ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಗುರುತು ಪತ್ತೆ ಪರೇಡ್ (ಟಿಐಪಿ) ವಿಳಂಬವಾದಷ್ಟೂ ಸಾಕ್ಷಿಗಳು ತಮ್ಮ ಜ್ಞಾಪಕಶಕ್ತಿ ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ, ಆರೋಪಿಗಳನ್ನು ಪತ್ತೆ ಹಚ್ಚುವುದು ಕಷ್ಟವಾಗಲಿದೆ. ಆದ್ದರಿಂದ, ತನಿಖಾಧಿಕಾರಿಗಳು ತುರ್ತಾಗಿ ಟಿಐಪಿ ನಡೆಸುವ ಅಗತ್ಯವಿದೆ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅನೈತಿಕ ಕಳ್ಳ ಸಾಗಣೆ (ಇಮ್ಮಾರಲ್ ಟ್ರಾಫಿಕಿಂಗ್) ಪ್ರಕರಣವೊಂದರಲ್ಲಿ ಕೃತ್ಯ ನಡೆದ 11 ವರ್ಷಗಳ ಬಳಿಕ ಟಿಐಪಿ ನಡೆಸಲು ತನಿಖಾಧಿಕಾರಿಗೆ ಅವಕಾಶ ನೀಡಿ ಬೆಂಗಳೂರಿನ ಐದನೇ ಹೆಚ್ಚುವರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕೆ ಉಮೇಶ್ ಶೆಟ್ಟಿ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.
“ಅಪರಾಧ ಕೃತ್ಯಕ್ಕೆ ಕಾರಣವಾದ ಅಥವಾ ಕೃತ್ಯವೆಸಗಿದ ವ್ಯಕ್ತಿಯನ್ನು ಪತ್ತೆ ಹಚ್ಚಲು ಟಿಐಪಿ ನಡೆಸಲಾಗುತ್ತದೆ. ಆದ್ದರಿಂದ, ಸಾಕ್ಷಿಗಳು ನೆನಪಿನ ಶಕ್ತಿ ಕಳೆದುಕೊಳ್ಳುವ ಮುನ್ನವೇ ಆದಷ್ಟು ತುರ್ತಾಗಿ ಗುರುತು ಪತ್ತೆ ಪರೇಡ್ ನಡೆಸಬೇಕು. ಹಾಲಿ ಪ್ರಕರಣದಲ್ಲಿ ದೂರು ದಾಖಲಾದ 11 ವರ್ಷಗಳ ಬಳಿಕ ತನಿಖಾಧಿಕಾರಿ ಟಿಐಪಿ ನಡೆಸಲು ಅನುಮತಿ ಕೋರಿದ್ದಾರೆ. ಇಷ್ಟು ವರ್ಷಗಳ ನಂತರ ಸಾಕ್ಷಿಯ ಸ್ಮರಣ ಶಕ್ತಿ ದುರ್ಬಲವಾಗಿರುತ್ತದೆ ಹಾಗೂ ಅಂತಹ ಸಾಕ್ಷಿ ತೋರಿಸುವ ಗುರುತಿನ ಮೇಲೆ ವಿಶ್ವಾಸ ಇಡಲಾಗದು. ಇಷ್ಟು ಮಾತ್ರವಲ್ಲದೇ ಘಟನೆ ನಡೆದ ಸ್ಥಳದಲ್ಲಿ ಪತ್ತೆಯಾಗಿರುವ ಕೈಗುರುತಿಗೂ ಅರ್ಜಿದಾರರ ಕೈಗುರುತಿಗೂ ಯಾವುದೇ ಸಾಮ್ಯತೆ ಇಲ್ಲ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
"ಕೃತ್ಯ ನಡೆದ 11 ವರ್ಷಗಳ ಬಳಿಕ ಗುರುತು ಪತ್ತೆ ಪರೇಡ್ ನಡೆಸಿದರೆ ಉದ್ದೇಶ ಈಡೇರುವ ಸಾಧ್ಯತೆಗಳಿಲ್ಲ. ಆದ್ದರಿಂದ, ಈ ಪ್ರಕರಣದಲ್ಲಿ ಯಾವ ಆಯಾಮದಿಂದ ನೋಡಿದರೂ 11 ವರ್ಷಗಳ ಬಳಿಕ ಟಿಐಪಿ ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ" ಎಂದು ಅಭಿಪ್ರಾಯಪಟ್ಟಿರುವ ಪೀಠವು ವಿಚಾರಣಾಧೀನ ನ್ಯಾಯಾಲಯದ ಆದೇಶ ರದ್ದುಪಡಿಸಿದೆ. ಜತೆಗೆ, ಇಂತಹ ಸಮಸ್ಯೆಗಳನ್ನು ತಪ್ಪಿಸುವ ಸಲುವಾಗಿ ಕೃತ್ಯ ಸಂಭವಿಸಿದ ಆರಂಭದಲ್ಲೇ ತನಿಖಾಧಿಕಾರಿಗಳು ಯಾವುದೇ ವಿಳಂಬವಿಲ್ಲದೆ ಟಿಐಪಿ ನಡೆಸುವ ಅಗತ್ಯವಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಹಿನ್ನೆಲೆ: 2006ರಲ್ಲಿ ಬೆಂಗಳೂರಿನ ಬಸವೇಶ್ವರನಗರ ಪೊಲೀಸರು ನಾಲ್ವರು ಆರೋಪಿಗಳ ವಿರುದ್ಧ ಅನೈತಿಕ ಸಾಗಣೆ (ನಿಯಂತ್ರಣ) ಕಾಯಿದೆ - 1956ರ ಸೆಕ್ಷನ್‌ಗಳಾದ 3, 4 , 5 ಮತ್ತು 7ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ನಾಲ್ವರಲ್ಲಿ ಪೊನ್ನಪ್ಪ ಅವರ ಪುತ್ರ ಉಮೇಶ್ ಶೆಟ್ಟಿ ಎಂಬಾತ ಮೊದಲ ಆರೋಪಿಯಾಗಿದ್ದು, ಆತ ತಲೆ ಮರೆಸಿಕೊಂಡಿದ್ದ. ಆತನ ವಿರುದ್ಧ ವಿಚಾರಣಾಧೀನ ನ್ಯಾಯಾಲಯವು ಜಾಮೀನುರಹಿತ ವಾರಂಟ್ (ಎನ್‌ಬಿಡಬ್ಲ್ಯು) ಜಾರಿಗೊಳಿಸಿತ್ತು.
ಅರ್ಜಿದಾರ ಉಮೇಶ್ ಶೆಟ್ಟಿ ವಿರುದ್ಧ ಎನ್‌ಬಿಡಬ್ಲ್ಯು ಕಾರ್ಯಗತಗೊಳಿಸಲು ಪೊಲೀಸರು ಮುಂದಾಗಿದ್ದರು. ಆಗ ಅವರು, ತಾನು ಪೊನ್ನಪ್ಪನ ಮಗ ಉಮೇಶ್ ಶೆಟ್ಟಿಯಲ್ಲ, ತಮ್ಮ ತಂದೆಯ ಹೆಸರು ದಿವಂಗತ ವಿಠಲ ಶೆಟ್ಟಿ ಹಾಗೂ ವಾರಂಟ್‌ನಲ್ಲಿ ಹೆಸರಿಸಿರುವುದು ತಾವಲ್ಲ ಎಂದು ಪೊಲೀಸರಿಗೆ ತಿಳಿಸಿದ್ದರು. ಇದರಿಂದ, ಸತ್ಯಾಸತ್ಯತೆ ಅರಿಯಲು ಟಿಐಪಿ ನಡೆಸಲು ಅನುಮತಿ ನೀಡುವಂತೆ ಪ್ರಾಸಿಕ್ಯೂಷನ್ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಅದನ್ನು ಪುರಸ್ಕರಿಸಿದ್ದ ವಿಚಾರಣಾಧೀನ ನ್ಯಾಯಾಲಯವು ಟಿಐಪಿ ನಡೆಸಲು ಅನುಮತಿ ನೀಡಿ 2017ರ ಸೆಪ್ಟೆಂಬರ್ 7ರಂದು ಆದೇಶಿಸಿತ್ತು. ಈ ಆದೇಶ ರದ್ದುಕೋರಿ ಉಮೇಶ್ ಶೆಟ್ಟಿ ಹೈಕೋರ್ಟ್ ಮೆಟ್ಟಿಲೇರಿದ್ದರು.