ರೋಡ್‌ ರೇಜ್‌ಗೆ ಕ್ಷಮೆಯೇ ಇಲ್ಲ: ಟೆಕಿ ವಿರುದ್ಧದ ಕೊಲೆ ಯತ್ನ ಪ್ರಕರಣ ರದ್ದತಿಗೆ ಹೈಕೋರ್ಟ್‌ ನಕಾರ

“ಅರ್ಜಿದಾರರು ಸಾಫ್ಟ್‌ವೇರ್‌ ಎಂಜಿನಿಯರ್‌ ಸಾಫ್ಟ್‌ ಆಗಿ ಇರಬೇಕಾಗಿತ್ತು. ಅವರಿಗೆ ತಾಳ್ಮೆ ಇರಲಿಲ್ಲ ಎಂದರೆ ಏನೂ ಮಾಡೋಕೆ ಆಗಲ್ಲ. ಬೆಂಗಳೂರು ಸಂಚಾರ ದಟ್ಟಣೆ ತಾಳ್ಮೆ ಕಲಿಸಲಿದೆ” ಎಂದ ನ್ಯಾಯಾಲಯ.
Accident
Accident
Published on

ನಿರ್ಲಕ್ಷ್ಯದ ಚಾಲನೆಗೆ (ರೋಡ್‌ ರೇಜ್‌) ಕ್ಷಮೆಯೇ ಎಲ್ಲ ಎಂದು ಮೌಖಿಕವಾಗಿ ಹೇಳಿರುವ ಕರ್ನಾಟಕ ಹೈಕೋರ್ಟ್‌ “ಬೆಂಗಳೂರು ಸಂಚಾರ ದಟ್ಟಣೆ ತಾಳ್ಮೆ ಕಲಿಸಲಿದೆ. ಆದರೆ, ನಿಮಗೆ ಅದು ಇರಬೇಕು” ಎಂದು ಸೋಮವಾರ ಮೌಖಿಕವಾಗಿ ಹೇಳಿತು.

ಬೆಂಗಳೂರಿನ ಕೊಡಿಗೆಹಳ್ಳಿಯ ಸುಕೃತ್‌ ಕೇಶವ್‌ ಗೌಡ ಅವರು ತಮ್ಮ ವಿರುದ್ಧದ ಕೊಲೆ ಯತ್ನ ಪ್ರಕರಣ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ತಿರಸ್ಕರಿಸಿತು.

ಅರ್ಜಿದಾರರ ಪರ ವಕೀಲ ಎಚ್‌ ಎಂ ಗೋಪಾಲ್‌ “ಇದು ರೋಡ್‌ ರೇಜ್‌ ಅಪಘಾತ. ಯಾವುದೇ ಹೇಳಿಕೆ ಇಲ್ಲದೇ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಅರ್ಜಿದಾರರಿಗೆ ಯಾವುದೇ ದುರುದ್ದೇಶವಿರಲಿಲ್ಲ” ಎಂದರು.

ಆಗ ಪೀಠವು “ಮೊದಲು ಬಿಎನ್‌ಎಸ್‌ ಸೆಕ್ಷನ್‌ 109 (ಕೊಲೆ ಯತ್ನ) ಇರಲಿಲ್ಲ. ಆಮೇಲೆ ಅನುಮತಿ ಪಡೆದು ಪೊಲೀಸರು ಸರಿಯಾಗಿ ಪ್ರಕರಣ ದಾಖಲಿಸಿದ್ದಾರೆ. ಆರೋಪ ಪಟ್ಟಿ ಸಲ್ಲಿಕೆಯಾದ ಮೇಲೆ ಬನ್ನಿ, ರೋಡ್‌ ರೇಜ್‌ ಪ್ರಕರಣದಲ್ಲಿ ದುರುದ್ದೇಶವೇನು ನೋಡಬೇಕು?” ಎಂದಿತು.

ಅಲ್ಲದೇ, “ಅರ್ಜಿದಾರರು ಸಾಫ್ಟ್‌ವೇರ್‌ ಎಂಜಿನಿಯರ್‌ ಸಾಫ್ಟ್‌ ಆಗಿ ಇರಬೇಕಾಗಿತ್ತು. ಅವರಿಗೆ ತಾಳ್ಮೆ ಇರಲಿಲ್ಲ ಎಂದರೆ ಏನೂ ಮಾಡೋಕೆ ಆಗಲ್ಲ. ಬೆಂಗಳೂರು ಸಂಚಾರ ದಟ್ಟಣೆ ತಾಳ್ಮೆ ಕಲಿಸಲಿದೆ. ಆದರೆ, ನಿಮಗೆ ಅದು ಇರಬೇಕು. ರೋಡ್‌ ರೇಜ್‌ಗೆ ಕ್ಷಮೆಯೇ ಇಲ್ಲ” ಎಂದಿತು.

