ರಕ್ತ ಸಂಬಂಧಿಗಳ ನಡುವೆ ಉದ್ಯೋಗದಾತ-ಉದ್ಯೋಗಿಯ ಸಂಬಂಧ ನಿರ್ಬಂಧಿಸುವ ಕಾನೂನು ಇಲ್ಲ: ಕರ್ನಾಟಕ ಹೈಕೋರ್ಟ್‌

ಅಮ್ಜದ್ ಖಾನ್ ತಮ್ಮ ಸಹೋದರನ ಒಡೆತನದ ಲಾರಿಯ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂಬ ಕಾರಣಕ್ಕೆ ಪರಿಹಾರ ನೀಡುವಂತಿಲ್ಲ ಎಂಬ ವಿಮಾ ಕಂಪೆನಿಯ ವಾದವನ್ನು ಒಪ್ಪಲಾಗದು ಎಂದಿರುವ ನ್ಯಾಯಾಲಯ.
Karnataka HC (Dharwad bench) and Justice H P Sandesh
Karnataka HC (Dharwad bench) and Justice H P Sandesh

ಸಹೋದರನ ಒಡೆತನದ ಲಾರಿಯ ಚಾಲಕನಾಗಿದ್ದ ವ್ಯಕ್ತಿ ಅಪಘಾತದಲ್ಲಿ ಸಾವನ್ನಪ್ಪಿದ ಪ್ರಕರಣದಲ್ಲಿ ಮೃತನ ಕುಟುಂಬ ಸದಸ್ಯರಿಗೆ ಪರಿಹಾರ ನೀಡಲು ಅವಕಾಶವಿಲ್ಲ ಎಂಬ ವಿಮಾ ಕಂಪೆನಿಯ ವಾದ ಒಪ್ಪದ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಕಾರ್ಮಿಕರ ಪರಿಹಾರ ಕಾಯಿದೆಯ ನಿಬಂಧನೆಯ ಅಡಿ ರಕ್ತ ಸಂಬಂಧಿಗಳ ನಡುವಿನ ಉದ್ಯೋಗದಾತ-ಉದ್ಯೋಗಿಯ ಸಂಬಂಧವನ್ನು ನಿರ್ಬಂಧಿಸುವ ಕಾನೂನು ಇಲ್ಲ ಎಂದು ಸ್ಪಷ್ಟಪಡಿಸಿದೆ.

ಅಪಘಾತ ಪ್ರಕರಣವೊಂದರಲ್ಲಿ ಮೃತಪಟ್ಟ ಲಾರಿ ಚಾಲಕನ ಕುಟುಂಬದವರಿಗೆ ಪರಿಹಾರ ಪಾವತಿ ಹೊಣೆಯನ್ನು ತನಗೆ ಹೊರಿಸಿದ ಕಾರ್ಮಿಕರ ಪರಿಹಾರ ಆಯುಕ್ತರ ಆದೇಶ ರದ್ದು ಕೋರಿ ಕೊಪ್ಪಳದ ಓರಿಯಂಟಲ್‌ ವಿಮಾ ಕಂಪೆನಿಯ ಪ್ರಾದೇಶಿಕ ವ್ಯವಸ್ಥಾಪಕ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶ ಮಾಡಿದೆ.

