ರಾಮ ಜನ್ಮಭೂಮಿ ಹಾಗೂ ಮಳಲಿ ಮಸೀದಿ ವಿವಾದದ ನಡುವೆ ವ್ಯತ್ಯಾಸವಿದೆ: ಮಂಗಳೂರು ನ್ಯಾಯಾಲಯದಲ್ಲಿ ಮುಸ್ಲಿಂ ಪಕ್ಷಕಾರರ ವಾದ

ವಾರಾಣಸಿಯ ಜ್ಞಾನವಾಪಿ ಮಸೀದಿ ವಿವಾದಕ್ಕೂ ಮಂಗಳೂರಿನ ಮಳಲಿ ಪೇಟೆ ಮಸೀದಿ ವಿವಾದಕ್ಕೂ ಹೆಚ್ಚು ಹೋಲಿಕೆಯಿದ್ದು, ಅಲ್ಲಿಯಂತೆಯೇ ಇಲ್ಲಿಯೂ ಕೂಡ ಸಮೀಕ್ಷೆ ನಡೆಯಬೇಕು ಎಂದು ಒತ್ತಾಯಿಸಿದ ಹಿಂದೂ ಪಕ್ಷಕಾರರು.
Malalipet Majid, Mangaluru
Malalipet Majid, MangaluruDaijiworld

ರಾಮ ಜನ್ಮ ಭೂಮಿ ವಿವಾದಕ್ಕೂ ಮಳಲಿ ಮಸೀದಿ ವಿವಾದಕ್ಕೂ ವ್ಯತ್ಯಾಸವಿದ್ದು 1991ರ ಆರಾಧನಾ ಸ್ಥಳ ಕಾಯಿದೆಯನ್ವಯ ಸ್ವಾತಂತ್ರ್ಯ ಸಂದರ್ಭದಲ್ಲಿ ಅಸ್ತಿತ್ವದಲ್ಲಿದ್ದ ಧಾರ್ಮಿಕ ಸ್ಥಳಗಳನ್ನು ಅದು ಹೇಗಿತ್ತೋ ಹಾಗೆಯೇ ಉಳಿಸಿಕೊಳ್ಳಬೇಕಿದೆ ಎಂದು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್‌ ಮತ್ತು ಜೆಎಂಎಫ್‌ ನ್ಯಾಯಾಲಯದಲ್ಲಿ ಮುಸ್ಲಿಂ ಪಕ್ಷಕಾರರ ಪರ ಇಂದು ವಾದ ಮಂಡಿಸಲಾಯಿತು.

ಮಂಗಳೂರಿನ ಮಳಲಿಪೇಟೆ ಜುಮ್ಮಾ ಮಸೀದಿ ನವೀಕರಣ ವೇಳೆ ಏಪ್ರಿಲ್ 21ರಂದು ದೇಗುಲ ಶೈಲಿಯ ನಿರ್ಮಿತಿ ಪತ್ತೆಯಾಗಿತ್ತು. ಈ ಬಗ್ಗೆ ಧನಂಜಯ್‌ ಮತ್ತು ಮನೋಜ್‌ ಕುಮಾರ್‌ ಎಂಬುವವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ನವೀಕರಣ ಕಾಮಗಾರಿಗೆ ಈ ಹಿಂದೆ ತಡೆ ನೀಡಿದ್ದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಜೂನ್‌ 3ಕ್ಕೆ ನಿಗದಿಪಡಿಸಿತ್ತು. ಈ ನಡುವೆ ಮಳಲಿ ಪೇಟೆಯ ಅಸಯ್ಯಿದ್‌ ಅಬ್ದುಲ್ಲಾಹಿಲ್‌ ಮದನಿ ಮಸೀದಿ ಆಡಳಿತ ವರ್ಗವು ಹಿಂದೂ ಪಕ್ಷಕಾರರ ಅರ್ಜಿ ವಜಾಗೊಳಿಸುವಂತೆ ಮನವಿ ಸಲ್ಲಿಸಿತ್ತು.

