ಇಲ್ಲಿವೆ, 2020ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ದಾಖಲಾದ ಹತ್ತು ವಿಲಕ್ಷಣ ಅರ್ಜಿಗಳು!

2020ನೇ ಸಾಲಿನಲ್ಲಿ ಪರಿಹಾರ ಕೋರಿ ಅನೇಕ ವಿಚಿತ್ರ ಅರ್ಜಿಗಳು ಸುಪ್ರೀಂಕೋರ್ಟ್ ಕದ ತಟ್ಟಿದವು. ಅಚ್ಚರಿ ಎಂದರೆ ಅವುಗಳಲ್ಲಿ ಕೆಲವನ್ನು ವಿಚಾರಣೆ ನಡೆಸಲು ನ್ಯಾಯಾಲಯ ಸಮ್ಮತಿಸಿತು.
ಇಲ್ಲಿವೆ, 2020ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ದಾಖಲಾದ ಹತ್ತು ವಿಲಕ್ಷಣ ಅರ್ಜಿಗಳು!

ಇತ್ತೀಚಿನ ಕೆಲ ದಿನಗಳಿದ ನಡೆಯುತ್ತಿರುವ ಘಟನೆಗಳನ್ನು ನಿದರ್ಶನವಾಗಿ ತೆಗೆದುಕೊಂಡರೆ , ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್‌) ಮತ್ತು ಸಂವಿಧಾನದ 32ನೇ ವಿಧಿಯಡಿ ಸಲ್ಲಿಸಲಾದ ಅರ್ಜಿಗಳು ಇನ್ನು ಮುಂದೆ ನಾಗರಿಕರ ಮೂಲಭೂತ ಹಕ್ಕಗಳನ್ನು ಪಡೆಯುವುದಕ್ಕೆ ಸೀಮಿತವಾಗಿ ಇರುವುದಿಲ್ಲ ಎಂದು ತೋರುತ್ತದೆ.

ಪತ್ರಕರ್ತನ ವಿರುದ್ಧ ಆಧಾರರಹಿತ ಆರೋಪ, ಪ್ರತಿಭಟನಾಕಾರರನ್ನು ತೆರವುಗೊಳಿಸುವಂತೆ ಮನವಿ ಮಾಡುವಂತಹ ಅರ್ಜಿಗಳಿಂದ ಹಿಡಿದು ನಾಲ್ಕು ದಶಕಗಳ ಹಿಂದಿನ ರಾಷ್ಟ್ರಪತಿ ಆದೇಶವನ್ನು ಅಸಾಂವಿಧಾನಿಕ ಎಂದು ಘೋಷಿಸುವವರೆಗೆ ಪಿಐಎಲ್‌ ಮತ್ತು ಸಂವಿಧಾನದ 32ನೇ ವಿಧಿಯಡಿ ಸಲ್ಲಿಸಲಾಗುವ ಅರ್ಜಿಗಳು ಅನೂಹ್ಯ ವಲಯಗಳಿಗೆ ಹಬ್ಬಿವೆ.

2020ರಲ್ಲಿ, ಸುಪ್ರೀಂಕೋರ್ಟ್ ನಿಜಕ್ಕೂ ಅನೇಕ ವಿಲಕ್ಷಣ ಅರ್ಜಿಗಳಿಗೆ ಸಾಕ್ಷಿಯಾಯಿತು. ಹೀಗೆ ನ್ಯಾಯಾಲಯದ ಬಾಗಿಲು ಬಡಿಯುವ ಅನೇಕ ವ್ಯಕ್ತಿಗಳಿಗೆ ಸ್ಪಿರಿಟ್‌ (ಉತ್ಸಾಹ) ಇದ್ದಷ್ಟು ಮೆರಿಟ್‌ (ಅರ್ಹತೆ) ಇರುವುದಿಲ್ಲ ಎಂದು ಸ್ವತಃ ಪೀಠ ಹೇಳಿತಾದರೂ ವಿವಿಧ ಬಗೆಯ ವಿಚಿತ್ರ ಪ್ರಕರಣಗಳ ವಿಚಾರಣೆಗೆ ಒಪ್ಪಿಕೊಂಡಿತು. ಅಂತಹ ಹತ್ತು ವಿಲಕ್ಷಣ ಪ್ರಕರಣಗಳ ಪಟ್ಟಿ ಇಲ್ಲಿದೆ.

