ವಿವಾಹಿತೆ ಅಥವಾ ಅವಿವಾಹಿತೆ ಎನ್ನುವ ಭೇದವಿಲ್ಲದೆ ಎಲ್ಲಾ ಮಹಿಳೆಯರಿಗೆ ಮತ್ತು ತಾವು ಇತರೆ ಲಿಂಗಕ್ಕೆ ಸೇರಿದವರು ಎಂದು ಗುರುತಿಸಿಕೊಳ್ಳುವ ಆದರೆ ಸುರಕ್ಷಿತ ಸಂತಾನೋತ್ಪತ್ತಿಗೆ ಮುಂದಾಗುವವರಿಗೆ ಕೂಡ ಸಂವಿಧಾನದ 21ನೇ ವಿಧಿಯ ಭಾಗವಾಗಿರುವ ಸಂತಾನೋತ್ಪತ್ತಿ ಆಯ್ಕೆಯ ಹಕ್ಕು ಅನ್ವಯವಾಗಲಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದೆ [ಎಕ್ಸ್ (ಅನಾಮಿಕ ವ್ಯಕ್ತಿ) ಮತ್ತು ದೆಹಲಿ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತಿತರರ ನಡುವಣ ಪ್ರಕರಣ].
ವೈದ್ಯಕೀಯ ಗರ್ಭಪಾತ (ಎಂಟಿಪಿ) ಕಾಯಿದೆಯಲ್ಲಿರುವ ಮಹಿಳೆಯರು ಎಂಬ ಪದದ ಬಳಕೆಯು, ಹುಟ್ಟಿದಾಗ ಮಹಿಳೆ ಎಂದು ಗುರುತಿಸಿಕೊಂಡ ಮತ್ತು ಹುಟ್ಟಿನಿಂದ ಮಹಿಳೆಯಾಗಿ ಮುಂದುವರೆದಿರುವ ವ್ಯಕ್ತಿಗೆ (ಸಿಸ್ ವುಮೆನ್) ಮಾತ್ರವೇ ಅನ್ವಯವಾಗದೆ ಸ್ತ್ರೀ ಸಂತಾನೋತ್ಪತ್ತಿ ಶಕ್ತಿ ಇರುವ ಇತರ ಲಿಂಗ ಅಸ್ಮಿತೆ ಹೊಂದಿರುವವರಿಗೂ ಅನ್ವಯವಾಗುತ್ತದೆ.
ನಾವು ಎಂಟಿಪಿ ಕಾಯಿದೆ ಮತ್ತು ಅದರ ಅನ್ವಯದ ಕುರಿತು ಚರ್ಚೆ ಮಾಡುವ ಮೊದಲು, ಈ ತೀರ್ಪಿನಲ್ಲಿರುವ "ಮಹಿಳೆ" ಎಂಬ ಪದವನ್ನು ಮಹಿಳೆಯಾಗಿ ಗುರುತಿಸಿಕೊಂಡ ವ್ಯಕ್ತಿಯಷ್ಟೇ ಸುರಕ್ಷಿತ ವೈದ್ಯಕೀಯ ಗರ್ಭಪಾತ ಬಯಸುವ ಇತರೆ ವ್ಯಕ್ತಿಗಳಿಗೂ ಬಳಸಬಹುದಾಗಿದೆ.
ವಿವಾಹಿತ ಮಹಿಳೆಯರಿಗೆ 20ರಿಂದ 24 ವಾರಗಳವರೆಗಿನ ಗರ್ಭಾವಸ್ಥೆ ಅಂತ್ಯಗೊಳಿಸಲು ಅನುಮತಿ ನೀಡುವ ಎಂಟಿಪಿ ಕಾಯಿದೆಯ ಸವಲತ್ತನ್ನು ಅವಿವಾಹಿತ ಮಹಿಳೆಗೆ ನಿರಾಕರಿಸುವಂತಿಲ್ಲ.
ಎಂಟಿಪಿ ಕಾಯಿದೆಯ ಉದ್ದೇಶಗಳಿಗೆ ಸಂಬಂಧಿಸಿದಂತೆ ಬಲವಂತದ ಗರ್ಭ ಧರಿಸದಂತೆ ಮಹಿಳೆಗೆ ರಕ್ಷಣೆ ನೀಡುವುದಕ್ಕಾಗಿ ವೈವಾಹಿಕ ಅತ್ಯಾಚಾರ ಕೂಡ ಅತ್ಯಾಚಾರದ ಪರಿಧಿಯೊಳಗೆ ಬರುತ್ತದೆ ಎಂದು ಪರಿಗಣಿಸಬೇಕು.
