ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಜಾತಿಪದ್ದತಿ ತಾಂಡವ: ನ್ಯಾ. ಬಿ ವೀರಪ್ಪ ಆತಂಕ

ಪುಸ್ತಕದ ಕರ್ತೃ ಹಾಗೂ ನಿವೃತ್ತ ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನ್ ದಾಸ್ ಅವರು ಮಾತನಾಡಿ “ನ್ಯಾಯಾಂಗವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವಂತಹ ಮಾತುಗಳನ್ನು ಶಾಸಕಾಂಗ ಅದರಲ್ಲಿಯೂ ಉಪರಾಷ್ಟ್ರಪತಿ ಅವರೇ ಮಾತನಾಡಿರುವುದು ದುರಂತ” ಎಂದರು.
Karnataka High Court judge justice B Veerppa released the book ‘Nyayanga Olanota’ on Friday.
Karnataka High Court judge justice B Veerppa released the book ‘Nyayanga Olanota’ on Friday.Facebook
Published on

ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಜಾತಿ ಪದ್ದತಿ ತಾಂಡವವಾಡುತ್ತಿದ್ದು ಇದರಿಂದ ದೇಶ ಹಾಳಾಗುತ್ತಿದೆ. ಇದನ್ನು ದೂರ ಇಡುವಂತಾಗಬೇಕು ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಬಿ. ವೀರಪ್ಪ ಹೇಳಿದರು.

ಜನ ಪ್ರಕಾಶನ ಹೊರತಂದಿರುವ ನ್ಯಾ. ಹೆಚ್‌ ಎನ್‌ ನಾಗಮೋಹನ್‌ ದಾಸ್‌ ಅವರ ʼನ್ಯಾಯಾಂಗ ಒಳನೋಟʼ ಕೃತಿಯನ್ನು ಶುಕ್ರವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.


“ನ್ಯಾಯಪೀಠದಲ್ಲಿ ಇದ್ದಾಗ ಧರ್ಮ- ಅಧರ್ಮಗಳಷ್ಟೇ ಕಾಣಬೇಕು. ಜಾತಿ ಅಥವಾ ಸಂಬಂಧಗಳು ಆ ಹುದ್ದೆಗೆ ಅಡ್ಡಿ ಉಂಟುಮಾಡಬಾರದು. ತಪ್ಪುಮಾಡಿದವರು ತಮ್ಮ ಪತ್ನಿ ಅಥವಾ ಮಕ್ಕಳೇ ಆಗಿದ್ದರೂ ನಿರ್ದಾಕ್ಷಿಣ್ಯವಾಗಿ ಜೈಲಿಗೆ ಕಳಿಸುವ ಧೈರ್ಯವನ್ನು ನ್ಯಾಯಮೂರ್ತಿಗಳು ಬೆಳೆಸಿಕೊಳ್ಳಬೇಕು”ಎಂದು ಅವರು ಕರೆ ನೀಡಿದರು.

“ಭ್ರಷ್ಟಾಚಾರ ದೇಶದ ದೊಡ್ಡ ಪಿಡುಗು ಎಂದು ಕೂಡ ಕಳವಳ ವ್ಯಕ್ತಪಡಿಸಿದ ಅವರು ಇದು ಕ್ಯಾನ್ಸರ್‌ ಮಾದರಿಯಲ್ಲಿ ಹರಡುತ್ತಿದೆ. ಇದರ ವಿರುದ್ಧ ಮನೆಯಿಂದಲೇ ಹೋರಾಟ ಆರಂಭವಾಗಬೇಕು. ಸಂಬಳಕ್ಕಿಂತ ಹೆಚ್ಚಿನ ಹಣ ತಂದರೆ ಅದನ್ನು ಪ್ರಶ್ನಿಸುವ ಪತ್ನಿ ಮತ್ತು ಮಕ್ಕಳು ಇರಬೇಕು. ಆಗ ಮಾತ್ರ ಭ್ರಷ್ಟಾಚಾರ ತನ್ನಿಂತಾನೇ ಕಡಿಮೆಯಾಗುತ್ತದೆ” ಎಂದರು.

Also Read
ರಾಷ್ಟ್ರದ್ರೋಹ ಕಾನೂನು ವಜಾಗೊಳಿಸುವ ಸುವರ್ಣಾವಕಾಶ ಕಳೆದುಕೊಂಡ ಸುಪ್ರೀಂ ಕೋರ್ಟ್‌: ನ್ಯಾ. ನಾಗಮೋಹನ್‌ ದಾಸ್‌

