ಸುಪ್ರೀಂ ಕೋರ್ಟ್‌ 2022: ಪ್ರಮುಖ ಹತ್ತು ತೀರ್ಪುಗಳು

ಸುಪ್ರೀಂ ಕೋರ್ಟ್‌ 2022ರಲ್ಲಿ ನೀಡಿದ ಪ್ರಮುಖ ಹತ್ತು ತೀರ್ಪುಗಳ ವಿವರ ಇಲ್ಲಿದೆ.
ಸುಪ್ರೀಂ ಕೋರ್ಟ್‌ 2022: ಪ್ರಮುಖ ಹತ್ತು ತೀರ್ಪುಗಳು

ಕೋವಿಡ್‌ ಅವಧಿಯಲ್ಲಿ ಸುದೀರ್ಘ ಕಾಲ ವರ್ಚುವಲ್‌ ವಿಧಾನದ ಮೂಲಕ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ 2022ರಲ್ಲಿ ಮತ್ತೆ ಭೌತಿಕ ವಿಚಾರಣೆಗೆ ಮರಳಿತು. ಮಹತ್ವದ ಬೆಳವಣಿಗೆಯಲ್ಲಿ, ಮೊದಲ ಬಾರಿಗೆ ಸುಪ್ರೀಂ ಕೋರ್ಟ್‌ ತನ್ನ ಸಾಂವಿಧಾನಿಕ ಪೀಠದ ವಿಚಾರಣೆಗಳನ್ನು ಅಂತರ್ಜಾಲದ ಮೂಲಕ ನೇರ ಪ್ರಸಾರ ಮಾಡಿತು.

ಸರ್ವೋಚ್ಚ ನ್ಯಾಯಾಲಯವು 2022ರಲ್ಲಿ ನೀಡಿದ ಪ್ರಮುಖ ಹತ್ತು ತೀರ್ಪುಗಳ ವಿವರ ಇಲ್ಲಿದೆ:

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ ಸಿಂಧು

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ (ಪಿಎಂಎಲ್‌ಎ) ಸಾಂವಿಧಾನಿಕ ಸಿಂಧುತ್ವವನ್ನು  ಎ ಎಂ ಖಾನ್ವಿಲ್ಕರ್, ದಿನೇಶ್ ಮಾಹೇಶ್ವರಿ ಮತ್ತು ಸಿ ಟಿ ರವಿಕುಮಾರ್ ಅವರಿದ್ದ ಪೀಠ ಎತ್ತಿ ಹಿಡಿಯಿತು. ವಿಜಯ್ ಮದನ್‌ಲಾಲ್ ಚೌಧರಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದ ಅಡಿ ಪಿಎಂಎಲ್‌ಎ ಕಾನೂನಿನ ಸಿಂಧುತ್ವ ಪ್ರಶ್ನಿಸಿದ್ದ 241 ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸಿದ್ದರು.

ಕಾಯಿದೆಯ ಸೆಕ್ಷನ್ 3 (ಅಕ್ರಮ ಹಣ ವರ್ಗಾವಣೆ ವ್ಯಾಖ್ಯಾನ), 5 (ಆಸ್ತಿ ಮುಟ್ಟುಗೋಲು), 8(4) [ಮುಟ್ಟುಗೋಲಾದ ಆಸ್ತಿಯ ಸ್ವಾಧೀನ), 17 (ಶೋಧಕಾರ್ಯ ಮತ್ತು ವಶ), 18 (ವ್ಯಕ್ತಿಗಳ ಶೋಧಕಾರ್ಯ), 19 ( ಬಂಧನದ ಅಧಿಕಾರ), 24 (ಸಾಕ್ಷ್ಯಾಧಾರದ ಹಿಮ್ಮುಖ ಹೊರೆ), 44 (ವಿಶೇಷ ನ್ಯಾಯಾಲಯದಿಂದ ವಿಚಾರಣೆಗೆ ಒಳಪಡುವ ಅಪರಾಧಗಳು), 45 ಅನ್ನು (ಸಂಜ್ಞೇಯವಾಗಿರುವಂತಹ ಅಪರಾಧಗಳು, ಅಸಂಜ್ಞೇಯ ಅಪರಾಧಗಳು ಮತ್ತು ನ್ಯಾಯಾಲಯದಿಂದ ಜಾಮೀನು ಪಡೆಯಲು ವಿಧಿಸುವ ಅವಳಿ ಷರತ್ತುಗಳು) ನ್ಯಾಯಾಲಯ ಎತ್ತಿ ಹಿಡಿಯಿತು.

