ಅಪ್ರಾಪ್ತ ಸಂತ್ರಸ್ತೆಯ ನಡೆ ಅಸ್ವಾಭಾವಿಕ: ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿದ ಹಾಸನ ನ್ಯಾಯಾಲಯ

ಆರೋಪಿಗಳ ವಿರುದ್ಧದ ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿರುವ ಹಿನ್ನೆಲೆಯಲ್ಲಿ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯಿದೆಯಡಿ ಮಾಡಿದ ಆರೋಪಗಳ ಕುರಿತು ತಾನು ಊಹೆ ಮಾಡಿಕೊಳ್ಳಲಾಗದು ಎಂದು ಕೂಡ ನ್ಯಾಯಾಲಯ ನುಡಿದಿದೆ.
ಅಪ್ರಾಪ್ತ ಸಂತ್ರಸ್ತೆಯ ನಡೆ ಅಸ್ವಾಭಾವಿಕ: ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿದ ಹಾಸನ ನ್ಯಾಯಾಲಯ
A1
Published on

ಅಪ್ರಾಪ್ತ ವಯಸ್ಕ ಅತ್ಯಾಚಾರ ಸಂತ್ರಸ್ತೆ ನುಡಿದ ಸಾಕ್ಷ್ಯ ಅಸ್ವಾಭಾವಿಕವಾಗಿದ್ದು ಅವಳ ನಡೆ ಸಹಜವಾಗಿಲ್ಲ. ಆರೋಪಿಗಳ ವಿರುದ್ಧ ಯಾವುದೇ ಸ್ವೀಕಾರಾರ್ಹ, ಮನವರಿಕೆಯಾಗುವಂತಹ ಹಾಗೂ ಖಚಿತ ಸಾಕ್ಷ್ಯಗಳಿಲ್ಲ ಎಂದು ಈಚೆಗೆ ತೀರ್ಪು ನೀಡಿರುವ ಹಾಸನ ನ್ಯಾಯಾಲಯ ಐಪಿಸಿಯ ವಿವಿಧ ಸೆಕ್ಷನ್‌ಗಳು ಹಾಗೂ ಎಸ್‌ಸಿ ಎಸ್‌ಟಿ ಕಾಯಿದೆಯಡಿ ಆರೋಪಿಗಳಾಗಿದ್ದವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ.

ಆರೋಪಿಗಳ ವಿರುದ್ಧದ ಆರೋಪ ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ವಿಫಲವಾಗಿರುವ ಹಿನ್ನೆಲೆಯಲ್ಲಿ ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯಿದೆಯಡಿ ಮಾಡಿದ ಆರೋಪಗಳ ಕುರಿತು ತಾನು ಊಹೆ ಮಾಡಿಕೊಳ್ಳಲಾಗದು ಎಂದು ಕೂಡ ಹಾಸನದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕೆ ಸಿ ಸದಾನಂದ ಸ್ವಾಮಿ ಅವರು ತಿಳಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಆರೋಪದಡಿ ಸಂತೋಷ ಮತ್ತಿತರರ ವಿರುದ್ಧ 2011ರಲ್ಲಿ  ದೂರು ದಾಖಲಿಸಲಾಗಿತ್ತು. ಸಂತೋಷನನ್ನು ತನಗೆ ಪರಿಚಯ ಮಾಡಿಕೊಟ್ಟ ಸಹ ಆರೋಪಿಗಳು ಆತನನ್ನು ಪ್ರೀತಿಸುವಂತೆ ಒತ್ತಾಯಿಸಿದ್ದರು ಎಂದು ಸಂತ್ರಸ್ತೆ ದೂರು ನೀಡಿದ್ದಳು. ತನ್ನನ್ನು ಆರೋಪಿತರು ಕೋಣೆಯೊಂದರಲ್ಲಿ ಬಂಧಿಸಿಟ್ಟರು. ತನ್ನ ಮೇಲೆ ಸಂತೋಷ ಬಲವಂತವಾಗಿ ಸಂಭೋಗ ನಡೆಸಿದ. ಅಲ್ಲದೆ ಸಹ ಆರೋಪಿಗಳಲ್ಲಿ ಕೆಲವರು ನನ್ನ ಮನೆಯ ಬೀರುವನ್ನು ಒಡೆದು ಚಿನ್ನ ಮತ್ತು ನಗದು ಸುಲಿಗೆ ಮಾಡಿದರು ಎಂದು ಆಕೆ ದೂರಿನಲ್ಲಿ ವಿವರಿಸಿದ್ದಳು.