1975ರ ತುರ್ತು ಪರಿಸ್ಥಿತಿಯನ್ನು "ಅಸಾಂವಿಧಾನಿಕ" ಎಂದು ಘೋಷಿಸಿ

1975 ರ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ ರಾಷ್ಟ್ರಪತಿಗಳ ಅಧಿಸೂಚನೆ ಅಸಾಂವಿಧಾನಿಕ ಎಂದು ಘೋಷಿಸುವಂತೆ 94 ವರ್ಷದ ವೆರಾ ಸರಿನ್ ಮನವಿ ಸಲ್ಲಿಸಿದರು. ಸರ್ಕಾರ ಹದ್ದು ಮೀರಿ ವರ್ತಿಸಿದ ಕಾರಣಕ್ಕೆ ತಮಗೆ ನಷ್ಟ ಉಂಟಾಯಿತು. ನಾವು ಅನುಭವಿಸಿದ ನಷ್ಟಕ್ಕೆ ರೂ.25 ಕೋಟಿ ಪರಿಹಾರ ಒದಗಿಸಬೇಕೆಂದು ಅವರು ಕೋರಿದ್ದರು. “ತಮ್ಮ ಗಂಡನ ವಿರುದ್ಧ ಹೊರಡಿಸಲಾದ ನ್ಯಾಯಾಸಮ್ಮತವಲ್ಲದ ಮತ್ತು ಸ್ವೇಚ್ಛೆಯ ಬಂಧನ ಆದೇಶದಿಂದ ತಪ್ಪಿಸಿಕೊಳ್ಳಲು ತಾನು ಮತ್ತು ಪತಿ ದೇಶ ತೊರೆಯಬೇಕಾಯಿತು” ಎಂದು ಅವರು ಅಹವಾಲು ಸಲ್ಲಿಸಿದ್ದರು.

Emergency
Emergency

ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ದಿನೇಶ್ ಮಹೇಶ್ವರಿ ಮತ್ತು ಹೃಷಿಕೇಶ ರಾಯ್ ಅವರಿದ್ದ ಪೀಠ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿ, ತುರ್ತುಪರಿಸ್ಥಿತಿಯ ಸಾಂವಿಧಾನಿಕ ಸಿಂಧುತ್ವ ವಿಚಾರವನ್ನು ಪರಿಶೀಲನೆ ನಡೆಸಬಹುದೇ, ಇಲ್ಲವೇ ಎನ್ನುವ ಬಗ್ಗೆ ವಿಚಾರಣೆ ನಡೆಸುವುದಾಗಿ ತಿಳಿಸಿತು.

ತುರ್ತುಪರಿಸ್ಥಿತಿ ಘೋಷಣೆಯ ಸಿಂಧುತ್ವವನ್ನು ಪರಿಶೀಲಿಸಲು ನ್ಯಾಯಾಲಯಕ್ಕೆ ಅಧಿಕಾರವಿದೆ ಎಂದು ಅರ್ಜಿದಾರರ ಪರ ಹಿರಿಯ ನ್ಯಾಯವಾದಿ ಹರೀಶ್‌ ಸಾಳ್ವೆ ವಾದಿಸಿದ ಬಳಿಕ ನ್ಯಾಯಾಲಯ ಆದೇಶ ಹೊರಡಿಸಿತು.

“ಯುದ್ಧಾಪರಾಧಗಳ ಕುರಿತಾದ ವಿಚಾರಗಳ ಬಗ್ಗೆ ಇನ್ನೂ ವಿಚಾರಣೆ ನಡೆಸಲಾಗುತ್ತಿದೆ. ವಿಶ್ವ ಸಮರದ ಬಳಿಕವೂ ಆಗ ನಡೆದ ಹತ್ಯಾಕಾಂಡ ಕುರಿತು ದಾವೆಗಳನ್ನು ಹೂಡಲಾಗುತ್ತಿದೆ. ಇದು (ರಾಷ್ಟ್ರೀಯ ತುರ್ತು ಪರಿಸ್ಥಿತಿ) ಸಂವಿಧಾನಕ್ಕೆ ಮಾಡಿರುವ ವಂಚನೆ. ಈ ಕುರಿತು ಘನ ನ್ಯಾಯಾಲಯ ನಿರ್ಧರಿಸಬೇಕು ಎಂದು ನನಗೆ ಬಲವಾಗಿ ಅನ್ನಿಸುತ್ತಿದೆ. ಇದು ರಾಜಕೀಯ ಚರ್ಚೆಗೆ ಗ್ರಾಸವಾಗುವ ವಿಚಾರವಲ್ಲ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕೈದಿಗಳಿಗೆ ಏನಾಯಿತು ಎಂದು ನಾವು ನೋಡಿಲ್ಲವೇ” ಎಂದರು.

