ದ್ವೇಷ ಭಾಷಣದ ಆರೋಪ: ಬಿಜೆಪಿ ಸಂಸದ ರಾಘವೇಂದ್ರ ವಿರುದ್ಧದ ಎಫ್‌ಐಆರ್‌ಗೆ ತಡೆ

ಚಿತ್ರದುರ್ಗದ ಸಿದ್ದೇಶ್ವರ ಭೋವಿ ಸಮಾಜ ಗುರುಪೀಠದಲ್ಲಿ 2024ರ ಮಾರ್ಚ್‌ 23ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ನಡೆದಿದ್ದ ಸಭೆಗೆ ಆಯೋಗದಿಂದ ಸಂಸದ ರಾಘವೇಂದ್ರ ಅನುಮತಿ ಪಡೆದಿರಲಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪ.
BJP MP B Y Raghavendra and Karnataka HC
BJP MP B Y Raghavendra and Karnataka HC
Published on

ಚಿತ್ರದುರ್ಗದ ಭೋವಿ ಮಠದಲ್ಲಿ ರಾಜಕೀಯ ಭಾಷಣ ಮಾಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ಶಿವಮೊಗ್ಗದ ಬಿಜೆಪಿ ಸಂಸದ ಬಿ ವೈ ರಾಘವೇಂದ್ರ ವಿರುದ್ಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಮಂಗಳವಾರ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಿಸಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಬಿ ವೈ ರಾಘವೇಂದ್ರ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು “ಅರ್ಜಿದಾರರ ವಿರುದ್ಧದ ವಾದ ತಪ್ಪಾಗಿದೆ ಮತ್ತು ತಪ್ಪಾದ ಸೆಕ್ಷನ್‌ಗಳನ್ನು ಅನ್ವಯಿಸಲಾಗಿದೆ. ಸಂತ ವಿವೇಕಾನಂದ ಅವರ ಮಾತುಗಳನ್ನು ಉಲ್ಲೇಖಿಸಿ ಮಾತನಾಡಿದ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೀಗಾಗಿ, ಕ್ರಿಮಿನಲ್ ಪ್ರಕ್ರಿಯೆ ಮುಂದುವರಿಸಿದರೆ ಕಾನೂನಿಗೆ ವಿರುದ್ಧ ನಡೆದಂತಾಗುತ್ತದೆ. ಈ ಕಾರಣದಿಂದ ತಮ್ಮ ವಿರುದ್ಧ ಎಫ್‌ಐಆರ್ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳನ್ನು ರದ್ದುಗೊಳಿಸಬೇಕು. ಅರ್ಜಿ ಇತ್ಯರ್ಥವಾಗುವವರೆಗೆ ಎಫ್‌ಐಆರ್‌ಗೆ ಮಧ್ಯಂತರ ತಡೆ ನೀಡಬೇಕು” ಎಂದು ಮನವಿ ಮಾಡಿದರು.

ಕೆಲ ಕಾಲ ಅರ್ಜಿ ಆಲಿಸಿದ ಪೀಠವು ಎಫ್‌ಐಆರ್‌ಗೆ ತಡೆ ನೀಡಿ ಆದೇಶಿಸಿತು. ಅಲ್ಲದೆ, ಪ್ರಕರಣ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಠಾಣಾ ಪೊಲೀಸರು ಮತ್ತು ದೂರುದಾರರಾದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಸಂಚಾರಿ ವಿಚಕ್ಷಣಾ ದಳದ ಅಧಿಕಾರಿ ಪಿ.ಅವಿನಾಶ್ ಅವರಿಗೆ ಆಕ್ಷೇಪಣೆ ಸಲ್ಲಿಸುವಂತೆ ನೋಟಿಸ್ ಜಾರಿಗೊಳಿಸಿತು.

ಅಂತಿಮವಾಗಿ ಪೀಠವು ಹಿರಿಯ ವಕೀಲ ನಾಗೇಶ್‌ ಅವರನ್ನು ಕುರಿತು “ನಿಮ್ಮ ಅರ್ಜಿದಾರರಿಗೆ ಎಚ್ಚರಿಕೆಯಿಂದ ಮಾತನಾಡಲು ಸಲಹೆ ಮಾಡಿ” ಎಂದಿತು. ಇದಕ್ಕೆ ಸಹಮತ ವ್ಯಕ್ತಪಡಿಸಿದ ನಾಗೇಶ್‌ ಅವರು “ಅರ್ಜಿದಾರರು ನಾಲಿಗೆಯ ಮೇಲೆ ಹಿಡಿತ ಇಟ್ಟುಕೊಳ್ಳುವುದು ಅಗತ್ಯವಾಗಿದೆ” ಎಂದರು.

ಪ್ರಕರಣದ ಹಿನ್ನೆಲೆ: ಚಿತ್ರದುರ್ಗದ ಸಿದ್ದೇಶ್ವರ ಭೋವಿ ಸಮಾಜ ಗುರುಪೀಠದಲ್ಲಿ 2024ರ ಮಾರ್ಚ್‌ 23ರಂದು ಬೆಳಿಗ್ಗೆ 11 ಗಂಟೆಗೆ ನಡೆದಿದ್ದ ಕಾರ್ಯಕ್ರಮದಲ್ಲಿ ಸಂಸದ ರಾಘವೇಂದ್ರ ಭಾಗವಹಿಸಿದ್ದರು. ಈ ವೇಳೆ ಅವರು “ಒಂದು ರಾಜಕೀಯ ಪಕ್ಷವನ್ನು ಅಧಿಕಾರಕ್ಕೆ ತರಲು ಚುನಾವಣೆ ನಡೆಯುತ್ತಿಲ್ಲ. ಬದಲಿಗೆ ರಾಷ್ಟ್ರೀಯವಾದಿಗಳು ಮತ್ತು ರಾಷ್ಟ್ರ ವಿರೋಧಿಗಳ ನಡುವಿನ ಚುನಾವಣೆ ನಡೆಯುತ್ತಿದೆ” ಎಂದು ತಮ್ಮ ಭಾಷಣದಲ್ಲಿ ಹೇಳಿದ್ದರು ಎಂದು ವರದಿಯಾಗಿತ್ತು. ತದನಂತರದ ಸಂಸದರು ಮತದಾರರ ಮೇಲೆ ಪ್ರಭಾವ ಬೀರಲು ದ್ವೇಷ ಭಾಷಣ ಮಾಡುವ ಮೂಲಕ ಧಾರ್ಮಿಕ ಸ್ಥಳವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಸಭೆ ನಡೆಸಲು ಚುನಾವಣಾ ಆಯೋಗದಿಂದ ಪೂರ್ವಾನುಮತಿ ಪಡೆದಿಲ್ಲ. ಆ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಸಂಚಾರಿ ವಿಚಕ್ಷಣಾ ದಳದ ಅಧಿಕಾರಿ ಪಿ ಅವಿನಾಶ್ ಚಿತ್ರದುರ್ಗ ಗ್ರಾಮೀಣ ಠಾಣಾ ಪೊಲೀಸರಿಗೆ  ದೂರು ನೀಡಿದ್ದರು. ಇದನ್ನು ಪರಿಗಣಿಸಿದ್ದ ಪೊಲೀಸರು, ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.

Kannada Bar & Bench
kannada.barandbench.com