ಅವಿವಾಹಿತೆ ಎನ್ನುವ ಕಾರಣಕ್ಕೆ ಗರ್ಭಪಾತದ ಹಕ್ಕು ನಿರಾಕರಿಸಲಾಗದು

ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ಅನುಮತಿಸುವ ವೈದ್ಯಕೀಯ ಗರ್ಭಪಾತ ಕಾಯಿದೆಯ (ಎಂಟಿಪಿ ಕಾಯಿದೆ) ನಿಬಂಧನೆಗಳನ್ನು ಮಹಿಳೆ ಅವಿವಾಹಿತಳು ಎಂಬ ಕಾರಣದಿಂದಾಗಿ ನಿರಾಕರಿಸಬಾರದು ಎಂದು ಸುಪ್ರೀಂ ಕೋರ್ಟ್‌ ಹೇಳಿತು [ಎಕ್ಸ್‌ (ಅನಾಮಿಕ ವ್ಯಕ್ತಿ) ಮತ್ತು ದೆಹಲಿ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮತ್ತಿತರರ ನಡುವಣ ಪ್ರಕರಣ].

ಎಂಟಿಪಿ ನಿಯಮಾವಳಿ 3 ಬಿ(ಸಿ) ಅನ್ನು ನಿರ್ಬಂಧಿತ ರೀತಿಯಲ್ಲಿ ವ್ಯಾಖ್ಯಾನಿಸಲಾಗುವುದಿಲ್ಲ ಹೀಗಾಗಿ 20 ವಾರಗಳಿಗಿಂತ ಹೆಚ್ಚಿನ ಗರ್ಭ ಧರಿಸಿರುವ ಅವಿವಾಹಿತೆಗೆ ಗರ್ಭಪಾತದ ಹಕ್ಕನ್ನು ನಿರಾಕರಿಸುವಂತಿಲ್ಲ ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಎ ಎಸ್ ಬೋಪಣ್ಣ ಮತ್ತು ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ತನ್ನ ಆದೇಶದಲ್ಲಿ ಅದು ತಿಳಿಸಿತು.

ವಿದೇಶಿ ದೇಣಿಗೆ ಸ್ವೀಕಾರ ಪರಮ ಹಕ್ಕಲ್ಲ: ಎಫ್‌ಸಿಆರ್‌ಎ ತಿದ್ದುಪಡಿ ಕಾಯಿದೆಗೆ ಸುಪ್ರೀಂ ಸಮ್ಮತಿ

ದೇಶದಲ್ಲಿರುವ ಸಂಸ್ಥೆಗಳು ವಿದೇಶಿ ದೇಣಿಗೆಯನ್ನು ಬಳಸುತ್ತಿರುವುದಕ್ಕೆ ನಿರ್ಬಂಧ ವಿಧಿಸಿರುವ ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಕಾಯಿದೆ 2020 (ಎಫ್‌ಸಿಆರ್‌ಎ) ಅನ್ನು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್‌, ದಿನೇಶ್‌ ಮಹೇಶ್ವರಿ ಮತ್ತು ಸಿ ಟಿ ರವಿಕುಮಾರ್‌ ನೇತೃತ್ವದ ತ್ರಿಸದಸ್ಯ ಪೀಠ ಎತ್ತಿ ಹಿಡಿಯಿತು (ನೀಲ್‌ ಹಾರ್ಪರ್‌ ವರ್ಸಸ್‌ ಭಾರತ ಸರ್ಕಾರ).

ವಿದೇಶಿ ದೇಣಿಗೆ ಹರಿದು ಬರುವುದಕ್ಕೆ ಅನುಮತಿಸುವ ವಿಚಾರವು ಸರ್ಕಾರದ ನೀತಿಯ ಭಾಗವಾಗಿದ್ದು, ಅದಕ್ಕೆ ಕಾನೂನಿನ ಮಾನ್ಯತೆ ಇದೆ. ವಿದೇಶಿ ದೇಣಿಗೆಗೆ ಸಂಪೂರ್ಣವಾಗಿ ನಿಷೇಧ ಹೇರುವ ವಿಚಾರವು ಸರ್ಕಾರಕ್ಕೆ ಸಂಬಂಧಪಟ್ಟಿದ್ದು, ವಿದೇಶಿ ದೇಣಿಗೆ ಪಡೆಯುವುದಕ್ಕೆ ಸಂಬಂಧಿಸಿದಂತೆ ಇಲ್ಲಿನ ನಿವಾಸಿಗಳಿಗೆ ಯಾವುದೇ ಹಕ್ಕು ಇಲ್ಲ ಎಂದು ಪೀಠ ಹೇಳಿತು.