ಅಂತಿಮವಾಗಿ ಆರೋಪ ಪಟ್ಟಿ ಸಲ್ಲಿಕೆಯಾದ ಮೇಲೆ ಅರ್ಜಿದಾರರು ಮತ್ತೊಮ್ಮೆ ಅದನ್ನು ಪ್ರಶ್ನಿಸಿ ಬರಬಹುದು. ಆ ಸ್ವಾತಂತ್ರ್ಯವನ್ನು ಅರ್ಜಿದಾರರಿಗೆ ಕಾಯ್ದಿರಿಸಿ, ಅರ್ಜಿ ಇತ್ಯರ್ಥಪಡಿಸಲಾಗಿದೆ ಎಂದು ಆದೇಶಿಸಿತು.

ಪ್ರಕರಣದ ಹಿನ್ನೆಲೆ: 2025ರ ಅಕ್ಟೋಬರ್ 26ರಂದು ಅಂಕಿತಾ ಪಾಟೀಲ್‌ ಮತ್ತು ವಿನೇಶ್‌ ದಂಪತಿಯು ಹೋಂಡಾ ಡಿಯೊ ಸ್ಕೂಟರ್‌ನಲ್ಲಿ ಪುತ್ರ ಕಲ್ಪ ಜೈನ್‌ ಕೂರಿಸಿಕೊಂಡು ತಿಂಡ್ಲುವಿನಿಂದ ಇಂದಿರಾನಗರಕ್ಕೆ ಹೊರಟಿದ್ದರು. ಎಂ ಎಸ್‌ ರಾಮಯ್ಯ ಆಸ್ಪತ್ರೆಯ ಸಿಗ್ನಲ್‌ ಬಳಿ ಹಿಂದಿನಿಂದ ಬಂದ ಕೆಂಪು ಬಣ್ಣದ ಟಾಟಾ ಕರ್ವ್‌ನಲ್ಲಿ ಬಂದ ಚಾಲಕ ವೇಗ ಮತ್ತು ಅಜಾಗರೂಕತೆಯಿಂದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದ. ಇದರಿಂದ ಸ್ಕೂಟರ್‌ನಲ್ಲಿದ್ದವರೆಲ್ಲರೂ ಕೆಳಗೆ ಬಿದ್ದು ಚಾಲಕ ವಿನೇಶ್‌ಗೆ ಎಡಭಾಗದ ರಿಬ್ಸ್‌ಗೆ ಪೆಟ್ಟಾಗಿತ್ತು. ಈ ಸಂಬಂಧ ಸದಾಶಿವನಗರ ಸಂಚಾರ ಠಾಣೆಯಲ್ಲಿ ಬಿಎನ್‌ಎಸ್‌ ಸೆಕ್ಷನ್‌ 281,125(ಎ) ಮತ್ತು ಮೋಟಾರು ವಾಹನ ಕಾಯಿದೆ ಸೆಕ್ಷನ್‌ಗಳಾದ 134 (ಎ ಮತ್ತು ಬಿ) ಮತ್ತು 187ರ ಅಡಿ ಪ್ರಕರಣ ದಾಖಲಿಸಲಾಗಿತ್ತು. ಕೃತ್ಯವು ಸದಾಶಿವನಗರ ಠಾಣೆಯ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಸಕ್ಷಮ ನ್ಯಾಯಾಲಯ ಮತ್ತು ಅಧಿಕಾರಿಗಳ ಅನುಮತಿ ಪಡೆದು ಪ್ರಕರಣವನ್ನು ಸದಾಶಿವನಗರ ಸಂಚಾರ ಠಾಣೆಯ ಪೊಲೀಸರು ಸದಾಶಿವನಗರ ಠಾಣೆಗೆ ಪ್ರಕರಣಗೆ ವರ್ಗಾಯಿಸಿದ್ದರು. ಇದನ್ನು ಆಧರಿಸಿ ಸದಾಶಿವನಗರ ಠಾಣೆಯ ಪೊಲೀಸರು ಬಿಎನ್‌ಎಸ್‌ ಸೆಕ್ಷನ್‌ 109(1) ಅಡಿ (ಕೊಲೆ ಯತ್ನ) ಪ್ರಕರಣ ದಾಖಲಿಸಿದ್ದಾರೆ.

Kannada Bar & Bench
kannada.barandbench.com