ನ್ಯಾಯಾಲಯಗಳಲ್ಲಿ ಸರಳ ಇಂಗ್ಲಿಷ್‌ನಲ್ಲಿ ಕಾನೂನು ಲಭಿಸಬೇಕು

ಕಾನೂನುಗಳು, ಸರ್ಕಾರಿ ಆದೇಶ, ಅಧಿಸೂಚನೆ ಇತ್ಯಾದಿಗಳಲ್ಲಿ ಸರಳ ಭಾಷೆ ಬಳಸಲು ಕೇಂದ್ರ ಕಾನೂನು ಸಚಿವಾಲಯಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ದಾಖಲಾಯಿತು.

“ಬಹುತೇಕವಾಗಿ ವಕೀಲರ ಬರವಣಿಗೆ ಎಂಬುದು (1) ಶಬ್ದಾಡಂಬರ, (2) ಅಸ್ಪಷ್ಟತೆ, (3) ತೋರಿಕೆಯ ಹಾಗೂ (4) ನೀರಸ ಬರವಣಿಗೆಯಿಂದ ಕೂಡಿರುತ್ತದೆ" ಎಂಬ ಅಂಶದ ಆಧಾರದ ಮೇಲೆ ಅರ್ಜಿದಾರರಾದ ವಕೀಲ ಡಾ. ಸುಭಾಷ್ ವಿಜಯರಣ್ ಅವರು ಮನವಿ ಸಲ್ಲಿಸಿದ್ದರು.

ಈ ಸಂಬಂಧ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ನ್ಯಾಯಪೀಠ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿತು.ಇದೇ ಸಂದರ್ಭದಲ್ಲಿ ವಕೀಲರಿಗೆ ಸಿಜೆಐ ಎಸ್‌ಎ ಬೊಬ್ಡೆ, "ನೀವು ಮಾಡಲೇಬೇಕಾದ ಇನ್ನೊಂದು ವಾದವೆಂದರೆ, ಇಂಗ್ಲಿಷ್ ಅನ್ನು ಸರಳವಾಗಿ ಮಾತನಾಡದಿದ್ದರೆ, ಜನರು ಅದನ್ನು ಬಳಸದೆ ದೂರ ಹೋಗುತ್ತಾರೆ ಎನ್ನುವುದು" ಎಂದು ಹೇಳಿದರು.

