ಸ್ವಂತದ ವಸತಿ ಪ್ರದೇಶದಲ್ಲಿ ಪ್ರಾರ್ಥನೆ ಸಲ್ಲಿಸಲು ಕಾನೂನು ಅಥವಾ ನಿಯಮದಲ್ಲಿ ನಿಷೇಧವಿಲ್ಲ: ಹೈಕೋರ್ಟ್‌

“ಅರ್ಜಿಯನ್ನು ತಪ್ಪಾದ ಭಾವನೆ ಮತ್ತು ಊಹೆಯಿಂದ ಸಲ್ಲಿಕೆ ಮಾಡಲಾಗಿದೆ. ಮಸ್ಜೀದ್‌ ಇ-ಅಶ್ರಾಫಿತ್‌ ಯಾವುದೇ ಅನುಮತಿ ಪಡೆಯದೇ ಕಟ್ಟಡ ನಿರ್ಮಿಸಿದ್ದರೂ ಅರ್ಜಿದಾರರ ವಾದವು ಸಿಂಧುವಾಗುವುದಿಲ್ಲ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
Muslim man and women
Muslim man and women Image for representative purpose

“ಸ್ವಂತದ ವಸತಿ ಪ್ರದೇಶದಲ್ಲಿ ಪ್ರಾರ್ಥನೆ ಸಲ್ಲಿಸಲು ಯಾವುದೇ ಕಾನೂನು ಅಥವಾ ನಿಯಮದಲ್ಲಿ ನಿಷೇಧ ವಿಧಿಸಲಾಗಿಲ್ಲ” ಎಂದು ಗುರುವಾರ ಕರ್ನಾಟಕ ಹೈಕೋರ್ಟ್‌ ಹೇಳಿದ್ದು, “ಊಹೆ, ಪೂರ್ವಗ್ರಹಿಕೆ ಹಾಗೂ ಅಂದಾಜಿನ ಮೇಲೆ ಅರ್ಜಿ ಸಲ್ಲಿಸಲಾಗಿದೆ” ಎಂದು ಹೇಳಿದೆ. 

ಮಸ್ಜೀದ್‌ ಇ-ಅಶ್ರಾಫಿತ್‌ನ ವಸತಿ ಪ್ರದೇಶವನ್ನು ಪ್ರಾರ್ಥನೆಗೆ ಬಳಸುವ ಮೂಲಕ ಅಡ್ಡಿ ಉಂಟು ಮಾಡದಂತೆ ಹಾಗೂ ಕಟ್ಟಡ ಬೈಲಾ ಮತ್ತು ವಲಯ ಬೈಲಾ ಉಲ್ಲಂಘಿಸಿರುವುದರಿಂದ ಆಕ್ಷೇಪಾರ್ಹ ಕಟ್ಟಡದ ಅನುಮತಿ ರದ್ದುಪಡಿಸಲು ಬಿಬಿಎಂಪಿಗೆ ಆದೇಶಿಸಬೇಕು ಎಂದು ಕೋರಿ ಬೆಂಗಳೂರಿನ ಎಚ್‌ಬಿಆರ್‌ ಲೇಔಟ್‌ನ ನಿವಾಸಿಗಳಾದ ಸ್ಯಾಮ್‌ ಪಿ. ಫಿಲಿಪ್‌ ಮತ್ತು ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್‌ ಕಮಲ್‌ ಅವರ ನೇತೃತ್ವದ ವಿಭಾಗೀಯ ಪೀಠವು ವಜಾ ಮಾಡಿದೆ.