Also Read
ಅತ್ಯಾಚಾರ, ಕೊಲೆ ಅಪರಾಧಿಗೆ ಅಪ್ರಾಪ್ತ ಪುತ್ರಿ ನೋಡಲು ಒಂದು ತಿಂಗಳು ಪೆರೋಲ್‌ ನೀಡಿದ ಹೈಕೋರ್ಟ್‌

ಅಲ್ಲದೆ ಶಾಲೆಗೆ ಬರುವಾಗ ನಾಲ್ಕು ಜೊತ ಬಟ್ಟೆ ತರುವಂತೆ ಬೆದರಿಕೆ ಹಾಕಿದ್ದರು. ತಾನು ಶಾಲೆ ಬಳಿ ತೆರಳಿದಾಗ ಸಂತೋಷ ಹಾಗೂ ದೊರೆ, ಕಾಳಯ್ಯ, ಚನ್ನರಾಯೀ, ದ್ಯಾವಮ್ಮ, ದೇವರಾಜ ಹಾಗೂ ಬಾಲಾಪರಾಧಿಗಳಲ್ಲೊಬ್ಬ ಇದ್ದರು. ಪ್ರಕರಣದ ಎರಡನೇ ಆರೋಪಿ ಸಾವಿತ್ರಿ ನನ್ನ ಜಾತಿ ಆಧರಿಸಿ ನಿಂದಿಸಿದಳು. ತನ್ನನ್ನು ಮತ್ತು ಆರೋಪಿ ಸಂತೋಷನನ್ನು ಹಳೇಬೀಡು, ಬೆಂಗಳೂರಿಗೆ ಕಳಿಸಲಾಯಿತು. ಅಲ್ಲಿ ಪ್ರಕರಣದ ಒಂಬತ್ತನೇ ಆರೋಪಿಯ ಮನೆಯಲ್ಲಿ ಆರೋಪಿ ಸಂತೋಷ ಜೊತೆ ನಾಲ್ಕೈದು ದಿವಸ ಉಳಿದುಕೊಂಡಿದ್ದೆ. ಬಳಿಕ ಪೋಲಿಸ್‌ ಠಾಣೆಗೆ ಹೋದ ನಾನು ನನ್ನ ತಾಯಿ ನನ್ನನ್ನು ಸಂಬಂಧಿಯೊಂದಿಗೆ ಮದುವೆ ಮಾಡಿಕೊಡಲು ಮುಂದಾಗಿದ್ದಾರೆ ಎಂದು ದೂರು ನೀಡಿದೆ. ಆರೋಪಿಗಳು ಘಟನೆಯನ್ನು ಬಹಿರಂಗಪಡಿಸದೆ ಚಿನ್ನ ಮತ್ತು ನಗದನ್ನು ತಮ್ಮ ಬಳಿಯೇ ಉಳಿಸಿಕೊಂಡರು. ಘಟನೆ ಬಗ್ಗೆ ಯಾರಿಗೂ ತಿಳಿಸಿದಂತೆ ತನಗೆ ಬೆದರಿಕೆ ಒಡ್ಡಿದರು ಎಂದು ದೂರಲಾಗಿತ್ತು.

