ʼಖಾಸಗಿ ಭಾಗʼ ಎಂಬ ವ್ಯಾಖ್ಯಾನವನ್ನು ಸಾಮಾಜಿಕ ಸಂದರ್ಭಕ್ಕೆ ಅನುಗುಣವಾಗಿ ವ್ಯಾಖ್ಯಾನಿಸಬೇಕು ಎಂದು ಫೋಕ್ಸೊಗೆ ಸಂಬಂಧಿಸಿದ ಮುಂಬೈನ ವಿಶೇಷ ನ್ಯಾಯಾಲಯ ಹೇಳಿದೆ. ಈ ಹಿನ್ನೆಲೆಯಲ್ಲಿ, ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಯೊಬ್ಬನಿಗೆ ಐಪಿಸಿ ಸೆಕ್ಷನ್ 354, 354 ಎ ಮತ್ತು ಪೊಕ್ಸೊ ಕಾಯಿದೆಯ ಸೆಕ್ಷನ್ 10ರ ಅಡಿ ಶಿಕ್ಷೆ ವಿಧಿಸಿದೆ.
ಪೊಕ್ಸೊ ನ್ಯಾಯಾಧೀಶ ಎಂ ಎ ಬರಲಿಯಾ ಅವರು ಪೋಕ್ಸೊ ಕಾಯಿದೆಯ ಸೆಕ್ಷನ್ 7 ರ ಅಡಿಯಲ್ಲಿ ಸಂತ್ರಸ್ತೆಯ ಪೃಷ್ಠವನ್ನು ಅಪರಾಧಿ ಸ್ಪರ್ಶಿಸಿರುವುದು ಕಾಯಿದೆಯ ಸೆಕ್ಷನ್ 7 ರ ಅಡಿಯಲ್ಲಿ ಅಪರಾಧವಾಗಿದೆಯೇ ಎಂಬುದನ್ನು ಸೆಷನ್ಸ್ ನ್ಯಾಯಾಲಯ ಪರಿಗಣಿಸಬೇಕಿತ್ತು ಎಂದಿದ್ದಾರೆ.
ಪೃಷ್ಠ ಖಾಸಗಿ ಭಾಗವಲ್ಲ ಎಂಬ ಗೂಗಲ್ ವ್ಯಾಖ್ಯಾನ ಭಾರತೀಯ ಸಂದರ್ಭದಲ್ಲಿ ಸ್ವೀಕಾರಾರ್ಹವಲ್ಲ.
ಖಾಸಗಿ ಭಾಗ ಎಂಬುದನ್ನು ಭಾರತೀಯ ಸಮಾಜದ ಸಂದರ್ಭದಲ್ಲಿ ಅರ್ಥೈಸಬೇಕು.
ಆರೋಪಿಯು ಸಂತ್ರಸ್ತೆಯ ಯೋನಿ, ಸ್ತನ ಅಥವಾ ಗುದದ್ವಾರವನ್ನು ಮುಟ್ಟಿಲ್ಲ. ಹಾಗಾಗಿ, ಆಕೆಯ ನಿತಂಬವನ್ನು ಸ್ಪರ್ಶಿಸಿರುವುದರಲ್ಲಿ ಲೈಂಗಿಕ ಉದ್ದೇಶವಿಲ್ಲ ಎಂದು ಹೇಳಲಾಗದು.
ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಕೇವಲ ಕೀಟಲೆಗೆ ತುತ್ತಾಗಿಲ್ಲ ಬದಲಿಗೆ ಆರೋಪಿ ಆಕೆಯನ್ನು ಸ್ಪರ್ಶಿಸಿದ್ದಾನೆ.
ಲೈಂಗಿಕ ಉದ್ದೇಶದಿಂದ ಆರೋಪಿ ಕೃತ್ಯ ಎಸಗಿದ್ದ ಎಂದು ಹಿಂದಿನ ಘಟನೆಗಳ ಮೂಲಕ ತಿಳಿದು ಬಂದಿದೆ.
ಲೈಂಗಿಕ ಉದ್ದೇಶ ಎಂಬುದು ಒಂದು ಮನಸ್ಥಿತಿಯಾಗಿದ್ದು ಅದನ್ನು ನೇರ ಸಾಕ್ಷ್ಯಗಳಿಂದ ಸಾಬಿತುಪಡಿಸುವ ಅಗತ್ಯವಿಲ್ಲ. ಅಂತಹ ಉದ್ದೇಶವನ್ನು ಪ್ರಕರಣದ ಸನ್ನಿವೇಶಗಳಿಂದ ನಿರ್ಧರಿಸಬಹುದು.
ಈ ಹಿನ್ನೆಲೆಯಲ್ಲಿ ಆರೋಪಿಗೆ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ರೂ. 10,000 ದಂಡವನ್ನು ನ್ಯಾಯಾಲಯ ವಿಧಿಸಿದೆ. ತಪ್ಪಿದಲ್ಲಿ ಆತ ಹೆಚ್ಚುವರಿಯಾಗಿ ಎರಡು ತಿಂಗಳು ಸೆರೆವಾಸ ಅನುಭವಿಸಬೇಕಾಗುತ್ತದೆ ಎಂದು ಹೇಳಿದೆ. ಅಲ್ಲದೆ ಈ ಹಿಂದೆ ನೀಡಲಾಗಿದ್ದ ಜಾಮೀನನ್ನು ಕೂಡ ಅದು ರದ್ದು ಪಡಿಸಿದ್ದು ಆರೋಪಿಯನ್ನು ವಶಕ್ಕೆ ಪಡೆಯುವಂತೆ ಸೂಚಿಸಿದೆ.
ಸಂತ್ರಸ್ತ ಬಾಲಕಿಯು ಬ್ರೆಡ್ ಖರೀದಿಸಲು ಅಂಗಡಿಗೆ ಬಂದಾಗ ಆರೋಪಿ ಇತರ ಮೂವರೊಂದಿಗೆ ಸೇರಿ ಆಕೆಯನ್ನು ನಕ್ಕು ಕೆಣಕಿದ್ದ. ನಂತರ ಮತ್ತೊಂದು ಸಂದರ್ಭದಲ್ಲಿ ಆಕೆಯ ಪೃಷ್ಠವನ್ನು ಲೈಂಗಿಕ ಉದ್ದೇಶದಿಂದ ಸ್ಪರ್ಶಿಸಿದ್ದ ಎಂದು ಆರೋಪಿಸಲಾಗಿತ್ತು.