ನಕಲಿ ಬಾಬಾಗಳು ನಡೆಸುತ್ತಿರುವ ಆಶ್ರಮಗಳನ್ನು ಸ್ಥಗಿತಗೊಳಿಸಿ

ನಕಲಿ ಆಧ್ಯಾತ್ಮಿಕ ಗುರುಗಳು ಮತ್ತು ಆಶ್ರಮಗಳ ಹೆಚ್ಚಳದ ವಿರುದ್ಧ ಸಿಕಂದರಾಬಾದ್ ನಿವಾಸಿಯೊಬ್ಬರು ಸುಪ್ರೀಂಕೋರ್ಟ್ ಮೊರೆ ಹೋದರು. ತನ್ನ ಮಗಳ ದುಃಸ್ಥಿತಿಯನ್ನೇ ವಿವರಿಸಿ ಅವರು ಅರ್ಜಿ ಸಲ್ಲಿಸಿದ್ದರು. ದೆಹಲಿಯ ರೋಹಿಣಿಯಲ್ಲಿ ಬಾಬಾ ವೀರೇಂದ್ರ ದೇವ್ ದೀಕ್ಷಿತ್ ಸ್ಥಾಪಿಸಿದ ಆಧ್ಯಾತ್ಮಿಕ ವಿದ್ಯಾಲಯದಲ್ಲಿ ತಮ್ಮ ಮಗಳು ಸಿಲುಕಿಕೊಂಡಿದ್ದಾರೆ. ಅತ್ಯಾಚಾರ ಆರೋಪಿ ವೀರೇಂದ್ರ ದೇವ್‌ ಪರಾರಿಯಾಗಿದ್ದಾನೆ. 2017ರಲ್ಲಿ 17 ಬಾಬಾಗಳನ್ನು ನಕಲಿ ಎಂದು ಘೋಷಿಸುವ ಪಟ್ಟಿಯನ್ನು ಸಾಧು ಸಂತರ ಪರಮೋಚ್ಛ ಸಂಘಟನೆ ಭಾರತೀಯ ಅಖಾಡಾ ಪರಿಷತ್‌ ಬಿಡುಗಡೆ ಮಾಡಿದ ಬಳಿಕವೂ ಸರ್ಕಾರ ಕ್ರಮ ಕೈಗೊಳ್ಳಲು ವಿಫಲವಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿತ್ತು. ಈ ಪಟ್ಟಿಯಲ್ಲಿ ಅತ್ಯಾಚಾರ ಆರೋಪಿ ದೀಕ್ಷಿತ್ ಹೊರತಾಗಿ ಅಸಾರಾಮ್ ಬಾಪು ಮತ್ತು ಗುರ್ಮೀತ್ ರಾಮ್ ರಹೀಂ ಅವರಂತಹ ದೊಡ್ಡ ಹೆಸರುಗಳು ಇದ್ದವು. ಆಶ್ರಮವಾಸಿಗಳ ದುಸ್ಥಿತಿಯ ಬಗ್ಗೆಯೂ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಗಿತ್ತು.

ಜುಲೈನಲ್ಲಿ, ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನ್ಯಾಯಮೂರ್ತಿಗಳಾದ ಆರ್. ಸುಭಾಷ್ ರೆಡ್ಡಿ ಮತ್ತು ಎ.ಎಸ್. ಬೋಪಣ್ಣ ಅವರಿದ್ದ ಪೀಠ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸಮಸ್ಯೆಯನ್ನು ಪರಿಶೀಲಿಸುವಂತೆ ಸೂಚಿಸಿತ್ತು.

ಅರ್ನಾಬ್‌ ತನ್ನನ್ನು ಪತ್ರಕರ್ತ ಎಂದು ಘೋಷಿಸಿಕೊಂಡಿದ್ದನ್ನು ವಿರೋಧಿಸಿ ನ್ಯಾಯಾಲಯದ ಮೊರೆ ಹೋದ ವಕೀಲ

ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ವಿರುದ್ಧ ನ್ಯಾಯಯುತ ಕ್ರಮ ಕೈಗೊಳ್ಳಬೇಕೆಂದು ಕೋರಿ ವಕೀಲ ರೀಪಕ್ ಕನ್ಸಾಲ್ ಈ ವರ್ಷದ ಮೇ ತಿಂಗಳಲ್ಲಿ ಉನ್ನತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.

Arnab Goswamy
Arnab Goswamy

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ದೂಷಿಸಿದ ಕಾರಣಕ್ಕೆ ಗೋಸ್ವಾಮಿ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ಅದನ್ನು ರದ್ದುಗೊಳಿಸುವಂತೆ ಕೋರಿ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ ತಮ್ಮನ್ನು ಪತ್ರಕರ್ತ ಎಂದು ಉಲ್ಲೇಖಿಸಿದ್ದಾರೆ. ಹಾಗೆ ಪತ್ರಕರ್ತ ಎಂದು ಕರೆದುಕೊಂಡಿರುವುದು ಸುಳ್ಳು ಹೇಳಿಕೆ ಎಂದು ಕನ್ಸಾಲ್‌ ವಾದಿಸಿದ್ದರು. ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಅರ್ಜಿಯನ್ನು ಕೂಡಲೇ ತಳ್ಳಿಹಾಕಿತು.