ಕರ್ನಾಟಕ ಹಿಜಾಬ್ ನಿಷೇಧ ಪ್ರಕರಣ: ಭಿನ್ನ ತೀರ್ಪು ನೀಡಿದ ಸುಪ್ರೀಂ; ವಿಸ್ತೃತ ಪೀಠಕ್ಕೆ ಪ್ರಕರಣ

ಕಾಲೇಜು ಅಂಗಳದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸುವುದನ್ನು ನಿಷೇಧಿಸಲು ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಅಧಿಕಾರ ನೀಡಿದ್ದ ಕರ್ನಾಟಕ ಸರ್ಕಾರದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಭಿನ್ನ ತೀರ್ಪು ನೀಡಿತು [ಆಯಿಷತ್ ಶಿಫಾ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣ].

ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ಸರ್ಕಾರದ ಆದೇಶ ಎತ್ತಿಹಿಡಿದರೆ, ನ್ಯಾ. ಸುಧಾಂಶು ಧುಲಿಯಾ ಅದನ್ನು ಬದಿಗೆ ಸರಿಸಿದರು. ನ್ಯಾಯಮೂರ್ತಿ ಗುಪ್ತಾ ತಮ್ಮ ತೀರ್ಪಿನಲ್ಲಿ ಹನ್ನೊಂದು ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡಿದ್ದರು. ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದಡಿ ಅಗತ್ಯ ಧಾರ್ಮಿಕ ಆಚರಣೆ (ಇಆರ್‌ಪಿ) ಅಲ್ಲ. ರಾಜ್ಯ ಸರ್ಕಾರದ ಆದೇಶ (ವಿದ್ಯಾರ್ಥಿಗಳು) ಶಿಕ್ಷಣ ಪಡೆಯಬೇಕು ಎಂಬ ಉದ್ದೇಶ ಹೊಂದಿದೆ ಎಂದು ಹೇಳಿದ ಅವರು ಮೇಲ್ಮನವಿಗಳನ್ನು ವಜಾಗೊಳಿಸಿದರು. ಆದರೆ ನ್ಯಾಯಮೂರ್ತಿ ಧುಲಿಯಾ ಇಆರ್‌ಪಿ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. (ಕರ್ನಾಟಕ) ಹೈಕೋರ್ಟ್‌ ತಪ್ಪು ಹೆಜ್ಜೆ ಇರಿಸಿದೆ ಎಂದರು.

ದೇಶದ್ರೋಹ ಕಾನೂನಿಗೆ ತಡೆ: ಹೊಸ ಪ್ರಕರಣ ದಾಖಲಿಸದಂತೆ ಕೇಂದ್ರ, ರಾಜ್ಯಗಳಿಗೆ ಸೂಚನೆ

ಐಪಿಸಿ ಸೆಕ್ಷನ್‌ 124 ಎ ಅಡಿಯಲ್ಲಿ ಯಾವುದೇ ದೇಶದ್ರೋಹ ಪ್ರಕರಣಗಳನ್ನು ದಾಖಲಿಸದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ಆದೇಶಿಸಿತು [ಎಸ್‌ ಜಿ ವೊಂಬತ್ಕೆರೆ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಕೇಂದ್ರ ಸರ್ಕಾರ ಕಾನೂನಿನ ಮರುಪರಿಶೀಲನಾ ಪ್ರಕ್ರಿಯೆ ಪೂರ್ಣವಾಗುವವರೆಗೆ ಸೆಕ್ಷನ್ 124ಎ ಬಳಕೆಯನ್ನು ತಡೆಹಿಡಿಯುವಂತೆ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್‌ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠ ನಿರ್ದೇಶಿಸಿತು. ಅಲ್ಲದೆ, ಮರುಪರಿಶೀಲನಾ ಪ್ರಕ್ರಿಯೆ ಪೂರ್ಣವಾಗುವವರೆಗೆ ಈ ಕಾನೂನಿನಡಿ ಬಾಕಿ ಉಳಿದಿರುವ ಎಲ್ಲಾ ವಿಚಾರಣೆಗಳಿಗೆ ಸುಪ್ರೀಂ ಕೋರ್ಟ್‌ ತಡೆ ನೀಡಿತು.

