ಕರ್ನಾಟಕ ಹೈಕೋರ್ಟ್‌ ದೇಶದ ಅತ್ಯುತ್ತಮ ಹೈಕೋರ್ಟ್‌ಗಳಲ್ಲಿ ಒಂದು: ಸಿಜೆ ಅವಸ್ಥಿ

ಅಲಾಹಾಬಾದ್‌ ಹೈಕೋರ್ಟ್‌ ಮತ್ತು ಇಲ್ಲಿನ ಹೈಕೋರ್ಟ್‌ ಸೇರಿ ಒಟ್ಟು 44 ಸಾವಿರ ಪ್ರಕರಣ ವಿಲೇವಾರಿ ಮಾಡಿದ್ದೇನೆ. 500ಕ್ಕೂ ಹೆಚ್ಚು ಪ್ರಕರಣಗಳು ಬಹುಮುಖ್ಯ ಕಾನೂನಿನ ಪ್ರಶ್ನೆಗಳನ್ನು ಒಳಗೊಂಡಿವೆ ಎಂದು ನೆನೆದ ಸಿಜೆ.
Karnataka High Court and Chief Justice Ritu Raj Awasthi
Karnataka High Court and Chief Justice Ritu Raj Awasthi

“ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನು ನಾನು ಸುವರ್ಣಾವಕಾಶ ಎಂದು ಪರಿಗಣಿಸಿದ್ದೇನೆ. ಈ ಸಂಸ್ಥೆಯಲ್ಲಿ ಶಕ್ತಿಮೀರಿ ಕೆಲಸ ಮಾಡಿದ ಭಾವ ನನ್ನಲ್ಲಿದೆ. ಕರ್ನಾಟಕ ಹೈಕೋರ್ಟ್‌ ದೇಶದ ಅತ್ಯುತ್ತಮ ಹೈಕೋರ್ಟ್‌ಗಳಲ್ಲಿ ಒಂದು" ಎಂದು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮೆಚ್ಚುಗೆ ಸೂಚಿಸಿದರು.

ಸಿಜೆ ಅವಸ್ಥಿಯವರು ಸೇವೆಯಿಂದ ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಶುಕ್ರವಾರ ಬೀಳ್ಕೊಡುಗೆ ಸಮಾರಂಭ ಆಯೋಜಿಸಿತ್ತು. ಸಮಾರಂಭದಲ್ಲಿ ಭಾಗವಹಿಸಿದ ಸಿಜೆ ಅವಸ್ಥಿ ಅವರು ನ್ಯಾಯಮೂರ್ತಿಯಾಗಿ ತಾವು ಸಲ್ಲಿಸಿದ ಸೇವೆ ಮತ್ತು ವಕೀಲಿಕೆ ದಿನಗಳಲ್ಲಿ ಗಳಿಸಿದ ಅನುಭವದ ಕುರಿತು ಮನಬಿಚ್ಚಿ ಮಾತನಾಡಿದರು.

"ಈ ರಾಜ್ಯದ ಹಲವು ಜಿಲ್ಲೆಗಳಿಗೆ ಕಳೆದ 8-9 ತಿಂಗಳಲ್ಲಿ ಭೇಟಿ ನೀಡಿದ್ದು, ಇಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಂಡಿದ್ದೇನೆ. ಹೀಗಾಗಿ, ಒಂದು ರಾಜ್ಯ, ಹಲವು ದೇಶ ಎಂಬ ಸೂಕ್ತಿಯು ಇಲ್ಲಿಗೆ ಹೊಂದುತ್ತದೆ” ಎಂದು ರಾಜ್ಯದ ಸಾಂಸ್ಕೃತಿಕ ವೈವಿಧ್ಯ, ಬಹುತ್ವದ ಬಗ್ಗೆ ಅವರು ಮೆಚ್ಚುಗೆ ಸೂಚಿಸಿದರು.

“ಅಲಾಹಾಬಾದ್‌ ಹೈಕೋರ್ಟ್‌ ಮತ್ತು ಇಲ್ಲಿನ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಒಟ್ಟು 44 ಸಾವಿರ ಪ್ರಕರಣಗಳನ್ನು ವಿಲೇವಾರಿ ಮಾಡಿದ್ದೇನೆ. 500ಕ್ಕೂ ಹೆಚ್ಚು ಪ್ರಕರಣಗಳು ಬಹುಮುಖ್ಯ ಕಾನೂನಿನ ಪ್ರಶ್ನೆಗಳನ್ನು ಒಳಗೊಂಡಿವೆ ಎಂದು ಪರಿಗಣಿಸಲ್ಪಟ್ಟಿವೆ” ಎಂದು ನ್ಯಾಯಮೂರ್ತಿಯಾಗಿ ತಮ್ಮ ಸೇವಾವಧಿಯನ್ನು ಅವರು ಅವಲೋಕಿಸಿದರು.

“ನ್ಯಾಯಮೂರ್ತಿಗಳು ಶಿಸ್ತು, ಬದ್ಧತೆಯಿಂದ ಕೂಡಿದ್ದು ನಿಷ್ಪಪಕ್ಷಪಾತ ಮತ್ತು ಪಾರದರ್ಶಕವಾಗಿರಬೇಕಾಗುತ್ತದೆ. ಯಾವುದೇ ಪಕ್ಷಪಾತವಿಲ್ಲದೇ ಅಲಹಾಬಾದ್‌ ಹೈಕೋರ್ಟ್‌ ಮತ್ತು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನನ್ನ ತತ್ವಗಳಲ್ಲಿ ಯಾವುದೇ ರೀತಿಯಲ್ಲಿಯೂ ನಾನು ಹೊಂದಾಣಿಕೆ ಮಾಡಿಕೊಂಡಿಲ್ಲ” ಎಂದು ವಿವರಿಸಿದರು.

