[ಪ್ರಕರಣಗಳ ವಿಲೇವಾರಿ] ಸಾಂಸ್ಥಿಕ ಸುಧಾರಣೆಯಿಂದ ಮಾತ್ರ ಸಮಸ್ಯೆ ಪರಿಹಾರ ಸಾಧ್ಯ: ನ್ಯಾ. ಸುನೀಲ್‌ ದತ್‌ ಯಾದವ್‌

“ಪ್ರಕರಣಗಳನ್ನು ವೇಗದಲ್ಲಿ ಇತ್ಯರ್ಥಪಡಿಸುವ ವಿಧಾನಕ್ಕೆ ಯತ್ನಿಸಿದರೆ ಅದು ಗಂಭೀರ ಪೂರ್ವಾಗ್ರಹಕ್ಕೆ ದಾರಿ ಮಾಡಿಕೊಡಬಹುದು. ಪ್ರತಿಯೊಂದು ಪ್ರಕರಣಕ್ಕೆ ಅದರದೇ ಆದ ಸಮಯ ನೀಡುವುದಕ್ಕೆ ಪರ್ಯಾಯವೇ ಇಲ್ಲ” ಎಂದ ನ್ಯಾ. ಯಾದವ್‌.
Justice S Sunil Dutt Yadav and Karnataka High Court
Justice S Sunil Dutt Yadav and Karnataka High Court
Published on

ಪ್ರಕರಣಗಳ ವಿಲೇವಾರಿ ವಿಳಂಬಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಸರ್ಕಾರವು ಸಾಂಸ್ಥಿಕ ಸುಧಾರಣೆಗಳ ಮೂಲಕ ಪರಿಹರಿಸಬೇಕೆ ವಿನಾ ನ್ಯಾಯಾಲಯದ ಮುಂದೆ ಇಡುವುದರಿಂದ ಪ್ರಯೋಜನವಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಮೌಖಿಕವಾಗಿ ಹೇಳಿದೆ.

ಧಾರವಾಡದ ಬಿಜೆಪಿ ಮುಖಂಡ ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ 15ನೇ ಆರೋಪಿಯಾಗಿರುವ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಅವರ ಜಾಮೀನು ಅರ್ಜಿಯನ್ನು ಸುದೀರ್ಘವಾಗಿ ಮೂರು ದಿನ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿದ ಬಳಿಕ ನ್ಯಾಯಮೂರ್ತಿ ಎಸ್‌ ಸುನೀಲ್‌ ದತ್‌ ಯಾದವ್‌ ಅವರ ಏಕಸದಸ್ಯ ಪೀಠವು ಮೇಲಿನಂತೆ ಹೇಳಿತು.

“ಕೆಲಸದ ಒತ್ತಡಕ್ಕೆ ಪರ್ಯಾಯ ಏನಾದರೂ ಇದೆಯೇ ಎಂಬ ವಿಚಾರ ನ್ಯಾಯಮೂರ್ತಿಗಳ ಮನಸಿನಲ್ಲಿ ಸುಳಿದು ಹೋಗುತ್ತದೆ. ಪ್ರತಿಯೊಂದು ಪ್ರಕರಣಕ್ಕೂ ತನ್ನದೇ ಆದ ಸಮಯ ಬೇಕು. ಹೀಗಾಗಿ, ಈ ಸಮಸ್ಯೆಯನ್ನು ನ್ಯಾಯಾಲಯದ ಮುಂದೆ ಇಡಲಾಗದು. ಸರ್ಕಾರ ನಿಲುವು ಕೈಗೊಳ್ಳಬೇಕು. ಏಕೆಂದರೆ, ಇದರಿಂದ ಸಾಮಾನ್ಯ ಜನರಿಗೆ ಗಂಭೀರ ಸಮಸ್ಯೆಯಾಗುತ್ತದೆ. ಇದಕ್ಕೆ ವ್ಯವಸ್ಥೆ ಸ್ಪಂದಿಸಬೇಕು ಎಂದಾದರೆ ಜನಸಂಖ್ಯೆ ಮತ್ತು ದಾವೆಗಳ ಸಂಖ್ಯೆಗಳಿಗೆ ಅನುಗುಣವಾಗಿ ಹೆಚ್ಚು ನ್ಯಾಯಮೂರ್ತಿಗಳು ಮತ್ತು ನ್ಯಾಯಾಲಯಗಳು ಬೇಕು. ಈ ನ್ಯಾಯ ಪ್ರಕ್ರಿಯೆಗೆ ಯಾವುದೇ ಅಡ್ಡದಾರಿಗಳಿರಲು ಸಾಧ್ಯವಿಲ್ಲ” ಎಂದರು.

“ಪ್ರಕರಣಗಳನ್ನು ವೇಗದಲ್ಲಿ ಇತ್ಯರ್ಥಪಡಿಸುವ ವಿಧಾನಕ್ಕೆ ಯತ್ನಿಸಿದರೆ ಅದು ಗಂಭೀರ ಪೂರ್ವಾಗ್ರಹಕ್ಕೆ ದಾರಿ ಮಾಡಿಕೊಡಬಹುದು. ಪ್ರತಿಯೊಂದು ಪ್ರಕರಣಕ್ಕೆ ಅದರದೇ ಆದ ಸಮಯ ನೀಡುವುದಕ್ಕೆ ಪರ್ಯಾಯವೇ ಇಲ್ಲ. ಸಾಂಸ್ಥಿಕ ಸುಧಾರಣೆಗಳ ಮೂಲಕ ದೊಡ್ಡ ಸಮಸ್ಯೆಗಳನ್ನು ಪರಿಹರಿಸಬೇಕೆ ವಿನಾ ಅದನ್ನು ನ್ಯಾಯಾಲಯದ ಮುಂದೆ ಇಡಲಾಗದು” ಎಂದರು.

“ಪ್ರಕರಣಗಳ ಇತ್ಯರ್ಥ ಮತ್ತು ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಸಮನ್ವಯತೆ ಸಾಧಿಸಲು ನ್ಯಾಯಮೂರ್ತಿಗಳು ಹೋರಾಡುತ್ತಿದ್ದು, ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಹಳೇ ಪ್ರಕರಣಗಳು ಹಾಗೆ ಉಳಿಯುತ್ತಿವೆ. ಇದನ್ನು ಹೇಗೆ ಪರಿಹರಿಸಲು ಸಾಧ್ಯ? ಕೆಲವು ಜಟಿಲವಾಗಿದ್ದು, ಯಾವುದಾದರೂ ಒಂದು ಹಳೆಯ ಪ್ರಕರಣವನ್ನು ಇತ್ಯರ್ಥಕ್ಕೆ ಎತ್ತಿಕೊಂಡರೆ ಅದನ್ನು ವಿಲೇವಾರಿ ಮಾಡುವುದರೊಳಗೆ 10 ಸಣ್ಣ ಪ್ರಕರಣಗಳನ್ನು ಇತ್ಯರ್ಥಪಡಿಸಬಹುದು. ಇದು ಸುಲಭವಾಗಿ ಬಗೆಹರಿಸುವ ಸಮಸ್ಯೆಯಲ್ಲ” ಎಂದರು.

ಇದಕ್ಕೆ ಸಿಬಿಐ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನಕುಮಾರ್‌ ಅವರು “ಹಾಲಿ ಇರುವ ನ್ಯಾಯಮೂರ್ತಿಗಳಿಗೆ ಕಾರ್ಯಭಾರದ ಒತ್ತಡ ಹೆಚ್ಚಿದೆ. ಜನಸಂಖ್ಯೆಗೆ ಹೋಲಿಕೆ ಮಾಡಿದರೆ ನ್ಯಾಯಮೂರ್ತಿಗಳ ಸಂಖ್ಯೆ ಕಡಿಮೆ ಇದೆ. 2013ರ ಮೇಲ್ಮನವಿಗಳು ಇನ್ನೂ ಬಾಕಿ ಇವೆ” ಎಂದು ಧ್ವನಿಗೂಡಿಸಿದರು. ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು ಸಮಸ್ಯೆ ಅಗಾಧತೆಯನ್ನು ಉಲ್ಲೇಖಿಸಿ, ನ್ಯಾಯಾಲಯದ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದರು.

Kannada Bar & Bench
kannada.barandbench.com