“ಅರ್ಜಿಯನ್ನು ಪೂರ್ವಗ್ರಹಿಕೆ ಮತ್ತು ಊಹೆಯಿಂದ ಸಲ್ಲಿಕೆ ಮಾಡಲಾಗಿದೆ. ಮಸ್ಜೀದ್‌ ಇ-ಅಶ್ರಾಫಿತ್‌ ಯಾವುದೇ ಅನುಮತಿ ಪಡೆಯದೇ ಕಟ್ಟಡ ನಿರ್ಮಿಸಿದ್ದರೂ ಅರ್ಜಿದಾರರ ವಾದವು ಸಿಂಧುವಾಗುವುದಿಲ್ಲ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

"ಬಿಬಿಎಂಪಿಯಿಂದ ಅನುಮತಿ ಪಡೆದು ಮಸ್ಜೀದ್‌ ಇ-ಅಶ್ರಾಫಿತ್‌ ಹೊಸ ಕಟ್ಟಡ ನಿರ್ಮಾಣ ಮಾಡುತ್ತಿದೆ. ಬಡ ಮಕ್ಕಳಿಗೆ ಶಿಕ್ಷಣ ನೀಡಲು ಮದರಸಾ ನಿರ್ಮಿಸಲಾಗುತ್ತಿದ್ದು, ಅಲ್ಲಿನ ಸಭಾಂಗಣವನ್ನು ಪ್ರಾರ್ಥನೆಗೆ ಬಳಕೆ ಮಾಡಲಾಗುತ್ತಿದೆ. ಬಿಬಿಎಂಪಿ ಅನುಮತಿ ನೀಡಿದ್ದರೂ ವಸತಿ ಪ್ರದೇಶವನ್ನು ಪ್ರಾರ್ಥನಾ ಸಭಾಂಗಣಕ್ಕೆ ಬಳಸುವಂತಿಲ್ಲ. ಕೆಲವು ಸಂದರ್ಭದಲ್ಲಿ ಸಾಕಷ್ಟು ಮಂದಿ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವುದರಿಂದ ಸ್ಥಳೀಯ ನಿವಾಸಿಗಳಿಗೆ ಸಮಸ್ಯೆಯಾಗುತ್ತದೆ ಎಂಬ ಆತಂಕವನ್ನು ಅರ್ಜಿದಾರರು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮಸ್ಜೀದ್‌ ಇ-ಅಶ್ರಾಫಿತ್‌ಗೆ ಬಿಬಿಎಂಪಿಯು ನೋಟಿಸ್‌ ಜಾರಿಗೊಳಿಸಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಪ್ರಕರಣದ ವಿವರವನ್ನು ದಾಖಲಿಸಿದೆ.

“ವಸತಿ ಪ್ರದೇಶವನ್ನು ಜಾಗದ ಮಾಲೀಕರು ಅಥವಾ ಅತಿಥಿಗಳು ಪ್ರಾರ್ಥನಾ ಸ್ಥಳವನ್ನಾಗಿ ಬಳಕೆ ಮಾಡಲು ನಿಷೇಧವಿದೆಯೇ ಎಂದು ಹಲವು ಬಾರಿ ನ್ಯಾಯಾಲಯವು ಅರ್ಜಿದಾರರ ವಕೀಲರಿಗೆ ಪ್ರಶ್ನಿಸಿದೆ. ಅಲ್ಲದೇ, ಇಷ್ಟೇ ಮಂದಿ ಭಾಗವಹಿಸಬೇಕು ಎಂಬುದಕ್ಕೆ ನಿಷೇಧವಿದೆಯೇ” ಎಂದೂ ನ್ಯಾಯಾಲಯ ಕೇಳಿದೆ.