ಯುಪಿಎ ಸರ್ಕಾರ ಮತ್ತು ಚೀನಾ ನಡುವಿನ 2008ರ ಒಪ್ಪಂದವನ್ನು ತನಿಖೆ ಮಾಡಿ

2008ರಲ್ಲಿ ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟ ಮತ್ತು ಚೀನಾ ಕಮ್ಯುನಿಸ್ಟ್‌ ಪಕ್ಷದ ನಡುವೆ ಏರ್ಪಟ್ಟ ಒಪ್ಪಂದದ ಬಗ್ಗೆ ಎನ್‌ಐಎ ಅಥವಾ ಸಿಬಿಐ ತನಿಖೆ ನಡೆಸಬೇಕೆಂದು ಕೂರಿ ದೆಹಲಿ ಮೂಲದ ವಕೀಲ ಮತ್ತು ಗೋವಾ ಮೂಲದ ಪತ್ರಕರ್ತರೊಬ್ಬರು ನ್ಯಾಯಾಲಯದ ಮೊರೆ ಹೋದರು. ಒಪ್ಪಂದ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಿದೆ ಹೀಗಾಗಿ ಯುಎಪಿಎ ಕಾಯಿದೆಯಡಿ ಈ ಬಗ್ಗೆ ತನಿಖೆ ನಡೆಸಬೇಕೆಂದು ಕೋರಲಾಗಿತ್ತು.

ಸುಪ್ರೀಂಕೋರ್ಟ್‌ಗೆ ಧಾವಿಸುವ ಮುನ್ನ ಒಪ್ಪಂದವನ್ನು ಹೈಕೋರ್ಟ್‌ನಲ್ಲಿ ಮೊದಲು ಪ್ರಶ್ನಿಸುವಂತೆ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರು ಸೂಚಿಸಿದ ಬಳಿಕ ಅರ್ಜಿದಾರರು ಅರ್ಜಿ ಹಿಂಪಡೆಯಲು ಮುಂದಾಗಿದ್ದರು.

ತೈಲ ಬೆಲೆ ಹೆಚ್ಚಳ ವಿರೋಧಿಸಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ

ಡೀಸೆಲ್‌ ಮತ್ತು ಪೆಟ್ರೋಲ್‌ ಬೆಲೆ ಕಡಿಮೆ ಮಾಡಲು ಸುಪ್ರೀಂಕೋರ್ಟ್‌ ಮಧ್ಯಪ್ರವೇಶಿಸಬೇಕು ಎಂದು ಕೇರಳ ಮೂಲದ ವಕೀಲ ಶಾಜಿ ಜೆ ಕೊದಂಕಂಡತ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಅಸಮಂಜಸವೆಂದು ಅವರು ವಾದ ಮಂಡಿಸಿದ್ದರು.

ಆದರೆ, ನ್ಯಾಯಮೂರ್ತಿಗಳಾದ ಆರ್ ಎಫ್ ನಾರಿಮನ್, ನವೀನ್ ಸಿನ್ಹಾ ಮತ್ತು ಇಂದಿರಾ ಬ್ಯಾನರ್ಜಿ ಅವರಿದ್ದ ತ್ರಿಸದಸ್ಯ ಪೀಠ “ಈ ಪ್ರಕರಣದಲ್ಲಿ ಇನ್ನೂ ವಾದಿಸಲು ಬಯಸುವಿರಾದರೆ ಭಾರಿ ದಂಡ ವಿಧಿಸುತ್ತೇವೆ” ಎಂದು ತಿಳಿಸಿತು. ಬಳಿಕ ಅರ್ಜಿದಾರರ ಪರ ವಕೀಲರು ಮನವಿ ಹಿಂಪಡೆದಿದ್ದರು.

ಕೋಕಾ-ಕೋಲಾ ಮತ್ತು ಥಮ್ಸ್‌ಅಪ್‌ ನಿಷೇಧಿಸಲು ಮನವಿ

ಪಿಐಎಲ್‌ಗಳ ನ್ಯಾಯಿಕ ವ್ಯಾಪ್ತಿ ವಿಸ್ತರಣೆಗೊಂಡ ನಂತರ ನೀತಿ ನಿರೂಪಣೆ, ಶಾಸನ ರೂಪಿಸುವ ವಲಯದಲ್ಲೂ ಮಧ್ಯಪ್ರವೇಶಿಸುವಂತೆ ಕೋರುವ ಅರ್ಜಿಗಳ ಸಂಖ್ಯೆ ಹೆಚ್ಚಿದೆ.