“2009ರಲ್ಲಿ ಅಲಾಹಾಬಾದ್‌ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾಗುವವರೆಗೆ 22 ವರ್ಷಗಳ ಕಾಲ ವಕೀಲನಾಗಿ ಕೆಲಸ ಮಾಡಿದ್ದೇನೆ. ಎಲ್ಲ ಯುವ ವಕೀಲರಂತೆ ಸಾಕಷ್ಟು ಶ್ರಮವಹಿಸಿ ಅಲಾಹಾಬಾದ್‌ ಹೈಕೋರ್ಟ್‌ ವಕೀಲರ ವೃಂದ ಮತ್ತು ನ್ಯಾಯಮೂರ್ತಿಗಳಿಂದ ಸಾಕಷ್ಟು ಕಲಿತಿದ್ದೇನೆ” ಎಂದು ವಕೀಲಿಕೆ ದಿನಗಳನ್ನು ಮೆಲುಕು ಹಾಕಿದರು.

“ವಕೀಲರ ಬದುಕು ಸವಾಲಿನಿಂದ ಕೂಡಿರುತ್ತದೆ. ವಕೀಲನಾಗಿ ಶ್ರಮವಹಿಸಿದ್ದು ಮತ್ತು ನನಗೆ ಸಿಕ್ಕ ಅವಕಾಶಗಳಿಂದ ಸಾಕಷ್ಟು ತೃಪ್ತಿ ಪಡೆದಿದ್ದೇನೆ. ನ್ಯಾಯಮೂರ್ತಿಯಾಗಿ ಸೇವೆ ಮಾಡಿದ್ದಕ್ಕೆ ಹೋಲಿಕೆ ಮಾಡಿದರೆ ವಕೀಲಿಕೆ ವೃತ್ತಿಯನ್ನು ಅನುಭವಿಸಿದ್ದು, ಸಾಕಷ್ಟು ತೃಪ್ತಿ ಪಡೆದಿದ್ದೇನೆ” ಎಂದರು.

“ಹಲವು ಪ್ರಮುಖ ಮತ್ತು ಸವಾಲಿನ ಪ್ರಕರಣಗಳಲ್ಲಿ ವಾದ ಮಂಡಿಸಿದ್ದೇನೆ. ವಕೀಲಿಕೆ ಆರಂಭಿಸಿದಾಗ ನಾನು ಯಾರಿಗೂ ಗೊತ್ತಿರಲಿಲ್ಲ. 2009ರಲ್ಲಿ ನಾನು ನ್ಯಾಯಮೂರ್ತಿಯಾಗಿ ನೇಮಕವಾಗಿ ಚೇಂಬರ್‌ ಬಿಟ್ಟಾಗ 5 ಸಾವಿರಕ್ಕೂ ಅಧಿಕ ಪ್ರಕರಣಗಳು ಬಾಕಿ ಇದ್ದವು. ವಕೀಲನಾಗಿ ಎಲ್ಲವನ್ನೂ ನೋಡಿದ್ದೇನೆ” ಎಂದು ವಿವರಿಸಿದರು.

“ಕರ್ನಾಟಕದ ಜನರು ಅಪಾರ-ಪ್ರೀತಿ ವಿಶ್ವಾಸ ತೋರಿದ್ದು, ನನಗೆ ಎಂದಿಗೂ ಹೊರಗಿನವನು ಎನಿಸಿಲ್ಲ. ಸಾಕಷ್ಟು ನೆನಪುಗಳನ್ನು ಇಲ್ಲಿಂದ ನಾನು ಒಯ್ಯುತ್ತಿದ್ದೇನೆ” ಎಂದರು.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಅರಾಧೆ ಅವರು ಸಿಜೆ ಅವಸ್ಥಿ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಆನ್‌ಲೈನ್‌ ಗೇಮಿಂಗ್‌, ಹಿಜಾಬ್‌ ನಿಷೇಧ ಸೇರಿದಂತೆ ಹಲವು ಮಹತ್ವದ ತೀರ್ಪುಗಳನ್ನು ನೀಡಿದ್ದು, ನ್ಯಾಯಾಂಗದ ಸುಧಾರಣೆಗೆ ಸಾಕಷ್ಟು ಒತ್ತು ನೀಡಿದ್ದಾರೆ ಎಂದು ಸ್ಮರಿಸಿದರು.

ಹಿರಿಯ ನ್ಯಾಯಮೂರ್ತಿ ಬಿ ವೀರಪ್ಪ ಸೇರಿದಂತೆ ಹಲವು ನ್ಯಾಯಮೂರ್ತಿಗಳು, ಕೆಎಸ್‌ಬಿಸಿ ಅಧ್ಯಕ್ಷ ಎಂ ಕಾಶೀನಾಥ್‌, ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ, ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಂ ಬಿ ನರಗುಂದ, ಸಹಾಯಕ ಸಾಲಿಸಿಟರ್‌ ಜನರಲ್‌ ಎಚ್‌ ಶಾಂತಿಭೂಷಣ್‌, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಕೀಲರು, ಹಿರಿಯ ಮತ್ತು ಕಿರಿಯ ವಕೀಲರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Kannada Bar & Bench
kannada.barandbench.com