“ಬೇರೆಯವರಿಗೆ ಮಂಜೂರಾಗಿದ್ದ ಭೂಮಿ ಖರೀದಿಸಿದ್ದರೆ ಅದಕ್ಕೆ ದಾಖಲೆ ಇರಬೇಕಲ್ಲವೇ?” ಎಚ್‌ಡಿಕೆಗೆ ಹೈಕೋರ್ಟ್‌ ಪ್ರಶ್ನೆ

ರಾಮನಗರದ ಕೇತಗಾನಹಳ್ಳಿಯಲ್ಲಿನ ಸರ್ವೇ ನಂಬರ್‌ 8, 9, 10, 16, 17 ಮತ್ತು 79ಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನಡೆಸಿರುವ ತನಿಖಾ ವರದಿಯನ್ನು ಮುಂದಿನ ವಿಚಾರಣೆಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದ ಪೀಠ.
HD Kumaraswamy Karnataka HC
HD Kumaraswamy Karnataka HC
Published on

“ಬೇರೆಯವರಿಗೆ ಮಂಜೂರಾಗಿದ್ದ ಭೂಮಿಯನ್ನು ಖರೀದಿಸಿದ್ದರೆ ಅದಕ್ಕೆ ದಾಖಲೆ ಇರಬೇಕಲ್ಲವೇ?” ಎಂದು ಕರ್ನಾಟಕ ಹೈಕೋರ್ಟ್‌ ಮೌಖಿಕವಾಗಿ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದೆ.

ರಾಮನಗರ ತಾಲ್ಲೂಕಿನ ಕೇತಗಾನಹಳ್ಳಿಯಲ್ಲಿ ತಮ್ಮ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸುವಂತೆ ಕುಮಾರಸ್ವಾಮಿ ಅವರಿಗೆ ತಹಶೀಲ್ದಾರ್‌ ಜಾರಿ ಮಾಡಿದ್ದ ನೋಟಿಸ್‌ಗೆ ತಡೆ ನೀಡಿರುವುದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಡಿ ಕೆ ಸಿಂಗ್‌ ಮತ್ತು ಕೆ ರಾಜೇಶ್‌ ರೈ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಉಭಯ ಪಕ್ಷಕಾರ ವಾದ ಆಲಿಸಿದ ನ್ಯಾಯಾಲಯವು ರಾಮನಗರದ ಕೇತಗಾನಹಳ್ಳಿಯಲ್ಲಿನ ಸರ್ವೇ ನಂಬರ್‌ 8, 9, 10, 16, 17 ಮತ್ತು 79ಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನಡೆಸಿರುವ ತನಿಖಾ ವರದಿಯನ್ನು ಮುಂದಿನ ವಿಚಾರಣೆಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ಅಲ್ಲದೇ, ತಹಶೀಲ್ದಾರ್‌ ನೋಟಿಸ್‌ಗೆ ಆಕ್ಷೇಪಣೆ ಸಲ್ಲಿಸಲು ಕುಮಾರಸ್ವಾಮಿಗೆ ನಿರ್ದೇಶಿಸಿ ವಿಚಾರಣೆಯನ್ನು ಅಕ್ಟೋಬರ್‌ 27ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ, ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಕುಮಾರಸ್ವಾಮಿ ಅವರು ಭೂಮಿ ಖರೀದಿಸಿಲ್ಲ. ಅದು ಸರ್ಕಾರದ ಭೂಮಿ. ಭೂಕಂದಾಯ ಕಾಯಿದೆ ಅಡಿ ಆಕ್ಷೇಪಾರ್ಹವಾದ ಭೂಮಿಗೆ ಸಂಬಂಧಿಸಿದಂತೆ ದಾಖಲೆ ಸಲ್ಲಿಸುವಂತೆ ಕುಮಾರಸ್ವಾಮಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಇದಕ್ಕೆ ಅವರು ಪ್ರತಿಕ್ರಿಯೆ ನೀಡಿಲ್ಲ. ಕೇತಗಾನಹಳ್ಳಿಯಲ್ಲಿ 22 ಎಕರೆ ಹೊಂದಿರುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. 13 ಎಕರೆಯನ್ನು ಕ್ರಯಪತ್ರದ ಮೂಲಕ ಖರೀದಿಸಿದ್ದಾರೆ. ಉಳಿದ 6.06 ಎಕರೆ ಅದಕ್ಕೆ ದಾಖಲೆಗಳು ಇಲ್ಲ. ಇದಕ್ಕೆ ಕ್ರಯಪತ್ರವಿಲ್ಲ. ಇದನ್ನು ಸಲ್ಲಿಸಿದರೆ ಅದನ್ನು ಪರಿಗಣಿಸಿ, ಸರ್ಕಾರ ತನಿಖೆ ಕೈಬಿಡಲಿದೆ” ಎಂದರು.

