ಆರ್‌ಸಿ ಅಧಿಕೃತವಾಗಿ ಬದಲಾಗುವವರೆಗೂ ಮಾಲೀಕನದ್ದೆ ವಾಹನದ ಸಂಪೂರ್ಣ ಜವಾಬ್ದಾರಿ: ಹೈಕೋರ್ಟ್‌

“ಅಪಘಾತಕ್ಕೆ ಈಡಾದ ಬೈಕ್ ನೋಂದಣಿ ಇನ್ನೂ ಸುನಿಲ್ ಕುಮಾರ್ ಅವರ ಹೆಸರಲ್ಲೇ ಇರುವುದರಿಂದ ಪರಿಹಾರ ಪಾವತಿ ಜವಾಬ್ದಾರಿ ಅವರದ್ದೇ ಆಗಿರುತ್ತದೆ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
Karnataka High Court
Karnataka High Court
Published on

“ವಾಹನ ಮಾರಾಟದ ಬಳಿಕ ಅದರ ನೋಂದಣಿ ಪ್ರಮಾಣ ಪತ್ರದಲ್ಲಿ (ಆರ್​ಸಿ) ಮಾಲೀಕರ ಹೆಸರು ಅಧಿಕೃತವಾಗಿ ಬದಲಾಗುವ ತನಕ ಆ ವಾಹನದ ಸಂಪೂರ್ಣ ಜವಾಬ್ದಾರಿಯನ್ನು ನೋಂದಾಯಿತ ಮಾಲೀಕನೇ ಹೊರಬೇಕಾಗುತ್ತದೆ” ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

ಪರಿಹಾರ ಪಾವತಿಗೆ ಸಂಬಂಧಿಸಿದಂತೆ ನಿರ್ದೇಶನ ನೀಡಿದ್ದ, ಮೋಟಾರು ಅಪಘಾತ ಕ್ಲೇಮ್ (ಪರಿಹಾರ ಪಡೆಯುವ ಹಕ್ಕು) ನ್ಯಾಯಮಂಡಳಿ (ಎಂಎಸಿಟಿ) ಆದೇಶ ಪ್ರಶ್ನಿಸಿ ವಾಹನದ ಮಾಲೀಕ ಮಾರತ್ತಹಳ್ಳಿಯ ವಿ ಸುನಿಲ್‌ ಕುಮಾರ್‌, ವಾಹನ ಖರೀದಿಸಿದ್ದ ಶಬ್ರೇಜ್‌ ಮತ್ತು ಪರಿಹಾರ ಹೆಚ್ಚಳ ಕೋರಿ ಮೃತರ ಕುಟುಂಬಸ್ಥರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಸ್‌ ಜಿ ಪಂಡಿತ್‌ ಮತ್ತು ಕೆ ವಿ ಅರವಿಂದ್‌ ಅವರ ವಿಭಾಗೀಯ ಪೀಠ ಭಾಗಶಃ ಪುರಸ್ಕರಿಸಿದೆ.

“ಅಪಘಾತಕ್ಕೆ ಈಡಾದ ಬೈಕ್ ನೋಂದಣಿ ಇನ್ನೂ ಸುನಿಲ್ ಕುಮಾರ್ ಅವರ ಹೆಸರಲ್ಲೇ ಇರುವುದರಿಂದ ಪರಿಹಾರ ಪಾವತಿ ಜವಾಬ್ದಾರಿ ಅವರದ್ದೇ ಆಗಿರುತ್ತದೆ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

“ಪರಿಹಾರದ ಮೊತ್ತ ನಿಗದಿಪಡಿಸುವಾಗ ನ್ಯಾಯಮಂಡಳಿ ತೆಗೆದುಕೊಂಡಿರುವ ನಿರ್ಧಾರ ಸಮಂಜಸವಾಗಿಲ್ಲ. ಹೀಗಾಗಿ, ಪರಿಹಾರ ಮೊತ್ತದ ₹33.07 ಲಕ್ಷಕ್ಕೆ ₹14 ಲಕ್ಷ ಹೆಚ್ಚುವರಿಯಾಗಿ ಸೇರಿಸಬೇಕು ಮತ್ತು ಒಟ್ಟು ₹47.15 ಲಕ್ಷ ಪಾವತಿಸಬೇಕು. ಈ ಮೊತ್ತವನ್ನು ವಾಹನದ ಮೂಲ ಮಾಲೀಕ ಸುನಿಲ್‌ ಕುಮಾರ್‌ ಅವರೇ ಪಾವತಿ ಮಾಡಬೇಕು” ಎಂದು ಪೀಠ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ನಿವಾಸಿ ಸುನಿಲ್ ಕುಮಾರ್ ಅಪಘಾತಕ್ಕೆ ಕಾರಣವಾಗಿದ್ದ ಬೈಕ್‌ ಅನ್ನು ಖರೀದಿಸಿದ್ದರು. ಬಳಿಕ ಅದನ್ನು ಶಬ್ರೇಜ್‌ ಅವರಿಗೆ ಮಾರಾಟ ಮಾಡಿದ್ದರು. 2020ರ ಜೂನ್ 18ರಂದು ಬೈಕ್ ಡಿಕ್ಕಿ ಹೊಡೆದು ದೇವನಹಳ್ಳಿ ತಾಲ್ಲೂಕಿನ ಆವತಿ ಗ್ರಾಮದ ವೈ ಹನುಮಂತ ಮೃತಪಟ್ಟಿದ್ದರು. ಮೃತರ ಕುಟುಂಬಕ್ಕೆ ನ್ಯಾಯಮಂಡಳಿ ₹33 ಲಕ್ಷವನ್ನು ಸುನಿಲ್‌ ಕುಮಾರ್‌ ಮತ್ತು ಶಬ್ರೇಜ್‌ ಜಂಟಿಯಾಗಿ ಪಾವತಿ ಮಾಡಬೇಕು ಎಂದು ಆದೇಶಿಸಿತ್ತು.

ಇದನ್ನು ಪ್ರಶ್ನಿಸಿ ಸುನಿಲ್‌ ಕುಮಾರ್‌ ಮತ್ತು ಶಬ್ರೇಜ್‌ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅಂತೆಯೇ, ಮೃತ ಹನುಮಂತ ಅವರ ಕುಟುಂಬದ ಸದಸ್ಯರು ಪರಿಹಾರದ ಮೊತ್ತ ಹೆಚ್ಚಿಸುವಂತೆ ಕೋರಿ ಮತ್ತೊಂದು ಪ್ರತ್ಯೇಕ ಮೇಲ್ಮನವಿ ಸಲ್ಲಿಸಿದ್ದರು.

Attachment
PDF
Sunil Kumar Vs G Bhuvaneshwari
Preview
Kannada Bar & Bench
kannada.barandbench.com