಅನಗತ್ಯವಾಗಿ ತಮ್ಮ ಚಿತ್ರಗಳ ಬಳಕೆ ಮತ್ತು ಉಲ್ಲೇಖ ಮಾಡದಂತೆ ಕೋರಲಾಗಿದೆ. ಪ್ರಕರಣದ ಸೂಕ್ಷ್ಮತೆ ಮತ್ತು ಪ್ರಜ್ವಲ್‌ ರೇವಣ್ಣ ಜೊತೆಗಿನ ಸಂಬಂಧ ಹಾಗೂ ಸುಪ್ರೀಂ ಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಲೇಖನಗಳನ್ನು ಪ್ರಕಟಿಸುವ ಮಾಧ್ಯಮಗಳ ಹಕ್ಕಿನ ವಿಚಾರದಲ್ಲಿ ಅದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗದು. ಆದರೆ, ಫಿರ್ಯಾದಿಗಳ ವಿರುದ್ಧ ಸುಳ್ಳು ಅಥವಾ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯ ವರದಿಗಳನ್ನು ಪ್ರಕಟಿಸದಂತೆ ನಿರ್ದಿಷ್ಟ ಕಾಲಾವಧಿಯವರೆಗೆ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಬಹುದಾಗಿದೆ. ಸದ್ಯಕ್ಕೆ ಲಭ್ಯವಿರುವ ದಾಖಲೆಗಳನ್ನು ಆಧರಿಸಿ, ಫಿರ್ಯಾದಿಗಳು ಮೇಲ್ನೋಟಕ್ಕೆ ಒಂದು ಮಟ್ಟಕ್ಕೆ ತಮ್ಮ ಪರವಾಗಿ ಪ್ರಕರಣವಿದೆ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಹೀಗಾಗಿ, ಫಿರ್ಯಾದಿಗಳು ನೀಡುವ ಹೇಳಿಕೆ ಹೊರತುಪಡಿಸಿ ಫಿರ್ಯಾದಿಗಳ ವಿರುದ್ಧ ಸೂಕ್ತ ದಾಖಲೆಗಳಿಲ್ಲದೇ ಅವರ ಚಿತ್ರಗಳ ಬಳಕೆ, ವಿಡಿಯೊಗಳ ಬಳಕೆ ಅಥವಾ ಅವುಗಳನ್ನು ತಿರುಚಿ ಪ್ರಕಟಿಸುವುದರಿಂದ ಅವರ ವರ್ಚಸ್ಸಿಗೆ ಹಾನಿಯಾಗುತ್ತದೆ. ಈ ವಿಚಾರಕ್ಕೆ ಒಳಪಟ್ಟು ಮಧ್ಯಂತರ ಆದೇಶ ಮಾಡಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

Attachment
PDF
H D Devegowda Vs Tv9 Kannada.pdf
Preview
Kannada Bar & Bench
kannada.barandbench.com