ಕೇರಳ ಸ್ಟೋರಿ ಚಿತ್ರ ಬಿಡುಗಡೆ ಪ್ರಶ್ನಿಸಿ ಜಾಮಿಯತ್ ಸಲ್ಲಿಸಿದ್ದ ಮನವಿ ಪರಿಗಣನೆಗೆ ಸುಪ್ರೀಂ ಕೋರ್ಟ್ ನಕಾರ

“ಪ್ರತಿಯೊಂದು ಪ್ರಕರಣದಲ್ಲಿಯೂ 32 ನೇ ವಿಧಿ ಪರಿಹಾರವಾಗದು" ಎಂದು ಮಧ್ಯಪ್ರವೇಶಿಸಲು ನಿರಾಕರಿಸಿದ ಸಿಜೆಐ ಹೇಳಿದರು.
The Kerala Story
The Kerala Story

ಕೇರಳ ಸ್ಟೋರಿ ಇದೇ ಶುಕ್ರವಾರ (ಮೇ 5) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು ಇದನ್ನು ಪ್ರಶ್ನಿಸಿ ಜಾಮಿಯತ್‌-ಉಲಾಮಾ- ಇ- ಹಿಂದ್‌ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ.

ಸುಪ್ರೀಂ ಕೋರ್ಟ್‌ಅನ್ನು 226ನೇ ವಿಧಿಯ ನ್ಯಾಯಾಲಯವಾಗಲು (ರಿಟ್‌ ನ್ಯಾಯಾಲಯವಾಗಲು) ಅನುಮತಿ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ಹೇಳಿತು. ಸಂವಿಧಾನದ ಈ ವಿಧಿ ಸರ್ಕಾರಿ ಅಧಿಕಾರಿಗಳಿಗೆ ಸೂಚನೆಗಳನ್ನು ಅಥವಾ ರಿಟ್‌ಗಳನ್ನು ನೀಡಲು ಹೈಕೋರ್ಟ್‌ಗಳಿಗೆ ಅಧಿಕಾರ ಒದಗಿಸುತ್ತದೆ.

ವಕೀಲೆ ವೃಂದಾ ಗ್ರೋವರ್ ಇಂದು ಪ್ರಕರಣ ಪ್ರಸ್ತಾಪಿಸಿ, ಮೇ 5 ರಂದು ಚಿತ್ರ ಬಿಡುಗಡೆಯಾಗುವ ಮೊದಲು ಕೇರಳ ಹೈಕೋರ್ಟ್ ಪ್ರಕರಣವನ್ನು ಆಲಿಸುತ್ತಿಲ್ಲ ಎಂದು ಹೇಳಿದರು. “ಚಿತ್ರ ತಯಾರಕರು ಸಮುದಾಯವೊಂದನ್ನು ನಿಂದಿಸುತ್ತಿದ್ದು ಅದೇ ಸತ್ಯವೆಂದು ಮಾರಾಟ ಮಾಡುತ್ತಿದ್ದಾರೆ. ಇದು ಕಾಲ್ಪನಿಕ ಕೃತಿ ಎಂಬ ಒಕ್ಕಣೆಯೂ ಚಿತ್ರದಲ್ಲಿಲ್ಲ. ಇದು ವಾಸ್ತವ ಎಂದೇ ಅವರು ಹೇಳುತ್ತಿದ್ದಾರೆ” ಎಂದರು.

ಚಿತ್ರದ ನಿರ್ಮಾಪಕರ ಪರ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು, ಪ್ರಕರಣದ ವಿಚಾರಣೆ ಕೇರಳ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಹಕ್ಕು ತ್ಯಾಗ ಒಕ್ಕಣೆಯಲ್ಲಿ ಅದನ್ನು ಸೇರಿಸಬೇಕೆಂಬ ಸಲಹೆಯನ್ನು ತಮ್ಮ ಕಕ್ಷಿದಾರರು ಒಪ್ಪುವುದಿಲ್ಲ ಎಂದರು.

