ರೈತರ ಪ್ರತಿಭಟನೆಯ ಟೂಲ್‌ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಸೆಷನ್ಸ್ ನ್ಯಾಯಾಲಯವೊಂದು ಬೆಂಗಳೂರಿನ 22 ವರ್ಷದ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರಿಗೆ ಮಂಗಳವಾರ ಜಾಮೀನು ನೀಡಿದೆ. ಐಪಿಸಿ ಸೆಕ್ಷನ್ 124 ಎ (ದೇಶದ್ರೋಹ) ಮತ್ತು 153 ಎ (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆಯ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷಕ್ಕೆ ಕುಮ್ಮಕ್ಕು) ಅಡಿ ದಾಖಲಿಸಲಾದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರು ಆದೇಶ ನೀಡಿದ್ದಾರೆ.
ದಿಶಾ ಅವರಿಗೆ ಜಾಮೀನು ನೀಡಲು ನ್ಯಾಯಾಲಯವು ನೀಡಿದ ಹತ್ತು ಪ್ರಮುಖ ಕಾರಣಗಳು ಇಲ್ಲಿವೆ:
ಕೇವಲ ಸಂಶಯಾಸ್ಪದ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬುದನ್ನು ಆಧರಿಸಿ ದೋಷಾರೋಪ ಮಾಡಲಾಗದು.
ಗಣರಾಜ್ಯೋತ್ಸವ ಹಿಂಸಾಚಾರಕ್ಕೂ ದಿಶಾ ಅವರಿಗೂ ಸಂಪರ್ಕ ಕಲ್ಪಿಸುವ ಯಾವುದೇ ಸಾಕ್ಷ್ಯಗಳು ಇಲ್ಲ.
ಕಾನೂನು ವಿರೋಧಿಸುವ ವ್ಯಕ್ತಿಗಳೊಂದಿಗೆ ಕೇವಲ ವೇದಿಕೆ ಹಂಚಿಕೊಳ್ಳುವುದು ಪ್ರತ್ಯೇಕವಾದಿ ಪ್ರವೃತ್ತಿಯಲ್ಲ.
ಹಿಂಸಾಚಾರಕ್ಕೆ ಟೂಲ್‌ಕಿಟ್ ಯಾವುದೇ ಕರೆ ನೀಡಿಲ್ಲ.
ಸರ್ಕಾರವನ್ನು ಒಪ್ಪದ ಕಾರಣಕ್ಕೆ ಪ್ರಜೆಗಳನ್ನು ಸೆರೆಮನೆಯಲ್ಲಿಡಲಾಗದು.
ಭಿನ್ನ ವಿಚಾರಧಾರೆಗಳಿಗೆ ನಮ್ಮ ನಾಗರಿಕತೆ ಎಂದಿಗೂ ಹಿಂಜರಿದಿಲ್ಲ.
ಸಂವಿಧಾನದ 19ನೇ ವಿಧಿಯಲ್ಲಿ ಅಭಿಪ್ರಾಯ ಬೇಧದ ಹಕ್ಕನ್ನು ಬಲವಾಗಿ ಪ್ರತಿಪಾದಿಸಲಾಗಿದ್ದು ಜಾಗತಿಕ ಶ್ರೋತೃಗಳನ್ನು ಒಳಗೊಳ್ಳುವ ಹಕ್ಕನ್ನು ವಾಕ್ ಸ್ವಾತಂತ್ರ್ಯದಡಿ ಒದಗಿಸಲಾಗಿದೆ.
ವಾಟ್ಸಾಪ್ ಗ್ರೂಪ್ ರಚನೆ ಮತ್ತು ನಿರುಪದ್ರವಿ ಟೂಲ್‌ಕಿಟ್ ಸಂಕಲಿಸಿದ್ದು ಅಪರಾಧವಲ್ಲ.
ಭಾರತೀಯ ರಾಯಭಾರ ಕಚೇರಿಗಳನ್ನು ಧ್ವಂಸ ಮಾಡುವ ನಿರ್ಣಯವನ್ನಾಗಲಿ, ಯೋಗ ಮತ್ತು ಚಹಾದಂತಹ ದೇಶವನ್ನು ಪ್ರತಿನಿಧಿಸುವ ಚಿಹ್ನೆಗಳ ಬಗ್ಗೆ ದಾಳಿಯನ್ನು ಕೈಗೊಳ್ಳಲು ಪ್ರೇರಣೆಯನ್ನಾಗಲಿ ನೀಡಿದ್ದಾರೆ ಎನ್ನಲು ಯಾವುದೇ ಪುರಾವೆಗಳಿಲ್ಲ.
ಅಪೂರ್ಣ ಮತ್ತು ನಗಣ್ಯ ಸಾಕ್ಷ್ಯಗಳನ್ನು ನೀಡಿರುವುದು ಮತ್ತು ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲದಿರುವುದು.