ವಿಪಕ್ಷ ಬಿಜೆಪಿಯ ಪ್ರತಿಭಟನೆಯ ನಡುವೆ ಬಹುಚರ್ಚಿತ ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ 2023 ಕೊನೆಗೂ ವಿಧಾನಸಭೆಯಲ್ಲಿ ಮಂಡನೆಯಾಗಿ ಸೋಮವಾರ ಮಂಡನೆಯಾಗಿದೆ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಅವರು ವಿಧಾನಸಭೆಯಲ್ಲಿ ಮಸೂದೆ ಮಂಡಿಸಿದರು.
ವಕೀಲರು ತಮ್ಮ ವೃತ್ತೀಯ ಕರ್ತವ್ಯಗಳ ಯುಕ್ತ ನಿರ್ವಹಣೆಯಲ್ಲಿ ತಮ್ಮ ಕರ್ತವ್ಯಗಳ ನಿರ್ವಹಣೆಯನ್ನು ಅಡ್ಡಿಪಡಿಸುವ ಅಂದರೆ ನ್ಯಾಯ ದೊರಕಿಸಿಕೊಡುವಲ್ಲಿ ಹಸ್ತಕ್ಷೇಪ ಮಾಡುವ ಉದ್ದೇಶ ಹೊಂದಿರುವಂಥ ಎದುರಾಳಿ ಪಕ್ಷಕಾರರಿಂದ ಕಿರುಕುಳಕಾರಿ ಅಥವಾ ಉಪದ್ರವಕಾರಿ ಕೃತ್ಯಗಳ ಬೆದರಿಕೆಯನ್ನು ಸಹ ಎದುರಿಸುತ್ತಿದ್ದಾರೆ.
1990ರ ಆಗಸ್ಟ್ 27ರಿಂದ 7ನೇ ಸೆಪ್ಟೆಂಬರ್‌ವರೆಗೆ ಕ್ಯೂಬಾದ ಹವಾನಾದಲ್ಲಿ ನಡೆದ ಅಪರಾಧ ಪ್ರತಿಬಂಧಕ ಮತ್ತು ಅಪರಾಧಿಗಳ ವರ್ತನೆ ಕುರಿತ ಎಂಟನೇ ವಿಶ್ವಸಂಸ್ಥೆ ಸಮ್ಮೇಳನದಲ್ಲಿ ಭಾರತವು ಭಾಗವಹಿಸಿ “ವಕೀಲರ ಪಾತ್ರ ಕುರಿತ ಮೂಲ ತತ್ವಗಳನ್ನು” ಅಳವಡಿಸಿಕೊಂಡಿತ್ತು. ವಕೀಲರ ಕಾರ್ಯ ನಿರ್ವಹಣೆಗಾಗಿ ಖಾತರಿಗಳ ಕುರಿತ ಘೋಷಣೆಯ 16 ಮತ್ತು 17ನೇ ಖಂಡಗಳು ಈ ಕೆಳಗಿನಂತಿವೆ.
ಬೆದರಿಕೆ, ಅಡ್ಡಿ, ಕಿರುಕುಳ ಅಥವಾ ಅನುಚಿತ ಹಸ್ತಕ್ಷೇಪರಹಿತವಾಗಿ ವಕೀಲರು ಎಲ್ಲಾ ವೃತ್ತಿಪರ ಪ್ರಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗಿಸುವುದು.
ವಕೀಲರು ದೇಶ ಮತ್ತು ವಿದೇಶ ಎರಡರಲ್ಲಿಯೂ ಮುಕ್ತವಾಗಿ ಪ್ರಯಾಣಿಸಲು ಮತ್ತು ಅವರ ಕಕ್ಷಿದಾರರೊಂದಿಗೆ ಸಮಾಲೋಚಿಸಲು ಸಾಧ್ಯವಾಗಿಸುವುದು.
