ಬಾಂಗ್ಲಾದವರಿಗೆ ನಕಲಿ ಆಧಾರ್‌ ಕಾರ್ಡ್‌: ಪಶ್ಚಿಮ ಬಂಗಾಳದ ವ್ಯಕ್ತಿ ವಿರುದ್ಧದ ಪ್ರಕರಣದ ರದ್ದತಿಗೆ ಹೈಕೋರ್ಟ್‌

“ದೇಶದ ಬಗ್ಗೆ ಸ್ವಲ್ಪ ಕಾಳಜಿ ಇರಲಿ. ನಕಲಿ ಆಧಾರ್‌ ಕಾರ್ಡ್‌ ಮಾಡಿಕೊಡುವುದು ವ್ಯಾಪಕವಾಗಿದ್ದು, ಆದರೂ ಯಾವುದೇ ಅಪರಾಧವಾಗಿಲ್ಲ ಎನ್ನುತ್ತಿದ್ದೀರಿ? ಇದು ಸಾಕಾಗುವುದಿಲ್ಲವೇ?” ಎಂದ ನ್ಯಾಯಾಲಯ.
ಬಾಂಗ್ಲಾದವರಿಗೆ ನಕಲಿ ಆಧಾರ್‌ ಕಾರ್ಡ್‌: ಪಶ್ಚಿಮ ಬಂಗಾಳದ ವ್ಯಕ್ತಿ ವಿರುದ್ಧದ ಪ್ರಕರಣದ ರದ್ದತಿಗೆ ಹೈಕೋರ್ಟ್‌
Published on

ಬಾಂಗ್ಲಾದೇಶದ ನಿವಾಸಿಗಳಿಗೆ ಆಧಾರ್‌, ಪ್ಯಾನ್‌ ಕಾರ್ಡ್‌ ಮಾಡಿಕೊಡುತ್ತಿದ್ದ ವ್ಯಕ್ತಿಯ ವಿರುದ್ಧದ ಪ್ರಕರಣ ರದ್ದತಿಗೆ ಕರ್ನಾಟಕ ಹೈಕೋರ್ಟ್‌ ಸೋಮವಾರ ನಿರಾಕರಿಸಿದ್ದು, ಪಶ್ಚಿಮ ಬಂಗಾಳದ ವ್ಯಕ್ತಿ ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡಿದ್ದಾರೆ ಎಂದಿದೆ.

27 ವರ್ಷದ ಅರ್ನಬ್‌ ಮಂಡಲ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice M Nagaprasanna
Justice M Nagaprasanna

ಅರ್ಜಿದಾರರ ಪರ ವಕೀಲ ಆರ್‌ ರಕ್ಷಿತ್‌ ಅವರು “ಈ ಪ್ರಕರಣಕ್ಕೆ ನಕಲಿ ಆರೋಪ ಅನ್ವಯಿಸಲ್ಲ. ಅರ್ಜಿದಾರ ವಿದೇಶಿಯನಲ್ಲದ ಕಾರಣ ಅನ್ವಯಿಸಿರುವ ವಿದೇಶಿಯರ ಕಾಯಿದೆ ಸೆಕ್ಷನ್‌ 14 ಅನ್ವಯಿಸುವುದಿಲ್ಲ. 2024 ಜನವರಿ 22ರಂದು ಅರ್ಜಿದಾರ ಕಸ್ಟಡಿಯಲ್ಲಿದ್ದು, ಶಿಕ್ಷೆಯ ಅರ್ಧ ಭಾಗವನ್ನು ಜೈಲಿನಲ್ಲೇ ಕಳೆದಿದ್ದಾರೆ” ಎಂದರು. “ಅನ್ಯ ದೇಶದ ವ್ಯಕ್ತಿಗಳಿಗೆ ನಕಲಿ ಆಧಾರ್‌ ಕಾರ್ಡ್‌ ಮಾಡಿಕೊಡುವ ಮೂಲಕ ಎಲ್ಲವನ್ನೂ ನೀವು ನಾಶಪಡಿಸುತ್ತಿದ್ದೀರಿ. ಅವರು ಭಾರತೀಯರಲ್ಲ, ಆದರೂ ನಕಲಿ ಆಧಾರ್‌ ಕಾರ್ಡ್‌ ನೀಡಲಾಗುತ್ತಿದೆ. ಅರ್ಜಿದಾರ ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ” ಎಂದಿತು.

“ದೇಶದ ಬಗ್ಗೆ ಸ್ವಲ್ಪ ಕಾಳಜಿ ಇರಲಿ. ನಕಲಿ ಆಧಾರ್‌ ಕಾರ್ಡ್‌ ಮಾಡಿಕೊಡುವುದು ವ್ಯಾಪಕವಾಗಿದ್ದು, ಆದರೂ ಯಾವುದೇ ಅಪರಾಧವಾಗಿಲ್ಲ ಎನ್ನುತ್ತಿದ್ದೀರಿ? ಇದು ಸಾಕಾಗುವುದಿಲ್ಲವೇ? ನೀವು ಬಂದವರಿಗೆಲ್ಲಾ ನಕಲಿ ಆಧಾರ್‌ ಕಾರ್ಡ್‌ ಮಾಡಿಕೊಟ್ಟಿದ್ದೀರಿ. ಅವರು ಭಾರತೀಯರೇ ಅಲ್ಲ. ಎತ್ತ ಸಾಗುತ್ತಿದ್ದೇವೆ?” ಎಂದು ಕಿಡಿಕಾರಿತು.

“ಈ ದೇಶದ ಪ್ರಜೆಯಲ್ಲದ ವ್ಯಕ್ತಿಯ ಬಳಿಯೂ ಆಧಾರ್‌ ಕಾರ್ಡ್‌ ಇದೆ. ಏಕೆ? ನಿಮ್ಮಂಥವರಿಂದಾಗಿ ಅದು ಸಾಧ್ಯವಾಗಿದೆ. ಈ ನಕಲಿ ಆಧಾರ್‌ ಕಾರ್ಡ್‌ ಬೇರೆಲ್ಲಾ ಹಕ್ಕು ಸಾಧಿಸಲು ಅವರಿಗೆ ಅಡಿಪಾಯವಾಗುತ್ತದೆ. ಜನರು ಇದನ್ನು ಮುಂದುವರಿಸಿದರೆ ಸರ್ಕಾರ ಹೇಗೆ ತಾನೆ ಕಣ್ಣಿಡಲು ಸಾಧ್ಯ? ನೀವು ಭಾರತೀಯರಲ್ಲವೇ” ಎಂದಿತು.

“ನೀವು ಜೈಲಿನಲ್ಲಿರುವುದು ಸರಿಯಾಗಿದೆ. ಬೇರೆ ಪರಿಹಾರ ಕೇಳಿದ್ದರೆ ನೋಡಬಹುದಿತ್ತು. ಆದರೆ, ನಿಮ್ಮನ್ನು ಬಿಡುಗಡೆಗೆ ಆದೇಶಿಸಲಾಗದು. ಸಕ್ಷಮ ನ್ಯಾಯಾಲಯಕ್ಕೆ ವಿಚಾರಣೆ ಪೂರ್ಣಗೊಳಿಸಲು ಆದೇಶಿಸಲಾಗುವುದು. ಇಲ್ಲಿ ಮಧ್ಯಪ್ರವೇಶಿಸುವ ಅಗತ್ಯವೇ ಕಾಣುತ್ತಿಲ್ಲ. ಜಾಮೀನು ಕೋರಿ ಅರ್ಜಿ ಸಲ್ಲಿಸಿ, ಪ್ರಕರಣ ರದ್ದತಿ ಕೋರಿ ಇಲ್ಲಿಗೆ ಬರಬೇಡಿ. ಆದೇಶದಲ್ಲಿ ಏನಾದರೂ ಬರೆದರೆ, ನಿಮಗೆ ಜಾಮೀನು ಸಿಗುವುದಿಲ್ಲ” ಎಂದಿತು.

ಇದನ್ನು ಆಲಿಸಿದ ಅರ್ಜಿದಾರರ ಪರ ವಕೀಲರು ಅರ್ಜಿ ಹಿಂಪಡೆಯಲು ಒಪ್ಪಿದ್ದು, ವಿಚಾರಣಾಧೀನ ನ್ಯಾಯಾಲಯದಲ್ಲಿ ಜಾಮೀನು ಕೋರುವುದಾಗಿ ಹೇಳಿದರು. ಇದನ್ನು ದಾಖಲಿಸಿದ ನ್ಯಾಯಾಲಯವು ಅರ್ಜಿದಾರರು ಕಾನೂನಿನ ಅನ್ವಯ ಪರಿಹಾರ ಕೋರಬಹುದು ಎಂದು ಅರ್ಜಿ ಇತ್ಯರ್ಥಪಡಿಸಿತು.

Kannada Bar & Bench
kannada.barandbench.com