ಇಡಬ್ಲ್ಯೂಎಸ್‌ ಮೀಸಲಾತಿ ಎತ್ತಿ ಹಿಡಿದ ಸುಪ್ರೀಂ

ಮೇಲ್ಜಾತಿಗಳಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದವರಿಗೆ ಶೇ.10ರಷ್ಟು ಮೀಸಲಾತಿ ಒದಗಿಸುವ 103ನೇ ಸಾಂವಿಧಾನಿಕ ತಿದ್ದುಪಡಿಯನ್ನು ಸುಪ್ರೀಂ ಕೋರ್ಟ್‌ ಸಾಂವಿಧಾನಿಕ ಪೀಠ ಎತ್ತಿ ಹಿಡಿಯಿತು [ಜನಹಿತ್ ಅಭಿಯಾನ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ].

ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಮತ್ತು ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿಎಸ್ ರವೀಂದ್ರ ಭಟ್ಬೇಲಾ ಎಂ ತ್ರಿವೇದಿ ಮತ್ತು ಜೆ ಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠ ಈ ತೀರ್ಪು ನೀಡಿತು.

ನ್ಯಾಯಮೂರ್ತಿಗಳು ನಾಲ್ಕು ಪ್ರತ್ಯೇಕ ತೀರ್ಪುಗಳನ್ನು ನೀಡಿದರು. ಸಿಜೆಐ ಯು ಯು ಲಲಿತ್‌ ಮತ್ತು ರವೀಂದ್ರ ಭಟ್  ತಿದ್ದುಪಡಿಗೆ ಅಸಮ್ಮತಿ ಸೂಚಿಸಿ ವಿರುದ್ಧ ತೀರ್ಪು ನೀಡಿದರು. ಆದರೆ, ಇಡಬ್ಲ್ಯೂಎಸ್ ಮೀಸಲಾತಿ ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುವುದಿಲ್ಲ ಎಂದು ಬಹುಮತದ ತೀರ್ಪು ಹೇಳಿತು.

ಹಿಂದೂ ಉತ್ತರಾಧಿಕಾರ ಕಾಯಿದೆಗೂ ಮುನ್ನ ಮರಣಿಸಿದ ವ್ಯಕ್ತಿಯ ಸ್ವಯಾರ್ಜಿತ ಆಸ್ತಿಯ ಮೇಲೆ ಪುತ್ರಿಗೆ ಹಕ್ಕಿದೆ

ಹಿಂದೂ ಉತ್ತರಾಧಿಕಾರ ಕಾಯಿದೆ-1956 ಅಸ್ತಿತ್ವಕ್ಕೆ ಬರುವುದಕ್ಕೂ ಮುನ್ನ ಹಿಂದೂ ವ್ಯಕ್ತಿಯು ಸ್ವಯಾರ್ಜಿತವಾಗಿ ಸಂಪಾದಿಸಿದ ಅಥವಾ ಭಾಗವಾಗಿದ್ದರಿಂದ ದೊರೆತ ಅಥವಾ ಕೌಟುಂಬಿಕ ಸ್ವತ್ತನ್ನು ಉಯಿಲು ಬರೆಯದೇ ಸಾವನ್ನಪ್ಪಿದರೆ ಅಂಥ ಆಸ್ತಿಯು ವಾರಸುದಾರಿಕೆಯಿಂದ (ಇನ್ಹೆರಿಟೆನ್ಸ್) ದಕ್ಕುತ್ತದೆಯೇ ವಿನಾ ಉತ್ತರಜೀವಿತಾಧಿಕಾರದ (ಸರ್ವೈವರ್‌ಶಿಪ್‌) ಕಾರಣಕ್ಕಲ್ಲ. ಈ ಸಂದರ್ಭದಲ್ಲಿ ಮೃತ ವ್ಯಕ್ತಿಯ ಪುತ್ರಿಯು ಆ ಆಸ್ತಿಯ ವಾರಸುದಾರಿಕೆ ಪಡೆಯಲು ಇತರೆ ದಾಯಾದಿಗಳಿಗಿಂತ (ಕೊಲ್ಯಾಟರಲ್ಸ್) ಆದ್ಯತೆಯ ಹಕ್ಕು ಹೊಂದಿರುತ್ತಾರೆ ಎಂದು ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿತು.

ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಸ್‌ ಅಬ್ದುಲ್‌ ನಜೀರ್‌ ಮತ್ತು ಕೃಷ್ಣ ಮುರಾರಿ ನೇತೃತ್ವದ ವಿಭಾಗೀಯ ಪೀಠವು ನಡೆಸಿತು. “ಪ್ರಾಚೀನ ಕಾಲದ ಬರಹ, ಸ್ಮೃತಿ ಹಾಗೂ ನ್ಯಾಯಿಕ ಆದೇಶಗಳಲ್ಲಿ ಹಲವು ಮಹಿಳಾ ಉತ್ತರಾಧಿಕಾರಿಗಳ ಹಕ್ಕುಗಳನ್ನು ಗುರುತಿಸಲಾಗಿದೆ. ಅದರಲ್ಲಿ ಪತ್ನಿ ಮತ್ತು ಮಗಳ ಹಕ್ಕುಗಳು ಮೊದಲಿಗೆ ಬರುತ್ತವೆ” ಎಂದು ಪೀಠವು ಹೇಳಿತು.

ಗುಜರಾತ್‌ ಕೋಮು ಗಲಭೆ: ಪ್ರಧಾನಿ ಮೋದಿಯವರಿಗೆ ಕ್ಲೀನ್‌ ಚಿಟ್‌

ಗುಜರಾತ್ ಕೊಮು ಗಲಭೆಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ವಿಶೇಷ ತನಿಖಾ ದಳವು (ಎಸ್‌ಐಟಿ) ಪ್ರಧಾನಿ ನರೇಂದ್ರ ಮೋದಿಯವರಿಗೆ ಕ್ಲೀನ್‌ ಚಿಟ್‌ ನೀಡಿದ್ದನ್ನು ಆಕ್ಷೇಪಿಸಿ ಕಾಂಗ್ರೆಸ್‌ ಮಾಜಿ ಸಂಸದ ದಿವಂಗತ ಎಹ್ಸಾನ್‌ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿತು. ಆ ಮೂಲಕ 2002ರ ಗುಜರಾತ್‌ ಕೋಮು ಗಲಭೆಗಳ ವೇಳೆ ಅಲ್ಲಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರಿಗೆ ಎಸ್‌ಐಟಿ ನೀಡಿದ್ದ ಕ್ಲೀನ್‌ ಚಿಟ್‌ ಅನ್ನು ಎತ್ತಿ ಹಿಡಿಯಿತು [ಜಾಕಿಯಾ ಜಾಫ್ರಿ ವರ್ಸಸ್‌ ಗುಜರಾತ್‌ ಸರ್ಕಾರ].

ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್‌, ದಿನೇಶ್‌ ಮಹೇಶ್ವರಿ ಮತ್ತು ಸಿ ಟಿ ರವಿಕುಮಾರ್‌ ಅವರನ್ನುಳ್ಳ ತ್ರಿಸದಸ್ಯ ಪೀಠವು ತೀರ್ಪು ಪ್ರಕಟಿಸಿತು. "ಎಸ್‌ಐಟಿ ತನಿಖೆಯ ವರದಿಯನ್ನು ಒಪ್ಪಿಕೊಂಡ ಹಾಗೂ ಮನವಿಯನ್ನು ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಮ್ಯಾಜಿಸ್ಟ್ರೇಟ್ ನಿರ್ಧಾರವನ್ನು ನಾವು ಎತ್ತಿ ಹಿಡಿಯುತ್ತೇವೆ. ಈ ಮನವಿಯು ಅರ್ಹತೆಯನ್ನು ಹೊಂದಿಲ್ಲವಾಗಿದ್ದು ತಿರಸ್ಕರಿಸಲಾಗಿದೆ," ಎಂದು ಪೀಠವು ತನ್ನ ಆದೇಶದಲ್ಲಿ ಹೇಳಿತು.

ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಲ್ಲಿನ ಎಲ್ಲ ದೋಷಿಗಳ ಬಿಡುಗಡೆ

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಪ್ರಕರಣದ ಎಲ್ಲ ಆರು ದೋಷಿಗಳನ್ನು ಅವಧಿ ಪೂರ್ವವಾಗಿ ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್‌ ನವೆಂಬರ್‌ನಲ್ಲಿ ಆದೇಶಿಸಿತು. ಸಾಕಷ್ಟು ಕಾಲದಿಂದ ಜೈಲಿನಲ್ಲಿದ್ದರೂ ದೋಷಿಗಳು ಸನ್ನಡತೆ ತೋರಿದ್ದಾರೆ ಎಂಬುದನ್ನು ಪರಿಗಣಿಸಿ ನ್ಯಾಯಮೂರ್ತಿಗಳಾದ ಬಿ ಆರ್‌ ಗವಾಯಿ ಮತ್ತು ಬಿ ವಿ ನಾಗರತ್ನ ಅವರ ನೇತೃತ್ವದ ವಿಭಾಗೀಯ ಪೀಠವು ಜೈಲಿನಲ್ಲಿದ್ದ ಆರು ದೋಷಿಗಳ ಬಿಡುಗಡೆ ಆದೇಶ ಮಾಡಿತು.