“ಈ ಸಂಬಂಧ ಅರ್ಜಿದಾರರು ನಿರ್ದಿಷ್ಟ ನಿಷೇಧದ ಬಗ್ಗೆ ಮಾಹಿತಿ ನೀಡಿಲ್ಲ. ಆದರೆ, ವಸತಿ ಪ್ರದೇಶವನ್ನು ಪ್ರಾರ್ಥನೆ ಸಲ್ಲಿಸುವ ಮಸೀದಿಯನ್ನಾಗಿ ಮಾಡಲಾಗಿದೆ. ಇದು ನಿಯಮದ ಉಲ್ಲಂಘನೆ. ಅಪಾರ ಪ್ರಮಾಣದಲ್ಲಿ ಜನರು ಪ್ರಾರ್ಥನೆಯಲ್ಲಿ ಭಾಗಿಯಾಗುವುದರಿಂದ ಅಡ್ಡಿಯಾಗುತ್ತದೆ ಎಂಬ ಆತಂಕವನ್ನು ಒಳಗೊಂಡ ಮತ್ತದೇ ವಾದವನ್ನು ಪುನರಾವರ್ತಿಸಿದ್ದಾರೆ. ಅರ್ಜಿದಾರರ ವಾದದಲ್ಲಿ ಯಾವುದೇ ಕಾರಣ ಅಥವಾ ತರ್ಕ ಕಾಣುತ್ತಿಲ್ಲ” ಎಂದು ಪೀಠವು ಅಭಿಪ್ರಾಯಪಟ್ಟಿದೆ.

“ವಸತಿ ಪ್ರದೇಶದ ಮಾಲೀಕರು ತಮ್ಮ ವಸತಿ ಸ್ಥಳವನ್ನು ಪ್ರಾರ್ಥನೆ ಸಲ್ಲಿಸುವುದಕ್ಕೆ ಬಳಕೆ ಮಾಡಲು ನಿಷೇಧಿಸಲಾಗಿರುವ ನಿಯಮ ಅಥವಾ ಕಾನೂನನ್ನು ತೋರಿಸುವಂತೆ ಅರ್ಜಿದಾರರಿಗೆ ಕೇಳಿದರು ಅವರು ಅದನ್ನು ತೋರಿಸಲು ವಿಫಲರಾಗಿದ್ದಾರೆ” ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.

ಬಿಬಿಎಂಪಿಯಿಂದ ಅನುಮತಿ ಪಡೆದಿರುವ ಪ್ರಾರ್ಥನೆ ಮಾಡುವ ಸ್ಥಳವನ್ನು ವಸತಿ ಶಾಲೆಯನ್ನಾಗಿ ಬಳಕೆ ಮಾಡಲಾಗುತ್ತಿದ್ದು, ಅಲ್ಲಿ ಮಕ್ಕಳು ಮತ್ತು ಅಲ್ಲಿಗೆ ಬರುವ ಅತಿಥಿಗಳು ಪ್ರಾರ್ಥನೆ ಸಲ್ಲಿಸುವುದರ ಬಗೆಗಿನ ಅರ್ಜಿದಾರರ ನಡೆಯು ಊಹೆ ಮತ್ತು ತಪ್ಪು ಕಲ್ಪನೆಯಾಗಿದೆ. ಪ್ರಾರ್ಥನೆ ಸಲ್ಲಿಸಲು ಬಂದವರು ಯಾವಾಗಲಾದರೂ ಕೆಟ್ಟದಾಗಿ ನಡೆದುಕೊಂಡಿದ್ದಾರೆಯೇ ಎಂಬುದಕ್ಕೆ ಅರ್ಜಿದಾರರು ಇಲ್ಲ ಎಂದೇ ತಿಳಿಸಿದ್ದಾರೆ. ಈ ಎಲ್ಲಾ ವಿಚಾರಗಳ ಹಿನ್ನೆಲೆಯಲ್ಲಿ ಅರ್ಜಿಯನ್ನು ಊಹೆ, ಪೂರ್ವಗ್ರಹಿಕೆ ಹಾಗೂ ಅಂದಾಜಿನಿಂದ ಸಲ್ಲಿಸಲಾಗಿದೆ” ಎಂದಿರುವ ನ್ಯಾಯಾಲಯವು ಅರ್ಜಿ ವಜಾ ಮಾಡಿದೆ.

Related Stories

No stories found.
Kannada Bar & Bench
kannada.barandbench.com