ಈ ಹಂತದಲ್ಲಿ ಸಿಜೆಐ “ಪ್ರತಿಯೊಂದು ಪ್ರಕರಣದಲ್ಲಿಯೂ 32 ನೇ ವಿಧಿ ಪರಿಹಾರವಾಗದು…. ಅನುಭವಿ ನ್ಯಾಯಮೂರ್ತಿಗಳು ಹೈಕೋರ್ಟ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್‌ಅನ್ನು 226ನೇ ವಿಧಿಯ (ರಿಟ್‌) ಅತ್ಯುನ್ನತ ನ್ಯಾಯಾಲಯವಾಗುವುದಕ್ಕೆ ಅಸ್ಪದ ನೀಡಲು ನಮಗೆ ಯಾವುದೇ ಕಾರಣಗಳಿಲ್ಲ” ಎಂದರು.

ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ಐಸಿಸ್) ಗೆ ಸೇರುವ ಕೇರಳದ ಮಹಿಳೆಯರ ಗುಂಪಿನ ಕುರಿತಾದ ಹಿಂದಿ ಚಲನಚಿತ್ರ ಕೇರಳ ಸ್ಟೋರಿ. ಈ ಚಿತ್ರ ಇದೇ ಶುಕ್ರವಾರದಂದು ಬಿಡುಗಡೆಯಾಗಲಿದೆ. ಸಮಾಜದ ವಿವಿಧ ವರ್ಗಗಳೊಡನೆ ದ್ವೇಷ ಬಿತ್ತುವ ಸಾಧ್ಯತೆ ಇರುವುದರಿಂದ ಚಿತ್ರ ಬಿಡುಗಡೆಗೆ ತಡೆ ನೀಡಬೇಕೆಂಬುದು ಜಾಮಿಯತ್‌ ಕೋರಿಕೆಯಾಗಿತ್ತು.

ಚಿತ್ರಕ್ಕೆ ಸಮಾಜದ ಹಲವು ವಲಯಗಳಿಂದ ವಿರೋಧ ವ್ಯಕ್ತವಾಗಿತ್ತು. ಕೇರಳದಲ್ಲಿ ಆಡಳಿತ ನಡೆಸುತ್ತಿರುವ ಸಿಪಿಎಂ ಮತ್ತು ಪ್ರತಿಪಕ್ಷ ಕಾಂಗೆಸ್‌ ಚಿತ್ರವು ಸುಳ್ಳು ಕಥನದಿಂದ ಕೂಡಿದ್ದು ಬಲಪಂಥೀಯ ಸಂಘಟನೆಗಳ ಕಾರ್ಯಸೂಚಿಯನ್ನು ಪ್ರಚುರಪಡಿಸುವ ಚಿತ್ರವಾಗಿದೆ ಎಂದಿದ್ದವು.

ಚಿತ್ರ ಬಿಡುಗಡೆಗೆ ತಡೆ ನೀಡಲು ಕೋರಿದ್ದ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸುವಂತೆ ನ್ಯಾಯವಾದಿ ನಿಜಾಮ್ ಪಾಷಾ ಅವರು ಸಲ್ಲಿಸಿದ್ದ ಮನವಿಯನ್ನು ನಿನ್ನೆ ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರಿದ್ದ ಸುಪ್ರೀಂ ಕೋರ್ಟ್ ಪೀಠ ತಿರಸ್ಕರಿಸಿತ್ತು. ಹೈಕೋರ್ಟ್‌ ಇಲ್ಲವೇ ಸಿಜೆಐ ಅವರ ಮುಂದೆ ಪ್ರಕರಣವನ್ನು ಪ್ರಸ್ತಾಪಿಸುವಂತೆ ಸೂಚಿಸಿತ್ತು. ಇದೇ ವೇಳೆ ಮತ್ತೊಬ್ಬ ಅರ್ಜಿದಾರರು ಸಿನಿಮಾ ಬಿಡುಗಡೆಗೆ ತಡೆ ಕೋರಿ ನಿನ್ನೆ ಕೇರಳ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಸಂಬಂಧ ಸಿಬಿಎಫ್‌ಸಿ ಮತ್ತು ಚಿತ್ರ ನಿರ್ಮಾಪಕರ ಪ್ರತಿಕ್ರಿಯೆ ಕೇಳಿದ್ದ ನ್ಯಾಯಾಲಯ ಪ್ರಕರಣವನ್ನು ಮೇ 5ಕ್ಕೆ ಮುಂದೂಡಿದೆ.

Related Stories

No stories found.
Kannada Bar & Bench
kannada.barandbench.com