ಅಮ್ಜದ್ ಖಾನ್ ತಮ್ಮ ಸಹೋದರನ ಒಡೆತನದ ಲಾರಿಯ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂಬ ಕಾರಣಕ್ಕೆ ಪರಿಹಾರ ನೀಡುವಂತಿಲ್ಲ ಎಂಬ ವಿಮಾ ಕಂಪೆನಿಯ ವಾದವನ್ನು ಒಪ್ಪಲಾಗದು. ರಕ್ತ ಸಂಬಂಧಿಗಳ ನಡುವೆ ಉದ್ಯೋಗದಾತ-ಉದ್ಯೋಗಿಯ ಸಂಬಂಧಕ್ಕೆ ಕಾನೂನಿನಲ್ಲಿ ಯಾವುದೇ ನಿರ್ಬಂಧವಿಲ್ಲ. ಅಪಘಾತ ನಡೆದ ದಿನದಂದು ಮೃತ ವ್ಯಕ್ತಿಯು ಅಧಿಕೃತ ಚಾಲನಾ ಪರವಾನಗಿ ಹೊಂದಿದ್ದರು. ಹೀಗಾಗಿ, ಮೃತ ವ್ಯಕ್ತಿ ಅಪಘಾತಕ್ಕೆ ಕಾರಣವಾದ ಲಾರಿಯ ಕಾರ್ಮಿಕನಾಗಿರಲಿಲ್ಲ ಎಂಬುದಾಗಿ ಹೇಳಲಾಗದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಇನ್ನೂ ಅಪಘಾತ ಸಂಭವಿಸಿದ ದಿನದಂದು ಲಾರಿಯ ವಿಮಾ ಪಾಲಿಸಿ ಚಾಲ್ತಿಯಲ್ಲಿತ್ತು. ಎರಡನೇ ಚಾಲಕನಿಗೆ (ಹೆಚ್ಚುವರಿ ಚಾಲಕ) ಪ್ರೀಮಿಯಂ ಪಾವತಿಸಿರಲಿಲ್ಲ ಎಂಬುದಾಗಿ ವಿಮಾ ಕಂಪೆನಿ ವಾದಿಸುತ್ತಿದೆ. ಆದರೆ, ವಾಸ್ತವವಾಗಿ ಎರಡನೇ ಚಾಲಕ ಪರಿಹಾರ ಕೋರಿಲ್ಲ. ಅಮ್ಜದ್ ಖಾನ್ ಮೃತ ಪಟ್ಟು ಎರಡು ಗಂಟೆಯೊಳಗೆ ದೂರು ದಾಖಲಾಗಿದೆ. ಇನ್ನೂ ಪ್ರಕರಣದ ದೋಷಾರೋಪ ಪಟ್ಟಿಯನ್ನು ಪ್ರಶ್ನಿಸಿಲ್ಲ ಎಂದು ತಿಳಿಸಿರುವ ಹೈಕೋರ್ಟ್, ವಿಮಾ ಕಂಪೆನಿಯ ಮೇಲ್ಮನವಿ ವಜಾಗೊಳಿಸಿದೆ. ಅಲ್ಲದೆ, ಠೇವಣಿಯಿಟ್ಟಿರುವ ಪರಿಹಾರ ಮೊತ್ತವನ್ನು ಕೂಡಲೇ ಮೃತನ ಕುಟುಂಬದವರಿಗೆ ವಿತರಣೆ ಮಾಡಬೇಕು ಎಂದು ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಕೊಪ್ಪಳದ ನಿವಾಸಿ ಅಮ್ಜದ್ ಖಾನ್ ತಮ್ಮ ಸಹೋದರನ ಒಡೆತನದ ಲಾರಿಯಲ್ಲಿ ಚಾಲಕರಾಗಿ ಉದ್ಯೋಗ ಮಾಡುತ್ತಿದ್ದರು. 2008ರ ಜನವರಿ 30ರಂದು ಅಕ್ಕಿಮೂಟೆಗಳನ್ನು ಅನ್‌ಲೋಡ್ ಮಾಡಲು ಕಂಪ್ಲಿಯಿಂದ ತುಮಕೂರಿಗೆ ತೆರಳುತ್ತಿದ್ದರು. ಎರಡನೇ ಚಾಲಕ ಪೌಲ್‌ರಾಜ್ ಲಾರಿಯನ್ನು ಚಲಾಯಿಸುತ್ತಿದ್ದರು. ಮರಿಯಮ್ಮನಹಳ್ಳಿ ಬೈಪಾಸ್ ಬಳಿ ಎದುರಿಗಡೆಯಿಂದ ತೀರಾ ಸಮೀಪಕ್ಕೆ ಬಂದಿದ್ದ ಮತ್ತೊಂದು ಲಾರಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬ್ರೇಕ್ ಹಾಕಿದಾಗ ಕ್ಯಾಬಿನಲ್ಲಿ ಕೂತಿದ್ದ ಅಮ್ಜದ್ ಖಾನ್ ಕೆಳಗೆ ಬಿದ್ದು ಸಾವನ್ನಪ್ಪಿದ್ದರು.

