ಸನಾತನ ಧರ್ಮ ಹೇಳಿಕೆ: ಉದಯನಿಧಿ ಸ್ಟಾಲಿನ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಿಜೆಐಗೆ ನಿವೃತ್ತ ನ್ಯಾಯಮೂರ್ತಿಗಳ ಪತ್ರ

ಉದಯನಿಧಿ ಅವರ ಹೇಳಿಕೆ ಸಾಮಾನ್ಯ ಭಾರತೀಯ ನಾಗರಿಕರಿಗೆ, ಅದರಲ್ಲಿಯೂ ಸನಾತನ ಧರ್ಮದಲ್ಲಿ ನಂಬಿಕೆ ಇಟ್ಟವರಿಗೆ ತಲ್ಲಣ ಉಂಟು ಮಾಡುತ್ತದೆ ಎಂದು 14 ಮಂದಿ ನಿವೃತ್ತ ನ್ಯಾಯಮೂರ್ತಿಗಳೂ ಸೇರಿದಂತೆ 262 ಮಂದಿಯ ಸಹಿ ಇರುವ ಪತ್ರದಲ್ಲಿ ಹೇಳಲಾಗಿದೆ.
Udhayanidhi Stalin
Udhayanidhi Stalin Facebook

ಸನಾತನ ಧರ್ಮದ ಕುರಿತು ಹೇಳಿಕೆ ನೀಡಿರುವ ತಮಿಳುನಾಡು ಸಚಿವ, ನಟ ಉದಯನಿಧಿ ಸ್ಟಾಲಿನ್ ವಿರುದ್ಧ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಳ್ಳುವಂತೆ ಕೋರಿ 14 ಮಂದಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು ಸೇರಿದಂತೆ ವಿವಿಧ ವಲಯಗಳಿಗೆ ಸೇರಿದ 262 ಗಣ್ಯರು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ  ಚಂದ್ರಚೂಡ್ ಅವರಿಗೆ ಪತ್ರ ಬರೆದಿದ್ದಾರೆ.

ಉದಯನಿಧಿ ಅವರ ಹೇಳಿಕೆ ಸಾಮಾನ್ಯ ಭಾರತೀಯ ನಾಗರಿಕರಿಗೆ ಅದರಲ್ಲಿಯೂ ಸನಾತನ ಧರ್ಮದಲ್ಲಿ ನಂಬಿಕೆ ಇರಿಸಿಕೊಂಡವರಿಗೆ ತಲ್ಲಣ ಉಂಟು ಮಾಡುತ್ತದೆ ಎಂದು ಪತ್ರದಲ್ಲಿ ಹೇಳಲಾದೆ. ಅವರ ಮಾತುಗಳು ಕೋಮು ಸೌಹಾರ್ದಕ್ಕೆ ಧಕ್ಕೆ ತರಬಹುದು. ಜೊತೆಗೆ ಮತೀಯ ಹಿಂಸಾಚಾರಕ್ಕೂ ಕುಮ್ಮಕ್ಕು ನೀಡಬಹುದು ಎಂದು ಪತ್ರ ಕಳವಳ ವ್ಯಕ್ತಪಡಿಸಿದೆ.  

ಸಹಿ ಹಾಕಿದ ನಿವೃತ್ತ ನ್ಯಾಯಮೂರ್ತಿಗಳ ವಿವರಗಳು ಇಂತಿವೆ:

ತೆಲಂಗಾಣ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ  ನ್ಯಾ. ಕೆ ಶ್ರೀಧರ್ ರಾವ್

ಗುಜರಾತ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮತ್ತು ಗುಜರಾತ್‌ ಲೋಕಾಯುಕ್ತ ಎಸ್‌ ಎಂ ಸೋನಿ

ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಸ್‌ ಎನ್ ಧಿಂಗ್ರಾ

ಜಾರ್ಖಂಡ್ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಆರ್ ಕೆ ಮೆರಾಥಿಯಾ

ರಾಜಸ್ತಾನ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಆರ್ ಎಸ್ ರಾಥೋಡ್,

ದೆಹಲಿ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಂ ಸಿ ಗರ್ಗ್,

ಅಲಹಾಬಾದ್ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಡಿ ಕೆ ಅರೋರಾ,

ಅಲಾಹಾಬಾದ್ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನ್ಯಾ. ಪ್ರತ್ಯೂಷ್ ಕುಮಾರ್

ಅಲಹಾಬಾದ್ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಸ್ ಎನ್ ಶ್ರೀವಾಸ್ತವ್

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ  ಕರಮ್ ಚಂದ್ ಪುರಿ

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಸ್ ಎನ್ ಅಗರ್ವಾಲ್

ಮಧ್ಯಪ್ರದೇಶ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಡಿ ಕೆ ಪಲಿವಾಲ್

ಉತ್ತರಾಖಂಡ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಲೋಕಪಾಲ್ ಸಿಂಗ್

ಸಿಕ್ಕಿಂ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನರೇಂದ್ರ ಕುಮಾರ್ ಜೈನ್

ಉಳಿದಂತೆ ಸಹಿ ಮಾಡಿರುವವರಲ್ಲಿ 20  ಮಂದಿ ರಾಯಭಾರಿಗಳನ್ನೂ ಒಳಗೊಂಡಂತೆ 130 ನಿವೃತ್ತ ಅಧಿಕಾರಿಗಳು ಹಾಗೂ 118 ಸಶಸ್ತ್ರ ಪಡೆ ಅಧಿಕಾರಿಗಳು ಸೇರಿದ್ದಾರೆ.