ನ್ಯಾ. ಚಂದ್ರಚೂಡ್ ಅವರು ಬರೆದಿರುವ ತೀರ್ಪು ಸಂತಾನೋತ್ಪತ್ತಿ ಆರೈಕೆ ಅಗತ್ಯ ಇರುವ ಇತರೆ ಲಿಂಗಿಗಳ ಗುರುತಿಸುವಿಕೆ ಬಗ್ಗೆ ಏನನ್ನೂ ಹೇಳದಿದ್ದರೂ ʼಎಲ್ಲಾʼ ಎಂಬ ಪದವನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದು ಕೇವಲ ಮಹಿಳೆಯರಲ್ಲದೆ ಗರ್ಭನಿರೋಧ ಅಗತ್ಯ ಇರುವ ಸಮಾಜದ ಎಲ್ಲಾ ಸ್ತರದ ಎಲ್ಲಾ ವ್ಯಕ್ತಿಗಳಿಗೂ ಅನ್ವಯವಾಗಲಿದೆ ಎಂದು ಹೇಳಿದೆ.
"ಸಂತಾನೋತ್ಪತ್ತಿ ಮತ್ತು ಸುರಕ್ಷಿತ ಲೈಂಗಿಕ ಅಭ್ಯಾಸಗಳ ಕುರಿತಾದ ಮಾಹಿತಿಯನ್ನು ಎಲ್ಲಾ ಜನರಲ್ಲಿ ಪ್ರಚುರ ಪಡಿಸಲು ಸರ್ಕಾರ ಮುಂದಾಗಬೇಕು. ಇದಲ್ಲದೆ, ಸಮಾಜದ ಎಲ್ಲಾ ಸ್ತರದ ಜನ ಅನಪೇಕ್ಷಿತ ಗರ್ಭಧಾರಣೆ ತಪ್ಪಿಸಲು ಮತ್ತು ಕುಟುಂಬ ಯೋಜನೆಗಾಗಿ ಗರ್ಭನಿರೋಧಕಗಳನ್ನು ಪಡೆಯಲು ಸಾಧ್ಯವಾಗುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ವೈದ್ಯಕೀಯ ಸೌಲಭ್ಯಗಳು ಮತ್ತು ನೋಂದಾಯಿತ ವೈದ್ಯರು (ಆರ್‌ಎಂಪಿ) ಪ್ರತಿ ಜಿಲ್ಲೆಯಲ್ಲೂ ಇದ್ದು ಎಲ್ಲರಿಗೂ ಕೈಗೆಟುಕುವಂತಾಗಬೇಕು. ನೋಂದಾಯಿತ ವೈದ್ಯರು ಎಲ್ಲಾ ರೋಗಿಗಳನ್ನು ಸಮಾನವಾಗಿ ಮತ್ತು ಸಂವೇದನಾಶೀಲವಾಗಿ ನಡೆಸಿಕೊಳ್ಳುವಂತೆ ಸರ್ಕಾರ ನೋಡಿಕೊಳ್ಳಬೇಕು. ಒಬ್ಬರ ಜಾತಿಯ ಆಧಾರದ ಮೇಲೆ ಅಥವಾ ಇತರ ಸಾಮಾಜಿಕ ಅಥವಾ ಆರ್ಥಿಕ ಅಂಶಗಳ ಆಧಾರದ ಮೇಲೆ ಚಿಕಿತ್ಸೆ ನಿರಾಕರಿಸಬಾರದು. ಈ ಶಿಫಾರಸುಗಳು ವಾಸ್ತವ ರೂಪಕ್ಕೆ ಬಂದಾಗ ಮಾತ್ರ ನಾವು ದೈಹಿಕ ಸ್ವಾಯತ್ತತೆಯ ಹಕ್ಕು ಮತ್ತು ಘನತೆಯ ಹಕ್ಕನ್ನು ಸಾಕಾರಗೊಳಿಸಲು ಸಮರ್ಥರು ಎನ್ನಬಹುದು ”ಎಂದು ತೀರ್ಪು ನುಡಿದಿದೆ.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]