ಸಂಸದ ಪ್ರತಾಪ್‌ ಸಿಂಹ ವಿರುದ್ಧ ಮಾಧ್ಯಮ ಗೋಷ್ಠಿ ನಡೆಸದಂತೆ ಕಾಂಗ್ರೆಸ್‌ ವಕ್ತಾರ ಲಕ್ಷ್ಮಣ್‌ ವಿರುದ್ಧ ಪ್ರತಿಬಂಧಕಾದೇಶ

ಪ್ರತಾಪ್‌ ಸಿಂಹ ಅವರು ದಾಖಲಿಸಿರುವ ಮೂಲ ದಾವೆಯ ವಿಚಾರಣೆಯನ್ನು 9ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎ ಹರೀಶ ಅವರು ನಡೆಸಿದರು.
Pratap Simha and Bengaluru City Civil Court
Pratap Simha and Bengaluru City Civil Court

ಮೈಸೂರು-ಕೊಡುಗಿನ ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಅವರ ವಿರುದ್ಧ ಯಾವುದೇ ಮಾಧ್ಯಮ ಗೋಷ್ಠಿ ನಡೆಸಬಾರದು ಮತ್ತು ಅವರ ವಿರುದ್ಧ ಯಾವುದೇ ಮಾನಹಾನಿಕಾರಕ ಮಾಹಿತಿಯನ್ನು ಹಂಚಿಕೊಳ್ಳದಂತೆ ಕಾಂಗ್ರೆಸ್‌ ವಕ್ತಾರ ಎಂ ಲಕ್ಷ್ಮಣ್‌ ವಿರುದ್ಧ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯವು ಈಚೆಗೆ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಿದೆ.

ಪ್ರತಾಪ್‌ ಸಿಂಹ ಅವರು ದಾಖಲಿಸಿರುವ ಮೂಲ ದಾವೆಯ ವಿಚಾರಣೆಯನ್ನು 9ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎ ಹರೀಶ ಅವರು ನಡೆಸಿದರು.

“ಫಿರ್ಯಾದಿ ಪ್ರತಾಪ್‌ ಸಿಂಹ ವಿರುದ್ಧ ಲಕ್ಷ್ಮಣ್‌ ಅವರು ಯಾವುದೇ ತೆರನಾದ ಮಾಧ್ಯಮ ಗೋಷ್ಠಿ ನಡೆಸಬಾರದು. ಆಡಿಯೊ ವಿಧಾನದಲ್ಲಿ, ಮುದ್ರಣ ಮಾಧ್ಯಮವಾದ ಪತ್ರಿಕೆ, ವಿದ್ಯುನ್ಮಾನ ಮಾಧ್ಯಮ, ಸ್ಥಳೀಯ ಕೇಬಲ್‌ ಆಪರೇಟರ್‌, ಇಂಟರ್‌ನೆಟ್‌, ವೆಬ್‌ಸೈಟ್‌, ರೇಡಿಯೊ ಚಾನೆಲ್‌, ಸಾಮಾಜಿಕ ಮಾಧ್ಯಮ ಇತ್ಯಾದಿಗಳಲ್ಲಿ ಸುಳ್ಳು, ದುರುದ್ದೇಶಪೂರಿತ, ಮಾನಹಾನಿಯಾಗುವ ಮಾಹಿತಿಯನ್ನು ಪ್ರತಾಪ್‌ ಸಿಂಹ ಅವರ ವಿರುದ್ಧ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಮುಂದಿನ ವಿಚಾರಣೆಯವರೆಗೆ ಹಂಚಿಕೊಳ್ಳಬಾರದು. ಲಕ್ಷ್ಮಣ್‌ ಅವರಿಗೆ ಸಮನ್ಸ್‌ ಜಾರಿ ಮಾಡಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದ್ದು, ವಿಚಾರಣೆಯನ್ನು ಫೆಬ್ರವರಿ 13ಕ್ಕೆ ಮುಂದೂಡಿದೆ.

Also Read
ಮರ ಕಡಿದ ಪ್ರಕರಣ: ಸಂಸದ ಪ್ರತಾಸ್‌ ಸಿಂಹ ಸಹೋದರ ವಿಕ್ರಮ್‌ಗೆ ಬೇಲೂರು ನ್ಯಾಯಾಲಯದಿಂದ ಜಾಮೀನು ಮಂಜೂರು

ಪ್ರತಾಪ್‌ ಸಿಂಹ ಅವರ ಪರವಾಗಿ ವಕೀಲ ಎಂ ಸುದರ್ಶನ್‌ ಸುರೇಶ್‌ ಅವರು ವಕಾಲತ್ತು ಹಾಕಿದ್ದಾರೆ.

ಕೆಪಿಸಿಸಿ ವಕ್ತಾರ ಲಕ್ಷ್ಮಣ್‌ ಅವರು ಮೈಸೂರಿನಲ್ಲಿ ಮಾಧ್ಯಮ ಗೋಷ್ಠಿ ನಡೆಸುವ ಮೂಲಕ ಪ್ರತಾಪ್‌ ಸಿಂಹ ಅವರ ವಿರುದ್ಧ ಮೇಲಿಂದ ಮೇಲೆ ಮೊನಚಿನ ದಾಳಿ ನಡೆಸುತ್ತಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.

Kannada Bar & Bench
kannada.barandbench.com