Coke
Coke

ಆರೋಗ್ಯಕ್ಕೆ ಹಾನಿಕಾರಕ ಎಂಬ ಕಾರಣಕ್ಕೆ ಕೋಕಾಕೋಲಾ, ಥಮ್ಸ್‌ಅಪ್‌ನಂತಹ ತಂಪು ಪಾನೀಯಗಳ ಮಾರಾಟ ಮತ್ತು ಬಳಕೆ ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ಜೂನ್‌ನಲ್ಲಿ ಸುಪ್ರೀಂಕೋರ್ಟ್‌ ಮುಂದೆ ಬಂದಿತು.

ಜೊತೆಗೆ, ಎರಡು ತಂಪು ಪಾನೀಯಗಳಿಂದ ಉಂಟಾಗುವ ಆರೋಗ್ಯದ ಅಪಾಯಗಳ ಬಗ್ಗೆ ಸರ್ಕಾರವು ಜನರಿಗೆ ಅಧಿಸೂಚನೆ ಹೊರಡಿಸಲು ಕೋರಿತು. ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಪಿಐಎಲ್ ಅನ್ನು ವಜಾಗೊಳಿಸಿದ್ದಲ್ಲದೆ ಅರ್ಜಿದಾರರಿಗೆ ರೂ 5 ಲಕ್ಷದಷ್ಟು ದಂಡ ವಿಧಿಸಿತು. ಕೇವಲ ಎರಡು ಬ್ರಾಂಡ್‌ಗಳನ್ನು ಮಾತ್ರ ಗುರಿಯಾಗಿಸಿಕೊಂಡಿರುವುದರ ಹಿಂದೆ ಬೇರೆ ಉದ್ದೇಶಗಳಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ದೆಹಲಿ ಸಾಮೂಹಿಕ ಅತ್ಯಾಚಾರ ಆರೋಪಿಗಳ ಅಂಗಾಂಗ ದಾನಕ್ಕೆ ಅವಕಾಶ ಕೊಡಿ

2012ರ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಆರೋಪಿಗಳು ತಮ್ಮ ಅಂಗಾಂಗದಾನ ಮಾಡಲು ಅವಕಾಶ ನೀಡಬೇಕು ಅವರ ದೇಹವನ್ನು ವೈದ್ಯಕೀಯ ಸಂಶೋಧನೆಗೆ ನೀಡಬೇಕು ಎಂದು ಕೋರಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರು ಖುದ್ದು ಅರ್ಜಿ ಸಲ್ಲಿಸಿದರು.

ಆದರೆ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಆರ್ ಭಾನುಮತಿ ನೇತೃತ್ವದ ಪೀಠ "ಪಿಐಎಲ್‌ ಮೂಲಕ ನೀವು ಹಾಗೆ ಕೋರಲು ಸಾಧ್ಯವಿಲ್ಲ. ಅಪರಾಧಿಗಳು ಖುದ್ದು ಅಥವಾ ಕುಟುಂಬದ ಸದಸ್ಯರ ಮೂಲಕ ಅಂಗಾಂಗ ದಾನ ಕುರಿತು ಇಚ್ಛೆ ವ್ಯಕ್ತಪಡಿಸಬಹುದು" ಎಂದು ಸೂಚಿಸಿತು, ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಎಫ್ ಸಲ್ಡಾನಾ ಅವರು ಸಲ್ಲಿಸಿದ್ದ ಅರ್ಜಿಯನ್ನು "ತಪ್ಪು ಕಲ್ಪನೆ"ಯಿಂದ ಸಲ್ಲಿಸಿರುವಂಥದ್ದು ಎಂದು ನ್ಯಾಯಾಲಯ ತಳ್ಳಿಹಾಕಿತು.