ಇದಕ್ಕೂ ಮೊದಲು ಮೇನಲ್ಲಿ ಪ್ರಕರಣದ ಪ್ರಮುಖ ದೋಷಿಗಳಲ್ಲಿ ಒಬ್ಬರಾದ ಎ ಜಿ ಪೆರಾರಿವಾಳನ್‌ ಅವರನ್ನು ನ್ಯಾಯಮೂರ್ತಿಗಳಾದ ಎಲ್‌ ನಾಗೇಶ್ವರ ರಾವ್‌, ಬಿ ಆರ್‌ ಗವಾಯಿ ಮತ್ತು ಎ ಎಸ್‌ ಬೋಪಣ್ಣ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು ಸಂವಿಧಾನದ 142ನೇ ವಿಧಿಯಡಿ ತನಗೆ ಇರುವ ಅಧಿಕಾರವನ್ನು ಬಳಸಿ ಬಿಡುಗಡೆಗೊಳಿಸಿತ್ತು.

ಕೋವಿಡ್‌ ಲಸಿಕೆಗೆ ಒತ್ತಾಯ ಹೇರುವಂತಿಲ್ಲ

ಯಾವುದೇ ವ್ಯಕ್ತಿಗೆ ಲಸಿಕೆ ಹಾಕಿಸಿಕೊಳ್ಳಲು ಒತ್ತಾಯ ಮಾಡಲಾಗದಿದ್ದರೂ, ವ್ಯಕ್ತಿಗಳ ಮೇಲೆ ಹೇರಿರುವ ನಿರ್ಬಂಧಗಳಿಗೆ ಸಂಬಂಧಿಸಿದಂತೆ ಸರ್ಕಾರ ಅನುಸರಿಸುತ್ತಿರುವ ಪ್ರಸ್ತುತ ಲಸಿಕೆ ನೀತಿ ಏಕಪಕ್ಷೀಯವಾಗಿಯೇನೂ ಇಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತು.

ಲಭ್ಯವಿರುವ ಸಾಕ್ಷ್ಯಾಧಾರ, ಕೋವಿಡ್‌ ಕುರಿತಾದ ಆಸ್ಪತ್ರೆ ದಾಖಲಾತಿ ಹಾಗೂ ತಜ್ಞರ ಅಭಿಪ್ರಾಯ ಪರಿಗಣಿಸಿ ಪ್ರಸ್ತುತ ಲಸಿಕೆ ನೀತಿಯನ್ನು ಅಸಮಂಜಸ ಎಂದು ಹೇಳಲಾಗದು ಎಂಬುದಾಗಿ ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಬಿ ಆರ್ ಗವಾಯಿ ಅವರಿದ್ದ ಪೀಠ ಹೇಳಿತು. ಪ್ರಸ್ತುತ ಲಸಿಕೆ ನೀತಿ ಸ್ಪಷ್ಟವಾಗಿ ನಿರಂಕುಶ ರೀತಿಯಲ್ಲಿ ಇದೆ ಎಂದು ಹೇಳಲಾಗುವುದಿಲ್ಲ. ಆದರೂ ಲಸಿಕೆಗಳನ್ನು ಕಡ್ಡಾಯವಾಗಿ ನೀಡಬಾರದು ಮತ್ತು ಸರ್ಕಾರ ಯಾವುದೇ ವ್ಯಕ್ತಿಯನ್ನು ಅವನ ಅಥವಾ ಅವಳ ಇಚ್ಛೆಗೆ ವಿರುದ್ಧವಾಗಿ ಲಸಿಕೆ ಪಡೆಯುವಂತೆ ಒತ್ತಾಯಿಸಬಾರದು. ಆದರೆ ದೈಹಿಕ ಸ್ವಾಯತ್ತತೆಯನ್ನು ನಿಯಂತ್ರಿಸಬಹುದು ಎಂದಿತು.

Related Stories

No stories found.
Kannada Bar & Bench
kannada.barandbench.com