ಮಾನ್ಯ ಮಾಡಿದ ವೃತ್ತಿಪರ ಕರ್ತವ್ಯಗಳು, ಮಾನಕಗಳು ಮತ್ತು ನೈತಿಕತೆಗಳ ಅನುಸಾರವಾಗಿ ತೆಗೆದುಕೊಂಡ ಯಾವುದೇ ಕ್ರಮಕ್ಕಾಗಿ ಅಭಿಯೋಜನೆ ಅಥವಾ ಆಡಳಿತಾತ್ಮಕ, ಆರ್ಥಿಕ ಅಥವಾ ಇತರೆ ನಿರ್ಬಂಧಗಳನ್ನು ಅನುಭವಿಸತಕ್ಕದ್ದಲ್ಲ ಅಥವಾ ಭಯಪಡತಕ್ಕದ್ದಲ್ಲ ಎಂಬುದನ್ನು ಸರ್ಕಾರಗಳು ಖಚಿತಪಡಿಸತಕ್ಕದ್ದು.
ವಕೀಲರು ತಮ್ಮ ಪ್ರಕಾರ್ಯಗಳ ನಿರ್ವಹಣೆ ಮಾಡುವಲ್ಲಿ ಅವರ ಭದ್ರತೆಗೆ ಬೆದರಿಕೆ ಒಡ್ಡಿದಾಗ ಪ್ರಾಧಿಕಾರಗಳು ಅವರನ್ನು ಸಂಪೂರ್ಣವಾಗಿ ಸಂರಕ್ಷಿಸಬೇಕು.
ವಕೀಲರು ಯಾವುದೇ ಭಯ ಅಥವಾ ಬಾಹ್ಯ ಪ್ರಭಾವಕ್ಕೆ ಒಳಗಾಗದೇ ತಮ್ಮ ವೃತ್ತಿಪರ ಸೇವೆಗಳನ್ನು ಸಲ್ಲಿಸುವುದಕ್ಕಾಗಿ ಹಾಗೂ ಅದಕ್ಕೆ ಸಂಬಂಧಿಸಿದ ಮತ್ತು ಪ್ರಾಸಂಗಿಕವಾದ ವಿಷಯಗಳಿಗಾಗಿ ಅವರ ಮೇಲಿನ ಹಿಂಸೆ ನಿಷೇಧಿಸುವುದು ಮತ್ತು ರಕ್ಷಣೆ ನೀಡುವುದು.
ವಕೀಲರ ಮೇಲೆ ಅಪರಾಧ ಎಸಗುವ ಪ್ರತಿಯೊಬ್ಬ ವ್ಯಕ್ತಿಯು ಆರು ತಿಂಗಳುಗಳಿಂದ ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಯ ಜೈಲು ಅಥವಾ ಒಂದು ಲಕ್ಷ ರೂಪಾಯಿ ಅಥವಾ ಎರಡನ್ನು ವಿಧಿಸಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಸಂಜ್ಞೇ ಅಪರಾಧದ ಸಂಬಂಧ ವಕೀಲರನ್ನು ಪೊಲೀಸರು ಬಂಧಿಸಿದಾಗ ಅಂಥ ಬಂಧನ 24 ತಾಸಿನ ಒಳಗೆ ಆರೋಪಿತ ವಕೀಲ ಸದಸ್ಯನಾಗಿರುವ ವಕೀಲರ ಸಂಘದ ಅಧ್ಯಕ್ಷ ಅಥವಾ ಕಾರ್ಯದರ್ಶಿಗೆ ವಿಷಯ ತಿಳಿಸಬೇಕು.
ದಂಡನೀಯವಾದ ಪ್ರತಿಯೊಂದು ಅಪರಾಧವನ್ನು ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳಿಗಿಂತ ಕಡಿಮೆ ಇರದ ನ್ಯಾಯಾಲಯದ ಮೂಲಕ ಅಧಿ ವಿಚಾರಣೆ ನಡೆಸಬೇಕು ಎಂದು ತಿಳಿಸಲಾಗಿದೆ.