ಮದರಸಾದಲ್ಲಿ ಉಗ್ರ ಚಟುವಟಿಕೆ ಆರೋಪ: ಎನ್‌ಸಿಪಿಸಿಆರ್‌ ಅಧ್ಯಕ್ಷ ಕಾನುಂಗೋ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

'ತಾಲಿಬಾನ್ ಜೈಸೆ ಜೀ ರಹೆ ಹೈ' ಅಂತ ಹೇಳುವುದಕ್ಕೂ ಭಯೋತ್ಪಾದಕತೆಗೂ ಏನು ಸಂಬಂಧ. ಅಷ್ಟಕ್ಕೂ ತಾಲಿಬಾನ್ ಜೈಸೆ ಜಿ ರಹೆ ಹೈ ಅನ್ನುವುದನ್ನು ರೂಪಕದ ಅರ್ಥದಲ್ಲಿ ಹೇಳಿದ್ದಾರೆ. ಮಾನನಷ್ಟ ಮೊಕದ್ದಮೆಯಲ್ಲೂ ರೂಪಕ ಪ್ರಮುಖ ಅಪರಾಧವಾಗದು ಎಂದ ನ್ಯಾಯಾಲಯ.
Priyank Kanoongo and Karnataka HC
Priyank Kanoongo and Karnataka HC
Published on

ಬೆಂಗಳೂರಿನ ಕಾವಲಬೈರಸಂದ್ರದಲ್ಲಿರುವ ದಾರುಲ್ ಉಲೂಮ್ ಸಯಿದಿಯಾ ಮುಸ್ಲಿಂ ಅನಾಥಾಲಯ ಹಾಗೂ ಮದರಸಾವನ್ನು 2023ರ ನವೆಂಬರ್ 19ರಂದು ಅಕ್ರಮವಾಗಿ ಪ್ರವೇಶಿಸಿದ ಮತ್ತು ಅಲ್ಲಿ 'ತಾಲಿಬಾನ್‌ ರೀತಿಯಲ್ಲಿ ಬದುಕುತ್ತಿದ್ದಾರೆ' ಎಂದು ಹೇಳಿಕೆ ನೀಡಿದ್ದಕ್ಕೆ ಆಕ್ಷೇಪಿಸಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕಾನುಂಗೋ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಬುಧವಾರ ರದ್ದುಪಡಿಸಿದೆ.

ಅನಾಥಾಲಯ ಮತ್ತು ಮದರಸಾದ ಕಾರ್ಯದರ್ಶಿ ಅಶ್ರಫ್ ಖಾನ್ ದೇವರ ಜೀವನಹಳ್ಳಿ ಪೊಲೀಸ್ ಠಾಣೆಯಲ್ಲಿ 2023ರ ನವೆಂಬರ್ 21ರಂದು ತಮ್ಮ ವಿರುದ್ಧ ದಾಖಲಿಸಿರುವ ದೂರು ರದ್ದುಪಡಿಸುವಂತೆ ಕೋರಿ ಪ್ರಿಯಾಂಕ್ ಕಾನುಂಗೋ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಕೆಲಕಾಲ ದೂರುದಾರರ ಪರ ವಕೀಲರ ವಾದ ಆಲಿಸಿದ ಪೀಠವು ಅರ್ಜಿದಾರರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿತು. ಅಲ್ಲದೇ ವಿವರವಾದ ಆದೇಶ ನಂತರ ಹೊರಡಿಸುವುದಾಗಿ ಹೇಳಿತು.

ಇದಕ್ಕೂ ಮೊದಲು ದೂರುದಾರರ ಪರ ವಕೀಲರು, ಅರ್ಜಿದಾರರು ಹಾಗೂ ಇತರ ಕೆಲವರು ತಮ್ಮನ್ನು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದವರು ಎಂದು ಹೇಳಿಕೊಂಡು ಅನುಮತಿ ಇಲ್ಲದೆ, ಮದರಸಾದೊಳಗೆ ಪ್ರವೇಶ ಮಾಡಿದ್ದಾರೆ. ಅನುಮತಿ ಇಲ್ಲದಿದ್ದರೂ ಆಡಳಿತ ಮಂಡಳಿ ಅಡ್ಡಿಪಡಿಸಿಲ್ಲ. ಎಲ್ಲಾ ಕಡೆ ತಪಾಸಣೆ ನಡೆಸಿದ ಅರ್ಜಿದಾರರು ವಿಡಿಯೊ ಮಾಡಿಕೊಂಡು, ಫೋಟೊಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಮಧ್ಯಾಾಹ್ನದ ಊಟದ ನಂತರ ಮಕ್ಕಳು ನೆಲದ ಮೇಲೆ ವಿಶ್ರಾಾತಿ ಪಡೆದುಕೊಳ್ಳುತ್ತಿದ್ದರು. ಅದನ್ನೇ ದೊಡ್ಡ ವಿಷಯವನ್ನಾಗಿ ಮಾಡಿದ ಅರ್ಜಿದಾರರು ಮದರಸಾದಲ್ಲಿ ತಾಲಿಬಾನ್ ರೀತಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ ಎಂದು ಪೀಠದ ಗಮನಕ್ಕೆ ತಂದರು.