ಘಟನೆ ಸಂಬಂಧ ಪರಿಹಾರ ಕೋರಿ ಮೃತ ಅಮ್ಜದ್ ಖಾನ್ ಪತ್ನಿ ಮತ್ತು ಮಕ್ಕಳು ಕೊಪ್ಪಳ ಜಿಲ್ಲೆಯ ಕಾರ್ಮಿಕರ ಪರಿಹಾರ ಆಯುಕ್ತರಿಗೆ ಕ್ಲೇಮು ಅರ್ಜಿ ಸಲ್ಲಿಸಿದ್ದರು. ಅದನ್ನು ಪುರಸ್ಕರಿಸಿದ್ದ ಆಯುಕ್ತರು, ಮೃತನ ಕುಟುಂಬದವರಿಗೆ ಒಟ್ಟು 4,15,960 ರೂಪಾಯಿ ಪರಿಹಾರ ಪ್ರಕಟಿಸಿದ್ದರು. ಅಲ್ಲದೆ, ಪರಿಹಾರ ಮೊತ್ತದ ಪಾವತಿ ಹೊಣೆಗಾರಿಕೆಯನ್ನು ವಿಮಾ ಕಂಪೆನಿ ಮೇಲೆ ಹೊರಿಸಿ 2011ರ ಜುಲೈ 21ರಂದು ಆದೇಶಿಸಿದ್ದರು. ಆ ಆದೇಶ ರದ್ದು ಕೋರಿ ವಿಮಾ ಕಂಪೆನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

ಮೃತ ಅಮ್ಜದ್ ಖಾನ್ ತನ್ನ ಸಹೋದರನ ಲಾರಿಯ ಚಾಲಕನಾಗಿ ಉದ್ಯೋಗ ಮಾಡುತ್ತಿದ್ದರು. ಹೀಗಾಗಿ, ಸಹೋದರ ನಡುವೆ (ರಕ್ತ ಸಂಬಂಧಿಗಳ) ಉದ್ಯೋಗದಾತ-ಉದ್ಯೋಗಿಯ ಸಂಬಂಧವನ್ನು ಪರಿಗಣಿಸಲ್ಪಡುವುದಿಲ್ಲ. ಇನ್ನೂ ಲಾರಿಯ ಇಬ್ಬರು ಚಾಲಕರಿಗೆ ವಿಮಾ ಪಾಲಿಸಿ ಮಾಡಿರಲಿಲ್ಲ. ಎರಡನೇ ಚಾಲಕನಿಗೆ ರಿಸ್ಕ್ ಕವರ್ ಇರಲಿಲ್ಲ ಹಾಗೂ ಹೆಚ್ಚುವರಿ ಪ್ರೀಮಿಯಂ ಪಾವತಿಸಿರಲಿಲ್ಲ. ಹೀಗಾಗಿ, ಮೃತನ ಚಾಲಕನಿಗೆ ಪರಿಹಾರ ಪ್ರಕಟಿಸಿದ ಮತ್ತು ಪರಿಹಾರ ಪಾವತಿ ಹೊಣೆಯನ್ನು ತನ್ನ ಮೇಲೆ ಹೊರಿಸಿದ ಕಾರ್ಮಿಕ ಆಯುಕ್ತರ ಆದೇಶ ಕಾನೂನು ಬಾಹಿರವಾಗಿದೆ ಎಂದು ವಿಮಾ ಕಂಪೆನಿ ವಾದಿಸಿತ್ತು. ಇದನ್ನು ಹೈಕೋರ್ಟ್‌ ತಿರಸ್ಕರಿಸಿದೆ.

Related Stories

No stories found.
Kannada Bar & Bench
kannada.barandbench.com