ಕುಮಾರಸ್ವಾಮಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್‌ ಹೊಳ್ಳ ಅವರು “ಮಂಡ್ಯದಲ್ಲಿ ನನ್ನ ರಾಜಕೀಯ ವಿರೋಧಿಯಾದ ಮಾದೇಗೌಡ ಅವರು ಸುಳ್ಳು ಪ್ರಕರಣ ದಾಖಲಿಸಿದ್ದರು. ಇದನ್ನು ಆಧರಿಸಿ ತನಿಖೆ ನಡೆಸಲು, ಲೋಕಾಯುಕ್ತ ಆದೇಶಿಸಿತ್ತು. ತನಿಖೆಯಲ್ಲಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಲಾಗಿಲ್ಲ. ಮಂಜೂರು ಮಾಡಿದ್ದ ಭೂಮಿಯನ್ನು ಕುಮಾರಸ್ವಾಮಿ ಖರೀದಿಸಿದ್ದಾರೆ ಎಂದು ವರದಿ ನೀಡಲಾಗಿದೆ. ಈಗ ರಾಜ್ಯ ಸರ್ಕಾರವು ಒತ್ತುವರಿ ಭೂಮಿಗೆ ಸಂಬಂಧಿಸಿದಂತೆ ಎಸ್‌ಐಟಿ ರಚಿಸಿದೆ. ಇದು ಅಕ್ರಮವಾಗಿದೆ” ಎಂದರು.

Also Read
ಎಚ್‌ಡಿಕೆ ವಿರುದ್ಧದ ಭೂ ಒತ್ತುವರಿ ಪ್ರಕರಣ: ಮಧ್ಯಂತರ ಆದೇಶಕ್ಕೆ ಹೈಕೋರ್ಟ್‌ ತಡೆ; ಎಸ್‌ಐಟಿ ತನಿಖೆ ಹಾದಿ ಸುಗಮ

ವಿಚಾರಣೆಯ ಒಂದು ಹಂತದಲ್ಲಿ ಪೀಠವು “ಷೋಕಾಸ್‌ ನೋಟಿಸ್‌ಗೆ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ಸಲ್ಲಿಸಲಿ. ಭೂಮಿ ಯಾರಿಗೆ ಸಂಬಂಧಿಸಿದ್ದು ಎಂಬುದನ್ನು ತಹಶೀಲ್ದಾರ್‌ ಪರಿಶೀಲಿಸಬಾರದೇ? ಬೇರೆಯವರಿಗೆ ಮಂಜೂರಾದ ಭೂಮಿಯನ್ನು ಖರೀದಿಸಿದ್ದರೆ ಅದಕ್ಕೆ ದಾಖಲೆ ಇರಬೇಕಲ್ಲವೇ?” ಎಂದು ಹೊಳ್ಳ ಅವರನ್ನು ಕುರಿತು ಪ್ರಶ್ನಿಸಿತು.

ಅಂತಿಮವಾಗಿ ಜಿಲ್ಲಾಧಿಕಾರಿ ನಡೆಸಿರುವ ತನಿಖಾ ವರದಿ ಸಲ್ಲಿಸಲು ನಿರ್ದೇಶಿಸಿ, ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿತು.

Kannada Bar & Bench
kannada.barandbench.com