ದೂರು ಪರಿಶೀಲಿಸಿದ ಪೀಠವು ದೂರಿನಲ್ಲಿ ತಾಲಿಬಾನ್ ರೀತಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಎಲ್ಲಿದೆ. ಒಂದೇ ಒಂದು ಪದ ಆ ರೀತಿ ಇಲ್ಲ ಎಂದು ದೂರುದಾರರ ಪರ ವಕೀಲರನ್ನು ಪ್ರಶ್ನಿಸಿತು. ದೂರಿನ ಅನುವಾದದ ಪ್ರತಿಯಲ್ಲಿ ಆ ಅಂಶ ಇದೆ ಎಂದು ವಕೀಲರು ಉತ್ತರಿಸಿದರು. ಮೂಲ ದೂರಿನಲ್ಲಿ ಏನಿದೆ ಅದು ಮುಖ್ಯ. ನಿಮ್ಮ ಮನಸ್ಸಿಗೆ ಬಂದಂತೆ ಅನುವಾದ ಮಾಡಿ ಅದನ್ನು ಸೇರಿಸಿದರೆ ಆಗುವುದಿಲ್ಲ ಎಂದು ಪೀಠ ಕಟುವಾಗಿ ಹೇಳಿತು.

ಅದಕ್ಕೆ ಅರ್ಜಿದಾರರು ಟ್ವೀಟ್ ಮಾಡಿದ್ದಾರೆ ಎಂದು ದೂರುದಾರರ ಪರ ವಕೀಲರು ಹೇಳಿದರು. ಟ್ವೀಟ್ ಗಮನಿಸಿದ ಪೀಠವು ‘ತಾಲಿಬಾನ್ ಜೈಸೆ ಜೀವನ್ ಜೀ ರಹೆ ಹೈ’ ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ. ಇಲ್ಲಿಯೂ ತಾಲಿಬಾನ್ ರೀತಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಹೇಳಿಲ್ಲ. ಆತಂಕವಾದ ಎಂಬ ಪದವೇ ಬಳಸಿಲ್ಲ. ಅಷ್ಟಕ್ಕೂ ʼತಾಲಿಬಾನ್ ಜೈಸೆ ಜೀ ರಹೆ ಹೈ’ ಅಂತ ಹೇಳುವುದಕ್ಕೂ ಆತಂಕವಾದಕ್ಕೂ ಏನು ಸಂಬಂಧ. ಅಷ್ಟಕ್ಕೂ ತಾಲಿಬಾನ್ ಜೈಸೆ ಜಿ ರಹೆ ಹೈ ಅನ್ನುವುದನ್ನು ರೂಪಕದ ಅರ್ಥದಲ್ಲಿ ಹೇಳಿದ್ದಾರೆ. ಮಾನನಷ್ಟ ಮೊಕದ್ದಮೆಯಲ್ಲೂ ರೂಪಕ ಪ್ರಮುಖ ಅಪರಾಧವಾಗುವುದಿಲ್ಲ. ದೂರು ಹಾಗೂ ಟ್ವೀಟ್‌ ಅನ್ನು ತಪ್ಪಾಗಿ ಅನುವಾದಿಸಲಾಗಿದೆ ಎಂದು ಹೇಳಿದ ಪೀಠ ಪ್ರಕರಣವನ್ನು ರದ್ದುಪಡಿಸಿತು.

ಈ ಮಧ್ಯೆ, ಅರ್ಜಿದಾರರು ಮದರಸಾವನ್ನು ಅತಿಕ್ರಮವಾಗಿ ಪ್ರವೇಶ ಮಾಡಿದ್ದಾರೆ. ಇದನ್ನು ನ್ಯಾಯಾಲಯ ಗಮನಿಸಬೇಕು ಎಂದು ದೂರುದಾರರ ಪರ ವಕೀಲರು ಹೇಳಿದರು.

ಅರ್ಜಿದಾರರು ಸರ್ಕಾರಿ ನೌಕರರು ಅವರಿಗೆ ಅಧಿಕಾರವಿದೆ ಎಂದು ಪೀಠ ಹೇಳಿತು. ಆದರೆ, ಅಧಿಕೃತ ಕರ್ತವ್ಯ ನಿರ್ವಹಿಸುತ್ತ ಸರ್ಕಾರಿ ನೌಕರರು ವರದಿ, ಅಭಿಪ್ರಾಯ, ಶಿಫಾರಸುಗಳನ್ನು ಮಾಡಬಹುದು. ಅದರ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡುವುದು, ಟ್ವೀಟ್ ಮಾಡುವುದು ಎಷ್ಟು ಸರಿ ಅನ್ನುವುದನ್ನು ಗಮನಿಸಬೇಕು ಎಂದು ಪೀಠ ಸರ್ಕಾರದ ಪರ ವಕೀಲರಿಗೆ ಹೇಳಿತು. 

Kannada Bar & Bench
kannada.barandbench.com