ಮಗುವಿನ ಆರೈಕೆ ರಜೆಯನ್ನು 45 ದಿನಗಳಿಗೆ ಮಾತ್ರವೇ ಸೀಮಿತಗೊಳಿಸಬೇಕು ಎಂಬ ನಿಯಮವಿಲ್ಲ: ಹೈಕೋರ್ಟ್‌

ರಜೆಯನ್ನು ತಿರಸ್ಕರಿಸಿರುವ ಹಕ್ಕು ಉದ್ಯೋಗದಾತರಿಗೆ ಇದೆಯಾದರೂ, ಅದು ಸಂದರ್ಭವನ್ನು ಅವಲಂಬಿಸಿರುತ್ತದೆ. ನೀವೊಬ್ಬ ಮಾದರಿ ಉದ್ಯೋಗದಾತನಾಗಿ ಕಾರ್ಯ ನಿರ್ವಹಿಸಬೇಕು. ಮಹಿಳೆಯರು ಮತ್ತು ಅವರ ಹಕ್ಕುಗಳನ್ನು ಗೌರವಿಸಬೇಕು ಎಂದಿರುವ ಹೈಕೋರ್ಟ್.‌
Justice Krishna Dixit & Justice C M Joshi
Justice Krishna Dixit & Justice C M Joshi
Published on

ʼಯತ್ರ ನಾರ್ಯಸ್ತು ಪೂಜ್ಯಂತೆ, ರಮಂತೆ ತತ್ರ ದೇವತಾಃʼ (ಎಲ್ಲಿ ನಾರಿಯರನ್ನು ಪೂಜಿಸಲಾಗುವುದೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ) ಎಂಬ ಸೂಕ್ತಿಯನ್ನು ಪ್ರಕರಣವೊಂದರ ತೀರ್ಪಿನಲ್ಲಿ ಉಲ್ಲೇಖಿಸಿರುವ ಕರ್ನಾಟಕ ಹೈಕೋರ್ಟ್‌, 'ಕೇಂದ್ರ ನಾಗರಿಕ ಸೇವಾ ನಿಯಮಗಳ ಪ್ರಕಾರ ಸಿಸಿಎಲ್ (ಮಗುವಿನ ಆರೈಕೆ ರಜೆ) ಅನ್ನು ಕೇವಲ 45 ದಿನಗಳಿಗೆ ಮಾತ್ರವೇ ಸೀಮಿತಗೊಳಿಸಬೇಕು ಎಂಬ ನಿಯಮವಿಲ್ಲ' ಎಂದು ಈಚೆಗೆ ಸ್ಪಷ್ಟಪಡಿಸಿದೆ.

ಅಂತೆಯೇ, ಮಗು ಆರೈಕೆಗಾಗಿ ಶುಶ್ರೂಷಕಿಯೊಬ್ಬರಿಗೆ ಹೆಚ್ಚುವರಿಯಾಗಿ 120 ದಿನ ರಜೆ ಮಂಜೂರು ಮಾಡುವಂತೆ ರಾಷ್ಟ್ರೀಯ ಮಾನಸಿಕ ಮತ್ತು ನರವಿಜ್ಞಾನ ಸಂಸ್ಥೆಗೆ (ನಿಮ್ಹಾನ್ಸ್) ನಿರ್ದೇಶಿಸಿದ್ದ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ಆದೇಶವನ್ನು ನ್ಯಾಯಮೂರ್ತಿಗಳಾದ ಕೃಷ್ಣ ಎಸ್.ದೀಕ್ಷಿತ್ ಮತ್ತು ಸಿ ಎಂ ಜೋಶಿ ಅವರ ನೇತೃತ್ವದ ವಿಭಾಗೀಯ ಪೀಠ ಎತ್ತಿಹಿಡಿದಿದೆ.

ನಿಮ್ಹಾನ್ಸ್‌ ಅರ್ಜಿ ವಜಾಗೊಳಿಸಿರುವ ಪೀಠವು “ಅಂದಾಜು 700 ಶುಶ್ರೂಷಕರು ಕೆಲಸ ಮಾಡುವಂತಹ ನಿಮ್ಮ ಸಂಸ್ಥೆಯಲ್ಲಿ ಒಬ್ಬರಿಗೆ 120 ದಿನಗಳ ಸಿಸಿಎಲ್ ರಜೆ ಮಂಜೂರು ಮಾಡಿದರೆ ಯಾವುದೇ ಪ್ರತಿಕೂಲ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ. ರಜೆಯನ್ನು ತಿರಸ್ಕರಿಸಿರುವ ಹಕ್ಕು ಉದ್ಯೋಗದಾತರಿಗೆ ಇದೆಯಾದರೂ, ಅದು ಸಂದರ್ಭವನ್ನು ಅವಲಂಬಿಸಿರುತ್ತದೆ. ನೀವೊಬ್ಬ ಮಾದರಿ ಉದ್ಯೋಗದಾತನಾಗಿ ಕಾರ್ಯ ನಿರ್ವಹಿಸಬೇಕು. ಮಹಿಳೆಯರು ಮತ್ತು ಅವರ ಹಕ್ಕುಗಳನ್ನು ಗೌರವಿಸಬೇಕು” ಎಂದು ನಿಮ್ಹಾನ್ಸ್‌ಗೆ ಕಿವಿಮಾತು ಹೇಳಿದೆ.

“ತುರ್ತು ನಿಗಾ ಘಟಕದಲ್ಲಿ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕಿ ಕೆ ಅನಿತಾ ಜೋಸೆಫ್ ಅವರಿಗೆ 120 ದಿನ ಹೆಚ್ಚುವರಿ ಸಿಸಿಎಲ್‌ ರಜೆ ಮಂಜೂರು ಮಾಡಿದ್ದ ಸಿಎಟಿ ಆದೇಶವನ್ನು ರದ್ದುಪಡಿಸಬೇಕು” ಎಂದು ಕೋರಿ ನಿಮ್ಹಾನ್ಸ್ ಹೈಕೋರ್ಟ್‌ ಮೆಟ್ಟಿಲೇರಿತ್ತು.

Kannada Bar & Bench
kannada.barandbench.com