ಚೀನಾ ವಿರುದ್ಧ ಕೋವಿಡ್‌ ಹರಡಿದ ಆರೋಪ

ಚೀನಾ ಕೋವಿಡ್‌ ಹರಡುತ್ತಿದೆ ಎಂದು ಆರೋಪಿಸಿದ ಎರಡು ಅರ್ಜಿಗಳು ನ್ಯಾಯಾಲಯದಲ್ಲಿ ದಾಖಲಾದವು. ಚೀನಾ ಕೋವಿಡ್‌ ಸೋಂಕನ್ನು ಜೈವಿಕ ಅಸ್ತ್ರವಾಗಿ ಬಳಸಿದೆ. ಸರ್ಕಾರ ಅಂತರರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿ ಚೀನಾದಿಂದ 600 ಶತಕೋಟಿ ಡಾಲರ್‌ ಪರಿಹಾರ ಪಡೆಯಲು ನಿರ್ದೇಶನ ನೀಡುವಂತೆ ಮಧುರೈ ನಿವಾಸಿಯೊಬ್ಬರು ಅರ್ಜಿ ಸಲ್ಲಿಸಿದರು. ಆದರೆ ಅರ್ಜಿ ತಿರಸ್ಕೃತವಾಯಿತು.

ಎಲ್ಲಾ ಪ್ರಾಣಿಗಳೂ ಕಾನೂನು ಸೌಲಭ್ಯ ಪಡೆಯಲು ಅರ್ಹವೆಂದು ಘೋಷಿಸಲು ಮನವಿ

ಎಲ್ಲಾ ಪ್ರಾಣಿಗಳನ್ನೂ ಕಾನೂನು ಹಕ್ಕು ಮತ್ತು ಸೌಲಭ್ಯ ಪಡೆಯುವ ಕಾನೂನು ಘಟಕಗಳೆಂದು ಪರಿಗಣಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿದ ಎಸ್‌ ಎ ಬೊಬ್ಡೆ ನೇತೃತ್ವದ ಪೀಠ ಈ ಸಂಬಂಧ ನೋಟಿಸ್‌ ಜಾರಿ ಮಾಡಿತು.

ಅಲಾಹಾಬಾದ್‌ ಮೂಲದ ಸರ್ಕಾರೇತರ ಸಂಸ್ಥೆ ಪೀಪಲ್ಸ್‌ ಚಾರಿಟಿಯರ್‌ ಆರ್ಗನೈಸೇಷನ್‌ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಯುವ ಉದ್ದೇಶದಿಂದ ಜೀವಂತ ವ್ಯಕ್ತಿ ಪಡೆಯುವ ಕಾನೂನು ಮಾನ್ಯತೆಯನ್ನೇ ಪ್ರಾಣಿ ಸಂಕುಲಕ್ಕೂ ವಿಸ್ತರಿಸಬೇಕು ಎಂದು ಕೋರಿತು.

ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಕೇಂದ್ರಕ್ಕೆ ನ್ಯಾಯಾಲಯ ಸೂಚಿಸಿತಾದರೂ ಮನವಿಯನ್ನು ಪುರಸ್ಕರಿಸಲು ಕಷ್ಟವಾಗುತ್ತದೆ ಎಂದು ಹೇಳಿತು. "ನೀವು ಯಾವ ರೀತಿಯ ಮನವಿ ಸಲ್ಲಿಸಿದ್ದೀರಿ? ಇಡೀ ಪ್ರಾಣಿ ಸಂಕುಲವನ್ನು ಕಾನೂನು ಘಟಕವೆಂದು ಪರಿಗಣಿಸಬೇಕೆಂದು ನೀವು ಬಯಸುತ್ತೀರಾ? ಪ್ರಾಣಿಗಳು ಮೊಕದ್ದಮೆ ಹೂಡಲು ಸಮರ್ಥರಾಗಿರಬೇಕು ಎಂದು ನೀವು ಬಯಸುತ್ತೀರಾ? ಪ್ರಾಣಿಗಳಿಗೆ ವಿವಿಧ ಕಾನೂನುಗಳ ಅಡಿಯಲ್ಲಿ ರಕ್ಷಣೆ ಇದೆ" ಎಂದು ಸಿಜೆಐ ಬೊಬ್ಡೆ ಅಭಿಪ್ರಾಯಪಟ್ಟರು.

Related Stories

No stories found.