ಈಚೆಗೆ ಪತ್ರಿಕಾಗೋಷ್ಠಿಯೊಂದರಲ್ಲಿ ಡಿಎಂಕೆ ನಾಯಕ ಉದಯನಿಧಿ ಅವರು ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕೆಂದು ಹೇಳಿದ್ದರು. “ಕೆಲ ವಿಚಾರಗಳನ್ನು ವಿರೋಧಿಸಬಾರದು ಅವುಗಳನ್ನು ನಿರ್ಮೂಲನೆ ಮಾಡಬೇಕು. ನಾವು ಡೆಂಘಿ, ಸೊಳ್ಳೆ, ಮಲೇರಿಯಾ ಇಲ್ಲವೇ ಕೊರೊನಾವನ್ನು ವಿರೋಧಿಸುತ್ತಾ ಇರಲಾಗದು. ಅವುಗಳನ್ನು ನಿರ್ಮೂಲನೆ ಮಾಡಬೇಕು. ಅದೇ ರೀತಿ ವಿರೋಧಿಸುವ ಬದಲು ಸನಾತನವನ್ನು (ಸನಾತನ ಧರ್ಮ) ನಾವು ತೊಡೆದುಹಾಕಬೇಕಿದೆ” ಎಂದು ಅವರು ನುಡಿದಿದ್ದರು. ಸನಾತನ ಧರ್ಮ ಮಹಿಳೆಯರನ್ನು ಗುಲಾಮರನ್ನಾಗಿ ಮಾಡಿತ್ತು ಮತ್ತು ಅವರು ಮನೆಯಿಂದ ಹೊರಬರಲು ಅನುಮತಿಸುತ್ತಿರಲಿಲ್ಲ ಎಂದು ಅವರು ಟೀಕಿಸಿದ್ದು ಚರ್ಚೆಗೆ ಗ್ರ್ರಾಸವಾಗಿತ್ತು.  

ಶಹೀನ್ ಅಬ್ದುಲ್ಲಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ವಿವಿಧ ಧಾರ್ಮಿಕ ಸಮುದಾಯಗಳು ಸೌಹಾರ್ದತೆಯಿಂದ ಬದುಕಲು ಸಾಧ್ಯವಾಗದ ಹೊರತು ಭ್ರಾತೃತ್ವ ಸಾಕಾರವಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ದ್ವೇಷಭಾಷಣಗಳ ಕುರಿತು ಕೂಡ ಕಳವಳ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್‌ ಸ್ವಯಂ ಪ್ರೇರಿತ ಕ್ರಮ ಕೈಗೊಳ್ಳುವಂತೆ ಸರ್ಕಾರ ಮತ್ತು ಪೊಲೀಸರಿಗೆ ನಿರ್ದೇಶಿಸಿತ್ತು ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಅಲ್ಲದೆ, ಸನಾತನ ಧರ್ಮದ ಮಹತ್ವ ಮತ್ತು ಭಾರತದಲ್ಲಿ ಹಿಂದೂಗಳು ಅದಕ್ಕೆ ನೀಡುವ ಆದ್ಯತೆಯನ್ನು ಪತ್ರ ಎತ್ತಿ ತೋರಿಸಿದೆ. ಆದರೆ ಉದಯನಿಧಿ ಈ ನಂಬಿಕೆಗಳ ವಿರುದ್ಧ ದ್ವೇಷ ಭಾಷಣ ಮಾಡಿದ್ದು ಮಾತ್ರವಲ್ಲದೆ ಕ್ಷಮೆಯಾಚಿಸಲು ನಿರಾಕರಿಸಿದ್ದಾರೆ. ಜೊತೆಗೆ  ಇಂತಹ ಹೇಳಿಕೆಗಳನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ. ತಮಿಳುನಾಡು ಸರ್ಕಾರ ಉದಯನಿಧಿ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಅವರನ್ನು ಸಮರ್ಥಿಸಿಕೊಳ್ಳುತ್ತಿದೆ ಎಂದು ಪತ್ರದಲ್ಲಿ ದೂರಲಾಗಿದೆ.

ಸಾರ್ವಜನಿಕ ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ನಿಯಂತ್ರಿಸಲು ಮತ್ತು ದ್ವೇಷ ಭಾಷಣ ತಡೆಯಲು ನಿರ್ಣಾಯಕ ಕ್ರಮ ಕೈಗೊಳ್ಳಬೇಕು ಎಂದು ಸಹಿ ಹಾಕಿರುವವರು ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಿದ್ದಾರೆ.

[ಪತ್ರವನ್ನು ಇಲ್ಲಿ ಓದಿ]

Attachment
PDF
Letter_to_CJI.pdf
Preview

Related Stories

No stories found.
Kannada Bar & Bench
kannada.barandbench.com