ಅರ್ಜಿಯ ವಿಚಾರಣೆ ವೇಳೆ ಮಸೀದಿ ಆಡಳಿತ ವರ್ಗದ ಪರವಾಗಿ ವಾದ ಮಂಡಿಸಿದ ವಕೀಲ ಎಂ ಪಿ ಶೆಣೈ “ರಾಮ ಜನ್ಮಭೂಮಿ ಪ್ರಕರಣಕ್ಕೂ ಮಳಲಿ ಮಸೀದಿ ವಿವಾದಕ್ಕೂ ವ್ಯತ್ಯಾಸವಿದೆ. ಸ್ವಾತಂತ್ರ್ಯ ಸಂದರ್ಭದಲ್ಲಿ ಅಸ್ತಿತ್ವದಲ್ಲಿದ್ದ ಧಾರ್ಮಿಕ ಸ್ಥಳಗಳನ್ನು ಉಳಿಸಿಕೊಳ್ಳಬೇಕಿದೆ. ಅದಕ್ಕಾಗಿಯೇ 1991ರ ಆರಾಧನಾ ಸ್ಥಳ ಕಾಯಿದೆ ಜಾರಿಗೆ ತರಲಾಗಿದೆ” ಎಂದರು.

Also Read
ಮಂಗಳೂರು ಮಸೀದಿ ವಿವಾದ: ನವೀಕರಣ ಕಾಮಗಾರಿಗೆ ಮಧ್ಯಂತರ ತಡೆ ನೀಡಿರುವ ಸಿವಿಲ್ ನ್ಯಾಯಾಲಯ

ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಫಿರ್ಯಾದುದಾರರ ಪರ ವಕೀಲ ಎಂ ಚಿದಾನಂದ ಕೆದಿಲಾಯ ಅವರು ವಾರಾಣಸಿಯ ಜ್ಞಾನವಾಪಿ ಮಸೀದಿ ವಿವಾದಕ್ಕೂ ಮಂಗಳೂರಿನ ಮಳಲಿ ಪೇಟೆ ಮಸೀದಿ ವಿವಾದಕ್ಕೂ ಹೆಚ್ಚು ಹೋಲಿಕೆಯಿದ್ದು, ಅಲ್ಲಿಯಂತೆಯೇ ಇಲ್ಲಿಯೂ ಕೂಡ ಸಮೀಕ್ಷೆ ನಡೆಯಬೇಕು. ಸಮೀಕ್ಷೆಗಾಗಿ ಕೋರ್ಟ್‌ ಕಮಿಷನರ್‌ ನೇಮಕ ಮಾಡಬೇಕು, ವೀಡಿಯೊಗ್ರಫಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂಬಂಧ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಹಾಗೂ ಇತ್ತೀಚೆಗೆ ವಾರಾಣಸಿಯ ಜಿಲ್ಲಾ ನ್ಯಾಯಾಲಯ ಹೊರಡಿಸಿರುವ ಆದೇಶಗಳನ್ನು ಅವರು ನ್ಯಾಯಾಲಯದ ಗಮನಕ್ಕೆ ತಂದರು.

ವಾದಗಳನ್ನು ಆಲಿಸಿದ ನ್ಯಾಯಾಲಯ ಮಸೀದಿ ನವೀಕರಣ ಕಾರ್ಯಕ್ಕೆ ನೀಡಿರುವ ತಾತ್ಕಾಲಿಕ ತಡೆಯಜ್ಞೆ ಮುಂದಿನ ವಿಚಾರಣೆವರೆಗೂ ಮುಂದುವರೆಯಲಿದೆ ಎಂದು ತಿಳಿಸಿ ವಿಚಾರಣೆಯನ್ನು ನಾಳೆಗೆ ಮುಂದೂಡಿತು.

Related Stories

No stories found.
Kannada Bar & Bench
kannada.barandbench.com