ವೇಶ್ಯಾವಾಟಿಕೆ ಸಂತ್ರಸ್ತೆಯನ್ನು ವಿಚಾರಣೆಗೆ ಗುರಿಪಡಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗ: ಹೈಕೋರ್ಟ್‌

ಸಂತ್ರಸ್ತೆಯನ್ನು ಶಿಕ್ಷಿಸಬೇಕು ಎಂದು ಸೆಕ್ಷನ್‌ 5ರಲ್ಲಿ ಎಲ್ಲಿಯೂ ಹೇಳಿಲ್ಲ. ಹೀಗಾಗಿ, ಆಕೆಯ ವಿರುದ್ಧ ಮುಂದಿನ ವಿಚಾರಣೆಗೆ ಅನುಮತಿ ನೀಡುವುದು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗಲಿದೆ ಮತ್ತು ಅನ್ಯಾಯಕ್ಕೆ ಕಾರಣವಾಗಲಿದೆ ಎಂದಿರುವ ನ್ಯಾಯಾಲಯ.
Justice M Nagaprasanna
Justice M Nagaprasanna
Published on

“ವೇಶ್ಯಾವಾಟಿಕೆ ಸಂತ್ರಸ್ತೆಯನ್ನು ವಿಚಾರಣೆಗೆ ಗುರಿಪಡಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗ ಮತ್ತು ಅನ್ಯಾಯಕ್ಕೆ ಕಾರಣವಾಗುತ್ತದೆ” ಎಂದು ಕರ್ನಾಟಕ ಹೈಕೋರ್ಟ್‌ ಪ್ರಕರಣವೊಂದರಲ್ಲಿ ಈಚೆಗೆ ಸ್ಪಷ್ಟಪಡಿಸಿದೆ.

ವೇಶ್ಯಾವಾಟಿಕೆ ಆರೋಪಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ವಿಚಾರಣಾಧೀನ ನ್ಯಾಯಾಲಯದ ನ್ಯಾಯಿಕ ಪ್ರಕ್ರಿಯೆ ರದ್ದತಿ ಕೋರಿ ಸಂತ್ರಸ್ತೆ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ‍ಪುರಸ್ಕರಿಸಿದೆ.

“ವೇಶ್ಯಾವಾಟಿಕೆ ಸಂತ್ರಸ್ತೆಯನ್ನು ಶಿಕ್ಷಿಸಬೇಕು ಎಂದು ಮಾನವ ಕಳ್ಳಸಾಗಣೆ ಕಾಯಿದೆ ಅಡಿ ಎಲ್ಲಿಯೂ ಹೇಳಿಲ್ಲ. ಹೀಗಾಗಿ, ವೇಶ್ಯಾವಾಟಿಕೆ ಸಂತ್ರಸ್ತೆಯನ್ನು ವಿಚಾರಣೆಗೆ ಗುರಿಪಡಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ” ಎಂಬ ಬಾಂಬೆ ಹೈಕೋರ್ಟ್‌ ಆದೇಶವನ್ನು ಉಲ್ಲೇಖಿಸಿರುವ ಪೀಠವು “ವೇಶ್ಯಾವಾಟಿಕೆಯ ಸಂತ್ರಸ್ತೆಯನ್ನು ಶಿಕ್ಷಿಸಲು ಯಾವುದೇ ಕಾನೂನು ಇಲ್ಲ” ಎಂದು ಹೇಳಿದೆ.

“ವೇಶ್ಯಾವಾಟಿಕೆ ಆರೋಪ ಸಂಬಂಧ ಸಂತ್ರಸ್ತೆಯ ವಿರುದ್ಧ ಮಾನವ ಕಳ್ಳ ಸಾಗಣೆ ತಡೆ ಕಾಯಿದೆ-1956ರ ಸೆಕ್ಷನ್‌ 5ರ ಅಡಿಯಲ್ಲಿ ವಿಚಾರಣಾಧೀನ ನ್ಯಾಯಾಲಯ ಸಂಜ್ಞೇ ಅಪರಾಧ ಪರಿಗಣಿಸಿದೆ. ಆದರೆ, ಸಂತ್ರಸ್ತ ಮಹಿಳೆಯನ್ನು ಶಿಕ್ಷಿಸಬೇಕು ಎಂದು ಸೆಕ್ಷನ್‌ 5ರಲ್ಲಿ ಎಲ್ಲಿಯೂ ಹೇಳಿಲ್ಲ. ಹೀಗಾಗಿ, ಆಕೆಯ ವಿರುದ್ಧ ಮುಂದಿನ ವಿಚಾರಣೆಗೆ ಅನುಮತಿ ನೀಡುವುದು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗಲಿದೆ ಮತ್ತು ಅನ್ಯಾಯಕ್ಕೆ ಕಾರಣವಾಗಲಿದೆ” ಎಂದು ಪೀಠ ತನ್ನ ಆದೇಶದಲ್ಲಿ ವಿವರಿಸಿದೆ.

ಪ್ರಕರಣದ ಹಿನ್ನೆಲೆ: ವೇಶ್ಯಾವಾಟಿಕೆಯಲ್ಲಿ ತೊಡಗಿಸಲು ಕೆಲ ಹುಡುಗಿಯರನ್ನು ರಾಜ್ಯದಿಂದ ಗೋವಾಕ್ಕೆ ವಾಹನದಲ್ಲಿ ಅಕ್ರಮವಾಗಿ ಕರೆದೊಯ್ಯುತ್ತಿದ್ದ ಮಾಹಿತಿ ಆಧರಿಸಿ 2013ರ ಜನವರಿ 13ರಂದು ರಾಜ್ಯದ ತಾಲ್ಲೂಕು ಕೇಂದ್ರವೊಂದರ ಠಾಣೆಯ ಪೊಲೀಸರು ವಾಹನವನ್ನು ತಡೆದು ಪರಿಶೀಲಿಸಿದ್ದರು.

ಈ ವೇಳೆ ಅರ್ಜಿದಾರ ಸಂತ್ರಸ್ತೆ ಸೇರಿದಂತೆ ಇತರೆ ಹುಡುಗಿಯರನ್ನು ತಲಾ ₹ 10 ಸಾವಿರ ಪಾವತಿಸಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಲು ಕರೆದುಕೊಂಡು ಹೋಗುತ್ತಿರುವುದು ತಿಳಿದು ಬಂದಿತ್ತು. ಪೊಲೀಸರು ತನಿಖೆ ಪೂರ್ಣಗೊಳಿಸಿ ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಅರ್ಜಿದಾರೆಯನ್ನು 8ನೇ ಆರೋಪಿಯನ್ನಾಗಿ ಮಾಡಲಾಗಿತ್ತು.

ಅರ್ಜಿದಾರೆಯ ಪರವಾಗಿ ವಕೀಲ ಕುಮಾರ, ಪ್ರಾಸಿಕ್ಯೂಷನ್‌ ಪರವಾಗಿ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ ಎನ್‌ ಜಗದೀಶ್‌ ವಾದಿಸಿದರು.

Kannada Bar & Bench
kannada.barandbench.com