“ಅತಿ ಹೆಚ್ಚು ಅಂಕಗಳಿಸಿ ದೊಡ್ಡ ಅಧಿಕಾರಿಯಾದವರು ಭ್ರಷ್ಟಾಚಾರದಲ್ಲಿ ತೊಡಗಿದರೆ ಏನು ಪ್ರಯೋಜನ? ಹೈಕೋರ್ಟ್‌ ಎದುರಿನ ಕಲ್ಲುಕಟ್ಟಡದಲ್ಲಿ ಕುಳಿತವರ ಹೃದಯವೂ ಕಲ್ಲಾಗಿದೆ. ಎಂಟರಿಂದ ಹತ್ತು ವರ್ಷ ಕಳೆದರೂ ಹೈಕೋರ್ಟ್‌ ಆದೇಶಗಳು ಪಾಲನೆಯಾಗುತ್ತಿಲ್ಲ. ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡ ಬಳಿಕವೂ ಸಮಯ ಕೇಳುವ ಪರಿಪಾಠ ಇದೆ. ಜೈಲಿಗೆ ಕಳಿಸುವ ಎಚ್ಚರಿಕೆ ನೀಡಿದಾಗಲಷ್ಟೇ ಆದೇಶಗಳು ಪಾಲನೆಯಾಗುತ್ತಿವೆ. ಅಧಿಕಾರಿ ವರ್ಗದ ಇಂತಹ ಜವಾಬ್ದಾರಿರಹಿತ ವರ್ತನೆಯನ್ನು ನ್ಯಾಯಾಂಗ ಸಹಿಸಿಕೊಳ್ಳಬಾರದು” ಎಂದು ಅವರು ಹೇಳಿದರು.  

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ ಪಾಟೀಲ ಅವರು “ನ್ಯಾಯಾಧೀಶರಾದವರಿಗೆ ಮಾನವೀಯ ಮೌಲ್ಯ, ಅಂತಃಕರಣ ಇರಬೇಕು. ಆಗ ಮಾತ್ರ ಉತ್ತಮ ನ್ಯಾಯ ಸಿಗಲು ಸಾಧ್ಯ. ನ್ಯಾಯಮೂರ್ತಿಗಳಿಗೂ ಮೇಲೆ ಕಣ್ಗಾವಲು ವ್ಯವಸ್ಥೆ ಇಲ್ಲ. ಆದರೆ ಅವರಿಗೆ ಆತ್ಮಸಾಕ್ಷಿ ಕಾವಲುಗಾರನಾಗಿರಬೇಕು. ಪ್ರಮಾಣವಚನವೇ ಅವರ ಧರ್ಮವಾಗಿರಬೇಕು ಎಂದರು.

“ನ್ಯಾಯಾಧೀಶರುಗಳಿಗೆ ಎರಡು ಜವಾಬ್ದಾರಿಗಳಿರುತ್ತವೆ. ಒಂದು ತನಗಾಗಿನ ಜವಾಬ್ದಾರಿ ಮತ್ತೊಂದು ಸಂಸ್ಥೆಗಾಗಿನ ಜವಾಬ್ದಾರಿ. ನ್ಯಾಯಾಂಗಕ್ಕೆ ಒಳ್ಳೆಯ ಹೆಸರು ಉಳಿಯಬೇಕಾದರೆ ಉತ್ತಮ ನ್ಯಾಯಾಧೀಶರು ಇರಬೇಕು” ಎಂದು ಅವರು ತಿಳಿಸಿದರು.

ಪುಸ್ತಕದ ಕರ್ತೃ  ಹಾಗೂ ನಿವೃತ್ತ ನ್ಯಾಯಮೂರ್ತಿ ಹೆಚ್‌ ಎನ್‌ ನಾಗಮೋಹನ್‌ ದಾಸ್‌ ಅವರು ಮಾತನಾಡಿ “ಶಾಸಕಾಂಗ ಕಾರ್ಯಾಂಗದ ಬಗ್ಗೆ ನಂಬಿಕೆ ಹೊರಟುಹೋಗುತ್ತಿದೆ. ಸಂವಿಧಾನದತ್ತವಾದ ಹಕ್ಕುಗಳನ್ನು ಜಾರಿಗೊಳಿಸಬೇಕಿದೆ. ನ್ಯಾಯಾಂಗ ಸ್ವಾತಂತ್ರ್ಯಕೆಕ ಧಕ್ಕೆ ಬರುವ ಆತಂಕ ಇದ್ದು, ನ್ಯಾಯಾಂಗವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವಂತಹ ಮಾತುಗಳನ್ನು ಶಾಸಕಾಂಗ ಅದರಲ್ಲಿಯೂ ಉಪರಾಷ್ಟ್ರಪತಿ ಅವರೇ ಮಾತನಾಡಿರುವುದು ದುರಂತ” ಎಂದು ಹೇಳಿದರು.

ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ ಪಿ ರಂಗನಾಥ್‌ ಅವರು “ನ್ಯಾಯದಾನ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ದೊರೆಯಬೇಕು. ನ್ಯಾಯಾಂಗ ವ್ಯವಸ್ಥೆಯನ್ನು ಸ್ವತಂತ್ರವಾಗಿ ಉಳಿಸಿಕೊಳ್ಳಬೇಕಿದ್ದು ಇದು ವಕೀಲರಿಂದ ಮಾತ್ರ ಸಾಧ್ಯ. ಈಗಿನ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೂಡ ಅಘೋಷಿತ ತುರ್ತು  ಪರಿಸ್ಥಿತಿ ಇದೆ. ವರ್ಗಾವಣೆ ಕಿರುಕುಳದಿಂದ ನ್ಯಾಯಮೂರ್ತಿಗಳು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡುವ ಪರಿಸ್ಥಿತಿ ಬಂದಿದೆ” ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜನ ಪ್ರಕಾಶನದ ಮುಖ್ಯಸ್ಥರಾದ ಬಿ ರಾಜಶೇಖರ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Kannada Bar & Bench
kannada.barandbench.com