

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಬಗ್ಗೆ ಯಾವುದೇ ರೀತಿಯ ಅವಹೇಳನಕಾರಿ ಹೇಳಿಕೆ ನೀಡದಂತೆ ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಅವರನ್ನು ನಿರ್ಬಂಧಿಸಿ, ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯವು ಶುಕ್ರವಾರ ತಾತ್ಕಾಲಿಕ ಪ್ರತಿಬಂಧಕಾದೇಶ ಹೊರಡಿಸಿದೆ.
ಬೀದರ್ ಜಿಲ್ಲೆ ಬಸವಕಲ್ಯಾಣದ ಅನುಭವ ಮಂಟಪದ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಪರವಾಗಿ ಅದರ ಕಾರ್ಯದರ್ಶಿ ಪೂಜ್ಯ ಶ್ರೀ ಶಿವಾನಂದ ಸ್ವಾಮಿ ಹಾಗೂ ಶ್ರೀ ಸಿದ್ದಲಿಂಗಯ್ಯ ಚಂದ್ರಶೇಖರಯ್ಯ ಹಿರೇಮಠ ಸ್ವಾಮಿ ಸಲ್ಲಿಸಿದ್ದ ಮೂಲ ದಾವೆಯನ್ನು ಬೆಂಗಳೂರಿನ 30ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶ ಎನ್ ಆರ್ ಮಧು ಅವರು ವಿಚಾರಣೆ ನಡೆಸಿದರು.
ಅರ್ಜಿಯ ಮುಂದಿನ ವಿಚಾರಣೆವರೆಗೆ, ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವಿರುದ್ಧ ಸಾರ್ವಜನಿಕವಾಗಿ ಹಾಗೂ ಮುದ್ರಣ ಮಾಧ್ಯಮ, ಡಿಜಿಟಲ್ ಮಾಧ್ಯಮ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ರೀತಿಯ ಮಾನಹಾನಿಕರ ಹಾಗೂ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ಕಾಡಸಿದ್ದೇಶ್ವರ ಸ್ವಾಮಿಗಳನ್ನು ನಿರ್ಬಂಧಿಸಿ ತಾತ್ಕಾಲಿಕ ಪ್ರತಿಬಂಧಕಾದೇಶ ನೀಡಿರುವ ನ್ಯಾಯಾಲಯ, ಅರ್ಜಿ ಸಂಬಂಧ ಕಾಡಸಿದ್ದೇಶ್ವರ ಸ್ವಾಮೀಜಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಡಿಸೆಂಬರ್ 5ಕ್ಕೆ ಮುಂದೂಡಿದೆ.
ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಮತ್ತದರ ಸದಸ್ಯರ ವಿರುದ್ಧ ಸಾರ್ವಜನಿಕವಾಗಿ ಅಥವಾ ಯಾವುದೇ ಮುದ್ರಣ, ಡಿಜಿಟಲ್ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ಕಾಡಸಿದ್ದೇಶ್ವರ ಸ್ವಾಮೀಜಿಗೆ ಶಾಶ್ವತ ಪ್ರತಿಬಂಧಕಾದೇಶ ವಿಧಿಸಬೇಕು ಹಾಗೂ ಒಕ್ಕೂಟ ಮತ್ತದರ ಸದಸ್ಯರ ಪ್ರತಿಷ್ಠೆಗೆ ಧಕ್ಕೆ ತಂದು, ನೋವು ಉಂಟು ಮಾಡಿದ್ದಕ್ಕಾಗಿ ಒಂದು ಕೋಟಿ ರೂಪಾಯಿ ಪರಿಹಾರ ಪಾವತಿಸಲು ಕಾಡಸಿದ್ದೇಶ್ವರ ಸ್ವಾಮೀಜಿ ಅವರಿಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಪ್ರಕರಣದ ಹಿನ್ನೆಲೆ: ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಪ್ರಸಿದ್ಧ ಕನೇರಿ ಅದೃಶ್ಯ ಕಾಡುಸಿದ್ದೇಶ್ವರ ಮಠದ ಸ್ವಾಮೀಜಿ ಅವರು ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಬೀಳೂರು ಗ್ರಾಮದ ಸಮಾರಂಭವೊಂದರಲ್ಲಿ “ಲಿಂಗಾಯತ ಮಠಾಧಿಪತಿಗಳ ಒಕ್ಕೂಟವು, ಕಲಾವಿದರಿಂದ ಕೂಡಿದ ಮುಖ್ಯಮಂತ್ರಿಗಳ ಕೃಪಾಪೋಷಿತ ನಾಟಕ ಮಂಡಳಿ. ಇವರು ಬಸವ ಸಂಸ್ಕೃತಿ ಅಭಿಯಾನ ಎಂಬ ನಾಟಕವನ್ನು ತೆಗೆದುಕೊಂಡು ಕರ್ನಾಟಕದಾದ್ಯಂತ ತಿರುಗಾಡಿ; ದೇವರು ಗುಡ್ಯಾಗ ಇಲ್ಲ. ಗುಡೀಗೆ ಹೋಗಬ್ಯಾಡ್ರಿ, ಮನ್ಯಾಗಿನ ದೇವರುಗಳನ್ನು ತಗೊಂಡು ಹೊಳ್ಯಾಗ ಹಾಕ್ರಿ. ಹೋಟೆಲ್‌ದಾಗ ಹೋಗಿ ದಾರು ಕುಡೀರಿ, ಆರಾಮಾಗಿರಿ, ಮಾಂಸ ತಿನ್ರಿ ಎಂದೆಲ್ಲ ಜನರಿಗೆ ಹೇಳುತ್ತಿದ್ದಾರೆ” ಎಂದು ಆಕ್ಷೇಪಿಸುವ ಭರದಲ್ಲಿ ಲಿಂಗಾಯತ ಮಠಾಧಿಪತಿಗಳ ವಿರುದ್ಧ ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದಾರೆ ಎಂಬ ಹಿನ್ನೆಲೆಯಲ್ಲಿ ಸ್ವಾಮೀಜಿ ಅವರನ್ನು ಡಿಸೆಂಬರ್ 14ರವರೆಗೆ ವಿಜಯಪುರ ಜಿಲ್ಲೆ ಪ್ರವೇಶ ನಿರ್ಬಂಧಿಸಿ ವಿಜಯಪುರ ಜಿಲ್ಲಾಧಿಕಾರಿ ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ಸ್ವಾಮೀಜಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ನ ಕಲಬುರ್ಗಿ ಪೀಠ ಅಕ್ಟೋಬರ್ 17ರಂದು ವಜಾಗೊಳಿಸಿತ್ತು. ಇದೇ ಆದೇಶವನ್ನು ಸುಪ್ರೀಂ ಕೋರ್ಟ್ ಸಹ ಎತ್ತಿ ಹಿಡಿದಿತ್ತು.