ಸಾಕ್ಷ್ಯಗಳನ್ನು ಗಮನಿಸಿದ ನ್ಯಾಯಾಲಯ “ಬೇರೊಬ್ಬರ ಸಹಾಯಪಡೆಯದಿರುವಷ್ಟು ಸಂತ್ರಸ್ತೆ ಅಸಹಾಯಕಳಾಗಿರಲಿಲ್ಲ. ಆಕೆಯ ನಡೆ ಅಸ್ವಾಭಾವಿಕ ಮತ್ತು ಸಾಮಾನ್ಯ ಮಾನವ ನಡೆಗೆ ವಿರುದ್ಧವಾಗಿದೆ…. ಆರೋಪಿಯೊಂದಿಗೆ ಆಕೆ  ಸಾರ್ವಜನಿಕ ಸಾರಿಗೆ ಬಳಸಿ   ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳಿದ್ದಳು. ಆಕೆ ಒಂದೆಡೆ ತಂಗಿದ್ದಾಗಿ ಹೇಳಿಕೊಂಡಿದ್ದಾಳೆ. ಆದರೆ ಆಕೆಯನ್ನು ಬಂಧನದಲ್ಲಿಇರಿಸಲಾಗಿತ್ತು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ”  ಎಂಬುದಾಗಿ ನವೆಂಬರ್‌ 10ರಂದು ನೀಡಿದ ತೀರ್ಪಿನಲ್ಲಿ ತಿಳಿಸಿದೆ.

“(ಅತ್ಯಾಚಾರದ) ಘಟನೆ ನಡೆದಿದ್ದನ್ನು ಸಂತ್ರಸ್ತೆ ಎಂದಿಗೂ ಬಹಿರಂಗಪಡಿಸಲಿಲ್ಲ. ಆಕೆ ನಿಜವಾಗಿಯೂ ಪ್ರತಿರೋಧ ತೋರಿದ್ದರೆ ಗಾಯಗಳಾಗಿರುತ್ತಿದ್ದವು.  ಬಲವಂತದ ಸಂಭೋಗದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಅಲ್ಲದೆ ಆಪಾದಿತ ಘಟನೆ ನಡೆದ ಎರಡೂವರೆ ತಿಂಗಳ ಬಳಿಕ ದೂರು ದಾಖಲಾಗಿದೆ. ಪ್ರಾಸಿಕ್ಯೂಟಷನ್‌ ಘಟನೆಯನ್ನು ಕಾಲಕಾಲಕ್ಕೆ ಬೆಳೆಸಲು ಯತ್ನಿಸಿದ್ದು ನೈಜ ಸಂಗತಿಗಳೊಡನೆ ಪ್ರಕರಣದಲ್ಲಿ ವಾದ ಮಂಡಿಸಿಲ್ಲ” ಎಂದಿರುವ ನ್ಯಾಯಾಲಯ ವಿವಿಧ ಪ್ರಕರಣಗಳಲ್ಲಿ ಬೇರೆ ಬೇರೆ ನ್ಯಾಯಾಲಯಗಳು ನೀಡಿರುವ ತೀರ್ಪುಗಳನ್ನು ಈ ಪ್ರಕರಣಕ್ಕೆ ಅನ್ವಯಿಸಿ ಆದೇಶ ನೀಡುತ್ತಿರುವುದಾಗಿ ಹೇಳಿದೆ.

ಅದರಂತೆ ಆರೋಪಿಗಳಾದ ಸಂತೋಷ, ಸಾವಿತ್ರಿ, ದೊರೆ, ಕಾಳಯ್ಯ, ಚನ್ನರಾಯೀ, ದ್ಯಾವಮ್ಮ ಹಾಗೂ ದೇವರಾಜ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿತು. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಾಪರಾಧ ಕಾಯಿದೆಯಡಿ ಪ್ರತ್ಯೇಕ ನ್ಯಾಯಾಲಯದಲ್ಲಿ ಆರೋಪ ಎದುರಿಸುತ್ತಿರುವ ಇಬ್ಬರು ಆರೋಪಿಗಳ ಪ್ರಕರಣ ಇತ್ಯರ್ಥವಾಗುವವರೆಗೂ ಸಾಕ್ಷ್ಯಗಳನ್ನು ಕಾಪಿಡುವಂತೆ ನ್ಯಾಯಾಲಯ ಸೂಚಿಸಿತು.

Kannada Bar & Bench
kannada.barandbench.com