
ಚುನಾವಣಾ ಅಕ್ರಮದ ಎಸಗಿರುವುರಿಂದ ಕಾಂಗ್ರೆಸ್ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿದ್ದ ಚುನಾವಣಾ ತಕರಾರು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ. ನಿನ್ನೆ ಬಿಜೆಪಿ ಪರಾಜಿತ ಅಭ್ಯರ್ಥಿ ಗಾಯತ್ರಿ ಸಿದ್ಧೇಶ್ವರ್ ಅವರು ಪ್ರಭಾ ಆಯ್ಕೆ ಪ್ರಶ್ನಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು.
ಉಮೇದುವಾರಿಕೆ ಸಲ್ಲಿಕೆಗೂ ಮುನ್ನ ಪ್ರಭಾ ಮತ್ತು ಆಕೆಯ ಬೆಂಬಲಿಗರು ನಡೆಸಿರುವ ಕೃತ್ಯವನ್ನು ಚುನಾವಣಾ ಅಕ್ರಮ ಎನ್ನಲಾಗದು ಎಂದು ನ್ಯಾಯಮೂರ್ತಿ ಎಂ ಐ ಅರುಣ್ ಅವರ ಏಕಸದಸ್ಯ ಪೀಠ ಹೇಳಿದ್ದು, ದಾವಣಗೆರೆಯ ಸುಬಾನ್ ಖಾನ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.
“ಪ್ರಭಾ ಮಲ್ಲಿಕಾರ್ಜುನ್ ಅವರು ಅಭ್ಯರ್ಥಿಯಾಗುವುದಕ್ಕೆ ಮುಂಚೆ ನಡೆದಿರುವ ಘಟನೆಗಳನ್ನು ಉಲ್ಲೇಖಿಸಿ ಅವರ ವಿರುದ್ಧ ಚುನಾವಣಾ ಅಕ್ರಮ ಆರೋಪ ಮಾಡಲಾಗಿದೆ. ಪ್ರಭಾ ವಿರುದ್ಧ ಚುನಾವಣಾ ತಕರಾರು ಅರ್ಜಿಯಲ್ಲಿ ಮಾಡಿರುವ ಎಲ್ಲಾ ಆರೋಪಗಳು ಸತ್ಯ ಎಂದು ಭಾವಿಸಿದರೂ ಅರ್ಜಿದಾರರು ಚುನಾವಣಾ ಅರ್ಜಿಯಲ್ಲಿ ಯಶಸ್ವಿಯಾಗುವುದಿಲ್ಲ. ಹೀಗಾಗಿ, ಚುನಾವಣಾ ತಕರಾರು ಅರ್ಜಿಯನ್ನು ಸಮಂಜಸ ವ್ಯಾಜ್ಯ ಕಾರಣವಿಲ್ಲದೇ ಸಲ್ಲಿಕೆ ಮಾಡಿರುವುದರಿಂದ ಅದನ್ನು ತಿರಸ್ಕರಿಸಲಾಗಿದೆ” ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಸುಬಾನ್ ಖಾನ್ ಪ್ರತಿನಿಧಿಸಿದ್ದ ವಕೀಲ ವೆಂಕಟೇಶ್ ದಳವಾಯಿ ಅವರು “ಅಖಿಲ ಭಾರತ ಕಾಂಗ್ರೆಸ್ ಸಮಿತಿಯು (ಎಐಸಿಸಿ) ಮಾರ್ಚ್‌ನಲ್ಲೇ ಪ್ರಭಾ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದೆ. ಹೀಗಾಗಿ, ಆಕೆ ಮತ್ತು ಆಕೆಯ ಏಜೆಂಟ್‌ಗಳು ಮಾಡಿರುವ ಕೃತ್ಯವನ್ನು ಆಧರಿಸಿ, ವಿಚಾರಣೆ ನಡೆಸಲು ಆದೇಶಿಸಬೇಕು” ಎಂದು ಮನವಿಯನ್ನು ತಿರಸ್ಕರಿಸಿತು.
ಪ್ರಭಾ ಪರ ವಕೀಲ ಪ್ರಶಾಂತ್ ಗೌಡರ್ ಅವರು “ಚುನಾವಣೆಗೂ ಮುನ್ನ ನಡೆದಿರುವ ಕೃತ್ಯವನ್ನು ಅಕ್ರಮ ಎನ್ನಲಾಗದು, ಇದು ಪ್ರಜಾ ಪ್ರತಿನಿಧಿ ಕಾಯಿದೆ ಅಡಿ ಅಪರಾಧವಲ್ಲ” ಎಂದು ವಾದಿಸಿದರು.